ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಬುಧವಾರ, ನವೆಂಬರ್ 30, 2011

ಅನೈತಿಕತೆ ಮತ್ತು ಉಳಿವಿಗಾಗಿ ಹೋರಾಟ…


ಕಳೆದ ಗುರುವಾರ ತಮ್ಮ ವಿಜ್ನಾನ-ವಿಶೇಷ ಅಂಕಣದಲ್ಲಿ ನಾಗೇಶ ಹೆಗಡೆ ಅವರು ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸುತ್ತಾ

ಸಸ್ಯ-ಪ್ರಾಣಿಗಳೂ ‘ಅನೈತಿಕ’ ಕೆಲಸ ಮಾಡುತ್ತವೆ ಎಂದಿದ್ದರು.”ನಮ್ಮ ಭ್ರಷ್ಟರೇನಾದರೂ ಇದನ್ನೋದಿದರೆ ತಮ್ಮ ಕೆಲಸ ಪ್ರಕೃತಿ ಸಹಜ ಎಂದು ಸಮರ್ಥಿಸಿಕೊಂಡಾರು!” ಎಂದವರಿಗೆ ಮೆಸೇಜಿಸಿದ್ದೆ. Yes! You are right about political animals! ಎಂದರು ನಾಗೇಶ ಹೆಗಡೆ…
ಹೋಗಲಿ ಬಿಡಿ.ಹಾಳು ರಾಜಕೀಯದ ಕಥೆ ನಮಗ್ಯಾಕೆ? ಆದರೆ ಈ ಪಾಪದ ಸಸ್ಯ-ಪ್ರಾಣಿಗಳು ಅಂಥಾ ‘ಅನೈತಿಕ ಕೆಲಸ’ ಏನು ಮಾಡಿಯಾವು? ಪ್ರಾಣಿಗಳಾದರೋ ಕದ್ದು ಕೂತು, ಬೇಟೆ ಆಡಿ ಹಿಂಸಿಸಿ ಕೊಂದು ತಿಂದು ಮಾಡುತ್ತವೆ, ಆದರೆ ಈ ಸಸ್ಯಗಳು? ಅವೆಂಥಾ ಸುಳ್ಳು, ಮೋಸ ಧಗಾ ವಂಚನೆ ಮಾಡಲು ಸಾಧ್ಯ..?!
“ನಿಜಕ್ಕೂ ಸಸ್ಯಗಳು ಸದಾ ಯುದ್ದ ಸನ್ನದ್ದವಾದ ಸೈನಿಕರು.ಕೆಲವೊಮ್ಮೆ ಸಾಮೂಹಿಕ ಹತ್ಯಾ ಶಸ್ತ್ರಾಸ್ತ್ರ, ಜೊತೆಗೆ ಗೂಂಡಾ ಪಡೆ ಇಟ್ಟುಕೊಂಡ ಕ್ರೂರ ಭಯೋತ್ಪಾದಕರೂ ಆಗಿರಬಹುದು.ಇಲ್ಲವೇ ಸಿನಿಮೀಯ ರೀತಿಯಲ್ಲಿ ಲೂಟಿಮಾಡುವ ಹೈಟೆಕ್ ಕಳ್ಳರಿರಬಹುದು” ಅಂತಾರೆ ಸಸ್ಯಗಲ ವರ್ತನೆ ಬಗ್ಗೆ ಅಧ್ಯಯನ ಮಾಡಿರುವ ಪೀಟರ್ ಸ್ಕಾಟ್!
ಸಾಮಾನ್ಯವಾಗಿ ಗಿಡಗಳು ತಯಾರಿಸಿದ್ದರಲ್ಲಿ(ಎಲೆ ಹಣ್ಣು ಇತ್ಯಾದಿ) ಶೇಕಡಾ 18ರಷ್ಟು ಪ್ರಾಣಿಗಳ ಪಾಲಾಗುತ್ತವೆ. ಅದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಕೀಟಗಳೇ ತಿಂದು ತೇಗುತ್ತವೆ. ತಮ್ಮತ್ತ ಬಂದ ಆಕ್ರಮಣಕಾರರಿಂದ ಓಡಿ ತಪ್ಪಿಸಿಕೊಳ್ಳಲಂತೂ ಅವಕ್ಕೆ ಆಗುವುದಿಲ್ಲವಲ್ಲ, ಹೀಗಾಗಿ ಅವಕ್ಕೆ ಇಂತಹಾ ಪ್ರಕೃತಿ ದತ್ತ ಶಕ್ತಿ ಅನಿವಾರ್ಯ.
ಭಕ್ಷಕಗಳಿಂದ ರಕ್ಷಿಸಿಕೊಳ್ಲಲು ಪ್ರತಿಯೊಂದು ಜಾತಿಯ ಸಸ್ಯವೂ ಹಲವು ರೀತಿಯ ಸಂರಕ್ಷಣಾ ವ್ಯವಸ್ತೆ ಹೊಂದಿರುತ್ತದೆ.ಅದು ನೇರಾನೇರ ಚುಚ್ಚುವುದು ಇರಬಹುದು ಅಥವಾ ಎಲೆಗಳ ಮೂಲಕ ವಿಶವುಣಿಸುವುದಿರಬಹುದು!ಕಾಂಡ,ರೆಂಬೆ,ಎಲೆಗಳ ಮೇಲೆ ಮುಳ್ಳುಗಳಿರುವುದು ಮೊದಲ ರೀತಿಯದು.ತಿನ್ನಲು ಬಾಯಿ ಹಾಕಿದ ಪ್ರಾಣಿಯ ಬಾಯಿತುಂಬಾ ತೂತುಗಳು! ಒಮ್ಮೆ ಚುಚ್ಚಿಸಿಕೊಂದರೆ ಮತ್ತೊಮ್ಮೆ ಹತ್ತಿರವೂ ಬರಲಿಕ್ಕಿಲ್ಲ. ಕೆಲ ಹುಲ್ಲುಗಳಂತೂ ಎಲೆಗಳಿಗೆ ಸಿಲಿಕೇಟ್ ಲೇಪಿಸಿಕೊಂಡು ಚೂಪಾದ ಬ್ಲೇಡಿನ ರೀತಿ ಇರುತ್ತವೆ.ತಾಗಿಸಿಕೊಂಡರೆ ಚರ್ಮ ತೂತಾಗುವುದು ಗ್ಯಾರಂಟಿ!
ತುರಿಕೆ ಗಿಡ(ಅಥವಾ ತುರ್ಚೆ ಗಿಡ/Poison Ivy)ದ್ದು ಇನ್ನೊಂದು ರೀತಿ.ಅದು ತನ್ನೆಲೆಗಳ ಮೇಲೆಲ್ಲಾ Urushiol ಎನ್ನುವ ಎಣ್ಣೆಯನ್ನು ಲೇಪಿಸಿಕೊಂಡಿರುತ್ತದೆ.ನೀವೇನಾದರೂ ಅದರ ಎಲೆ ಮುಟ್ಟಿದರೆ ಈ ಎಣ್ಣೆ ನಿಮ್ಮ ಸ್ಪರ್ಶ ಜ್ನಾನದ ದಿಕ್ಕು ತಪ್ಪಿಸಿ ಸುಳ್ಳುಸುಳ್ಳೇ ತುರಿಕೆ ಅಗುವಹಾಗೆ ಮಾಡುತ್ತದೆ.ವೆನಿಲ್ಲ ಗಿಡದ್ದೂ ಇದೇ ಕಥೆ.
ಇನ್ನು ಇದ್ದಿದ್ದೆಲ್ಲಾ ನನಗೇ ಬೇಕು ಎನ್ನುವ ಸಸ್ಯಗಳಿಗೇನೂ ಕಮ್ಮಿಯಿಲ್ಲ.ನೀಲಗಿರಿಯಂತಹ ಮರಗಳು ತಮ್ಮ ಸುತ್ತಮುತ್ತ ಸಾಮಾನ್ಯವಾಗಿ ಯಾವ ಗಿಡಗಳನ್ನೂ ಬೆಳೆಯಲು ಬಿಡುವುದಿಲ್ಲ.ಗಾಳಿ.ನೀರು,ಮಣ್ಣು ಎಲ್ಲೆಡೆ ವಿಷ ಹಬ್ಬಿಸಿ, ಬೇರೆ ಬೀಜಗಳು ಮೊಳಕೆಯೊಡೆಯುವುದನ್ನೂ ತಪ್ಪಿಸಿ, ಅಷ್ಟೂ ಪೋಷಕಾಂಶಗಳನ್ನು ತಾವೇ ಹೀರುತ್ತವೆ, ನಮ್ಮ ರಾಜಕಾರಣಿಗಳಂತೆ!
ಇನ್ನು ವಂಚನೆಯ ವಿಷಯಕ್ಕೆ ಬರೋಣ.ಕೆಲವು ಗಿಡಗಳು ತಮ್ಮೆಲೆಗಳ ಮೇಲೆ ಕಪ್ಪು ಚುಕ್ಕಿಗಳನ್ನು ಬೇಕಂತಲೇ ಮೂಡಿಸಿಕೊಳ್ಳುತ್ತವೆ. ಪ್ರಾಣಿಗಳು ಇದನ್ನು ದೂರದಿಂದಲೇ ನೋಡಿ,ಇರುವೆ ಇರಬಹುದೆಂದು ಭಾವಿಸಿ ಕಚ್ಚಿಸಿಕೊಳ್ಳುವ ಭಯದಿಂದ ಪಲಾಯನಗೈಯುತ್ತವೆ!
ಗೂಂಡಾಗಿರಿ?! ಅದೂ ಇದೆ! ಈವರೆಗೆ ಗುರುತಿಸಲಾದ 1000ಕ್ಕೂ ಹೆಚ್ಚು ಸಸ್ಯಗಳು ಇರುವೆಗಳೂ ಸೇರಿದಂತೆ ಹಲವಾರು ಕೀಟಗಳನ್ನು ತಮ್ಮ ರಕ್ಷಣೆಗೆಂದು ಸಾಕಿಕೊಳ್ಳುತ್ತವೆ.ಇವು ಒಂದಿಷ್ಟು ಸಿಹಿ ಮಕರಂದ ಹೀರಿ ನಿಯತ್ತಾಗಿ ಗಿಡಗಳ ಸೇವೆ ಮಾಡುತ್ತವೆ. ಎಲೆ ತಿನ್ನಲು ಬರುವ ಪ್ರಾಣಿಗಳಿಗೆ ಕಚ್ಚಿ-ಚುಚ್ಚಿ ತಮ್ಮ ಸ್ವಾಮಿನಿಷ್ಟೆ ತೋರಿಸುತ್ತವೆ.ಆಫ್ರಿಕಾದ ಒಂದು ಜಾತಿಯ ಅಕೇಶಿಯಾದಲ್ಲಿ ಗೂಡು ಕಟ್ಟುವ ಕೆಲ ಇರುವೆಗಳಂತೂ “ಎಲೆಯೂಟ” ಮಾಡಲು ಬರುವ ಜಿರಾಫೆಯೇ ಎದ್ದು-ಬಿದ್ದು ಓಡುವಂತೆ ಕಚ್ಚುತ್ತವಂತೆ!!

ಇನ್ನು ಗಿಲೀಟು ತೋರಿಸಿ, ಸುವಾಸನೆ ಪಸರಿಸಿ, ಕೀಟಗಳ ದಿಕ್ಕು ತಪ್ಪಿಸಿ ಮೋಸದಿಂದ ಎಲೆಯೊಳಗೆ ಜಾರಿಸಿ ಜೀರ್ಣಮಾಡಿಕೊಳ್ಳುವ ಕೀಟಾಹಾರಿ ಸಸ್ಯಗಳ ಬಗ್ಗೆ ನಿಮಗೆ ಗೊತ್ತಿರಬಹುದು…
“ಇವೆಲ್ಲ ಜೀವಿಗಳು ತಮ್ಮ ಉಳಿವಿಗಾಗಿ ನಡೆಸುವ ಹೋರಾಟ” ಎಂದ ಡಾರ್ವಿನ್.ಅದು ನೈತಿಕವೋ ಅನೈತಿಕವೋ ಎಂಬ ನಿರ್ಧಾರ ನಿಮಗೇ ಬಿಟ್ಟಿದ್ದು! ಇಷ್ಟಕ್ಕೂ ನೈತಿಕ ಅನೈತಿಕತೆಗಳ ನಡುವಿನ ಗೆರೆ ಎಲ್ಲಿದೆ?!
(ನೆನಪಿರಲಿ: ಆಗ ಸ್ವಾತಂತ್ರಕ್ಕಾಗಿ ಹೋರಾಡಿದವರೆಲ್ಲಾ ಬ್ರಿಟೀಷರ ಕಣ್ಣಲ್ಲಿ ರಾಜ ದ್ರೋಹಿಗಳು. ಆದರೆ ನಮಗೀಗ ಅವರು ದೇಶಭಕ್ತರು.ಕಾಶ್ಮೀರಕ್ಕೇನಾದರೂ ಸ್ವಾತಂತ್ಯ ಸಿಕ್ಕರೆ ಈಗಿನ ಭಯೋತ್ಪಾದಕರೆಲ್ಲಾ ಕಾಶ್ಮೀರದ ರಾಷ್ಟ್ರಭಕ್ತರೆನಿಸಿಕೊಳ್ಳುತ್ತಾರೆ!)

ಶುಕ್ರವಾರ, ಆಗಸ್ಟ್ 26, 2011

ಕುವೆಂಪು ಕಾಡಿಂದ ಬೇಂದ್ರೆ ಕೇರಿಗೆ...!


ಓದುಗರೆಲ್ಲರಿಗೂ ನಮಸ್ಕಾರ...

ಈ ಬದುಕೇ ಹೀಗೇ ಏನೋ..
ಅಂದುಕೊಂಡಿದ್ದು ಇನ್ನೇನೋ ಆಗಿಬಿಡುತ್ತದೆ, ಕನಸಿಗೆ ಬ್ರೇಕ್ ಹಾಕಿ ಧುತ್ತೆಂದು ಕಟುವಾಸ್ತವಗಳನ್ನೆಲ್ಲಾ ಎದುರಿಗೆ ತಂದು ನಿಲ್ಲಿಸುತ್ತದೆ, ಒಮ್ಮೊಮ್ಮೆ ಅಚ್ಚರಿಯ ಅಂಚಿಗೆ ದೂಡುತ್ತದೆ, ಅಸಂಗತಗಳನ್ನೆಲ್ಲಾ ಅಡ್ಡ ತಂದು ಆಗಾಗ ಕಾಡುತ್ತದೆ, ಹೀಗೆ ಏನೇನೋ...!

ಅಷ್ಟಕ್ಕೂ ನಾನು ಧಾರವಾಡದಂತಹ ಧಾರವಾಡಕ್ಕೆ ಬಂದು ಬದುಕುತ್ತೆನೆಂದು  ಕನಸಲ್ಲೂ ಯೋಚಿಸಿರಲಿಲ್ಲ.ಅಂಥ ಯಾವ ಆಸೆಯು ನನಗಿರಲಿಲ್ಲ. ತೀರಾತೀರ ಮಲೆನಾಡಿನ ಮಧ್ಯದ ಊರಿಂದ ಬಂದ ನನಗೆ ಹಾಗೆ ಯೋಚಿಸುವುದರ ಅಗತ್ಯವೂ ಇರಲಿಲ್ಲ. ಆದರು...

ಏನೇನೋ ಆಗಿ ಕೊನೆಗೂ ಗಟ್ಟಿ ನಿರ್ಧಾರ ಮಾಡಿ, ಬೆಂಗಳೂರನ್ನು ಬದಿಗೊತ್ತಿ, ಧಾರವಾಡಕ್ಕೆ ಬಂದು ಕುಳಿತಿದ್ದೇನೆ.ಅದ್ಯಾವ ಗಳಿಗೆಯಲ್ಲಿ  ಧಾರವಾಡ ಬಂದು ನನ್ನೊಳಗೆ ಕುಳಿತಿತೋ ಗೊತ್ತಿಲ್ಲ...


ಇಷ್ಟಕ್ಕೂ ನನಗೂ ಒಂದು ಬದಲಾವಣೆ ಬೇಕಿತ್ತು.ಎಲ್ಲರಿಗೂ ಮಹಾನಗರಿ ಬೆರಗು ಹುಟ್ಟಿಸಿದರೆ ನನಗೆ ಒಂದೇ  ವರ್ಷದಲ್ಲಿ ಬೋರು ಹೊಡೆಸತೊಡಗಿತ್ತು.ಮುಖವಾಡ ಹೊತ್ತು ಬದುಕುವುದು ಸಾಕುಸಾಕಾಗಿತ್ತು. ಹೀಗಾಗಿ ಧಾರವಾಡ ಬಳಿಯ ಈ ಹಳ್ಳಿಯ ಕಾಲೇಜಿಗೆ ಬರಬೇಕಾಯ್ತು...

ಅಂದ  ಹಾಗೆ ಧಾರವಾಡಕ್ಕೆ ವಿಶ್ರಾಂತಿತಾಣ ಅಂತಲೂ ಅರ್ಥ ಇದೆ ಅನ್ನುತ್ತೆ ವಿಕಿಪೇಡಿಯಾ.ಬಯಲುನಾಡಿಂದ ಮಲೆನಾಡ ಸೆರಗಿಗೆ ಹೆಬ್ಬಾಗಿಲ ಹಾಗಿದೆ ಈ ಊರು! ಜೊತೆಗೆ ಪೇಡದ ಸವಿ ಬೇರೆ..!

"ಬೆಂಗಳೂರಂಥಾ ಬೆಂಗಳೂರು ಬಿಟ್ಟು ಧಾರವಾಡಕ್ಕೆ ಯಾಕೆ ಹೋಗ್ತಿ?" ಅಂತ ಮೂಗು ಮುರಿದು ಪ್ರಶ್ನಿಸಿದವರೇ ಹೆಚ್ಚು.ಆದರೆ ಅವರಿಗೆ ನನ್ನೊಳಗಿನ ತಳಮಳಗಳನ್ನೆಲ್ಲಾ ಹೇಗೆ ಹೇಳಲಿ ಹೇಳಿ? "ಅಲ್ಲಿ ಜನಾ ತುಂಬಾ ಒರಟಂತೆ" ಅಂತ ಹೇಳಿದವರಿಗೇನು ಕಮ್ಮಿಯಿಲ್ಲ. ಆದರೆ 'ಅತ್ತಾರೆ ಅತ್ತುಬಿಡು ಹೊನಲು ಬರಲಿ' ಅಂತ ಭಾವುಕರಾಗಿ ಹಾಡಿದ ಕವಿ ಇಲ್ಲಿಯವರೇ ಅಂತ ಅವರಿಗೆ ಹೇಗೆ ಹೇಳಲಿ?!


ಒಟ್ಟಿನಲ್ಲಿ ಕುವೆಂಪು ಕಾಡಿಂದ ಬೇಂದ್ರೆ ಕೇರಿಗೆ ಬಂದು ಕುಳಿತಿದ್ದೇನೆ! ಬೇಂದ್ರೆಯಷ್ಟೇ ಅಲ್ಲ, ಗೋಕಾಕ್, ಕಾರ್ನಾಡರ ಮೂಲ ಬೇರೂ ಇಲ್ಲೇ ಇದೆ. ಸಾಹಿತಿಗಳಷ್ಟೇ ಅಲ್ಲ.... ಅಂತ ವಿಕಿಪೀಡಿಯಾ ಖ್ಯಾತ ಧಾರವಾಡಿಗರ ಉದ್ದ ಪಟ್ಟಿಯನ್ನೇ ಹಾಕಿದೆ.

ಈ ನಡುವೆ ನನ್ನ ಬ್ಲಾಗು ಬಾಗಿಲು ಹಾಕಿಕೊಂದು ಕೂತುಬಿಟ್ಟಿತ್ತು. ಶುರುಮಾಡಿ ವರ್ಷಗಳೇ ಕಳೆದರೂ ಬೆರಳೆಣಿಕೆಯಷ್ಟೇ ಬರಹಗಳು ಇಲ್ಲಿವೆ. ಅವೋ ಓಬೀರಾಯನ ಕಾಲದ್ದು.ಆಮೇಲೆ ನಾನೂ ಸಾಕಷ್ಟು ಬೆಳೆದಿದ್ದೇನೆ,ಬಲಿತಿದ್ದೇನೆ,ಬರೆದಿದ್ದೇನೆ.ಆದರೂ ಯಾಕೆ ಬ್ಲಾಗ್ ಅಪ್ ಡೇಟ್ ಮಾಡಲಿಲ್ಲ..?

ಬೆಂಗಳೂರು ಸೇರಿದ ಮೇಲೆ ಧಾವಂತ ಬದುಕಿಗೆ ಧಾಂಗುಡಿಯಿಟ್ಟಿತು. ಅದರಲ್ಲೂ ರಾಷ್ಟೀಯ ಜೀವ ವಿಜ್ಣಾನ ಕೇಂದ್ರದಲ್ಲಿ ಸಣ್ಣದೊಂದು ಸಂಶೋಧನೆಗೆ ಶುರುವಿಟ್ಟುಕೊಂಡ ಮೇಲಂತೂ .....ತುರಿಸಲೂ ಪುರುಸೊತ್ತಿರಲಿಲ್ಲ.ಬರೆಯದೇ ಇರಲಾರೆ ಎನಿಸಿ ಆಗೀಗ ಬರೆದಿದ್ದು ಪುಸ್ತಕದಲ್ಲೇ ಉಳಿದುಹೋಯಿತೇ ವಿನಹ ಬ್ಲಾಗಿನವರೆಗೆ ಬರಲಿಲ್ಲ.ಟೈಪುಕುಟ್ಟುವ ವಿಚಾರದಲ್ಲಂತೂ ನಾನು ಶುದ್ದ ಸೋಮಾರಿ!


ಈಗ ಧಾರಾನಗರಿಯ ಬಳಿಯ ಪುಟ್ಟ ಊರಿನ ಹಾಸ್ಟೆಲಿಗೆ ಸೇರಿಕಂಡಿದ್ದೇನೆ.ಇನ್ನಾದರೂ ಕಂಡಿದ್ದು, ಓದಿದ್ದನ್ನು ನಿಮ್ಮೊಡನೆ ಹಂಚಿಕೊಳ್ಳಬೇಕಿದೆ.

ಸದ್ಯಕ್ಕೆ ಒಂದಿಷ್ಟು ಪುಸ್ತಕ ಗುಡ್ಡೆ ಹಾಕಿಕಂಡು ಕೂತಿದ್ದೇನೆ. I Too Had A Dream ಅನ್ನೋದನ್ನ ಈಗಾಗಲೇ ಓದಿ ಮುಗಿಸಿದ್ದೇನೆ.ಕಳೆದ ವರ್ಷ ಗುಜರಾತಿನ ಆನಂದ್ ಗೆ ಹೋದಾಗ ಕೊಂಡ ಹಾಲು ಕ್ರಾಂತಿಯ ಹರಿಕಾರನ ಆತ್ಮಕಥೆಯಿದು. ಕನ್ನಡಕ್ಕೆ ಇದನ್ನು ಯಾರಾದರೂ ಅನುವಾದಿಸಿದ್ದರೋ ಇಲ್ಲವೋ ಗೊತ್ತಿಲ್ಲ. ನಾನಂತೂ ಒಂದಿಷ್ಟನ್ನು ಕನ್ನಡೀಕರಿಸಿ ಇಟ್ಟಿದ್ದೇನೆ. ತುಂಬಾ ಕುತೂಹಲಕಾರಿ ಪುಸ್ತಕ.ಮುಂದೊಂಮ್ಮೆ ವಿವರವಾಗಿ ಬರೆಯುವೆ.

ಇನ್ನುಳಿದವು ನನ್ನ ಓದು ವಿಜ್ನಾನ ಸಂಶೋಧನೆಗೆ ಪರೋಕ್ಷವಾಗಿ ಸಂಭಂಧಿಸಿದವು. Costs and benefits of transgenic crops -ಕುಲಾಂತರಿಗಳ ನಿಜ ಹಣೆಬರಹ ಇದರಲ್ಲಿದೆ.A doble image of double helix ಇಂಥದ್ದೇ ಇನ್ನಂದು ಪುಸ್ತಕ. Agriculture's ethical horizon ಅನ್ನೋ ಕೃಷಿಯ ಇತಿಮಿತಿಗಳ ಬಗೆಗಿನ ಪುಸ್ತಕವೂ ಜೊತೆಗಿದೆ.

ಮತ್ತೊ0ದು Darwinism DEFENDED ಅಂತ. ಡಾರ್ವಿನ್ನನ ವಿಕಾಸವಾದವನ್ನು ಒರೆಗೆ ಹಚ್ಚುವ ಪುಸ್ತಕ.ಇದನ್ನು ಓದಲು ಪ್ರಾರಂಭಿಸುವ ಮೊದಲು ಮತ್ತೊಮ್ಮೆ 'ಕರ್ವಾಲೋ' ಅನ್ನು ಓದಿಕೊಂಡೆ.ಅಥವಾ ಕರ್ವಾಲೋದಿಂದಾಗಿಯೇ ಈ ಪುಸ್ತಕದ ಬಗ್ಗೆ ಕುತೂಹಲ ಹೆಚ್ಚಿದೆ!!

ಈ ಎಲ್ಲದರ ಬಗ್ಗೆ ನಿಮ್ಮೊಡನೆ ಹಂಚಿಕೊಳ್ಳಬೇಕಿದೆ.ಆದರೆ...ಅದು ನನ್ನ ಪುಸ್ತಕ ದಾಟಿ ಬ್ಲಾಗಿನ ಬಾಗಿಲು ಬಡಿದು ಇಲ್ಲಿ ಸೇರಿಕೊಳ್ಳುತ್ತಾ...?

ಗೊತ್ತಿಲ್ಲ!

(ಕೊನೆಗೊಂದು ಮಾತು: ಅಕಾಡೆಮಿಕ್ ವಲಯದ ಹೊರಗಿನವರಿಗೆ ಇಂತಹ ಪುಸ್ತಕಗಳು ಸುಲಭಕ್ಕೆ ಸಿಗಲಿಕ್ಕಿಲ್ಲ.ಓದಲು ಆಸಕ್ತಿಯಿದ್ದರೆ ಹೇಳಿ,ಪ್ರತಿಯೊಂದನ್ನು ಕಳಿಸಿಕೊಡುವೆ..)