ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಭಾನುವಾರ, ಸೆಪ್ಟೆಂಬರ್ 7, 2008

ಅವಳಿಲ್ಲದ ಮನೆಯಲ್ಲಿ .....

ಒಂದು ವಿರಹ ಗೀತೆ....

ಅವಳಿಲ್ಲದ ಅಡುಗೆ ಮನೆಯಲ್ಲಿ
ಒಲೆಯ ಮೇಲಿನ ಹಾಲು
ಉಕ್ಕಿ-ಉಕ್ಕಿ
ಅಳುತ್ತಲಿದೆ.
ಅನ್ನ ಕೊತ-ಕೊತ ಕುದಿದು,
ಮನೆಯೊಡತಿಯ ಕರೆದು
ಸುಸ್ತಾಗಿ,ಮೆತ್ತಗಾಗಿ
ಪಾತ್ರೆಯ ತಳದಲ್ಲಿ ಮಲಗಿದೆ...

ತೊಳೆಯದ ಕೊಳೆ ಪಾತ್ರೆಗಳು
ಕಾಯುತ್ತ ಸಿಂಕಿನಲ್ಲಿ ಕುಳಿತಿದೆ ,
ತಮ್ಮನ್ನು ಫಳಫಳ
ಹೊಳೆಸುವವಳಿಗಾಗಿ....
ಉರಿಯುತ್ತಿರುವ ಬಲ್ಬು ,
ತಿರುಗುತ್ತಿರುವ ಫ್ಯಾನು
ಬೆಳಕ ಬಿಟ್ಟು ತಿರು-ತಿರುಗಿ
ಹುಡುಕುತ್ತಿವೆ
ಆರಿಸಿ-ಆದರಿಸುವವಳಿಗಾಗಿ....
ಇಸ್ತ್ರಿ ಕಾಣದ ಶರ್ಟು,
ಒಗೆತ ಕಾಣದ ಬಟ್ಟೆ,
ಮನೆ ತುಂಬಾ ಮೌನ
ಇಲ್ಲ ಹರಟೆ....
ಅಂಗಳದಿ ಅಳಿಸಿದ ರಂಗೋಲಿ,
ಹಳೆ ತಿಂಗಳ ಕ್ಯಾಲೆಂಡರು
ಹಾಗೇ ಇದೆ- ಹೇಳುತ್ತಲಿದೆ,
"ಕಾಲ ಮುಗಿಯಿತು
ನಾನಿನ್ನು ಹೊರಟೆ...."
ಒದತಿಯಿಲ್ಲದ ಮನೆ ತುಂಬ
ಕಸ-ಸಾಮ್ರಾಜ್ಯ ವಿಸ್ತರಿಸಿದೆ.
ಮನೆಯೊಡತಿಯ ಮುಡಿಯ
ಮಲ್ಲಿಗೆಯ ಘಮಲಿನ ಬದಲು
ಅಲ್ಲಿ ಮಲಿನತೆಯ ಅಮಲು ತುಂಬಿದೆ...
ಮನೆಯೊಡತಿ ಬಾರದೇ
ಟಿ.ವಿ. ಮಾತಾಡದೆ
ಮಂಕಾಗಿದೆ.
ಫ್ರಿಜ್ಜು ಬಾಗಿಲ ತೆರೆದು
ಕಾಯುತ್ತಲೇ ಇದೆ .
ತನ್ನ ನೋಡುವವರಿಲ್ಲದೆ
ರೂಮಿನೊಳಗಣ ದರ್ಪಣದ
ದರ್ಪ ಕಡಿಮೆಯಾಗಿದೆ...
ಒಗೆದು ಒಣಗಲು
ಹರಡಿದ್ದ ಸೀರೆ
ಮಳೆಯಲ್ಲೂ - ಮನೆ ಒಡತಿಯ
ನೆನೆಯುತ್ತಿದೆ...
ಹೆಜ್ಜೆಯ -ಗೆಜ್ಜೆಯ
ತಾಳವು ಇಲ್ಲದೇ
ಸಂಸಾರ ಸಂಗೀತ
ನೀರಸವಾಗಿದೆ....
ಬೇಸರವಾಗಿದೆ......!