ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಶನಿವಾರ, ನವೆಂಬರ್ 13, 2021

ಗೋದಾವರಿಯಾಚೆಗಿನ ಕನ್ನಡ

“ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್

ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ

ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ

ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್”

ರಾಷ್ಟ್ರಕೂಟರ ದೊರೆ ಅಮೋಘವರ್ಷ ನೃಪತುಂಗನ ಕಾಲದಲ್ಲಿ(ಕ್ರಿ.ಶ. 814–878) ಕನ್ನಡ ನಾಡು ಕಾವೇರಿಯಿಂದ ಗೋದಾವರಿಯವರೆಗೆ ವಿಸ್ತರಿಸಿತ್ತೆಂದು ಅವನ ಆಸ್ಥಾನಕವಿ ಶ್ರೀವಿಜಯ ಬರೆದಿದ್ದಾನಷ್ಟೇ? ‘ಕವಿರಾಜಮಾರ್ಗ’ ಬರೆದ ಕೆಲವು ದಶಕಗಳ ಬಳಿಕ ನೃಪತುಂಗನ ವಂಶಸ್ಥ ಮುಮ್ಮಡಿ ಕೃಷ್ಣನೆಂಬ ಕನ್ನಡದ ದೊರೆಯು ತನ್ನ ರಾಜ್ಯದ ಗಡಿಯನ್ನು ಇನ್ನಷ್ಟು ಉತ್ತರಕ್ಕೆ ವಿಸ್ತರಿಸಿ, ವಿಂಧ್ಯ ಪರ್ವತದ ತಪ್ಪಲಿನ ನರ್ಮದೆಯವರೆಗೂ ಕೊಂಡೊಯ್ದಿದ್ದನೆಂದು ನಿಮಗೆ ಗೊತ್ತೇ?
ಸರಿಸುಮಾರು ನೂರು ವರ್ಷಗಳ ಹಿಂದಿನ ಕತೆ. ಮೈಹರ್ ಸಂಸ್ಥಾನವೆಂಬುದು ಈಗಿನ ಮಧ್ಯಪ್ರದೇಶದ ಉತ್ತರ ಭಾಗದಲ್ಲಿದ್ದ ಒಂದು ಪುಟ್ಟ ರಾಜ್ಯ. ವಿಸ್ತೀರ್ಣದಲ್ಲಿ ನಮ್ಮ ಹುಬ್ಬಳ್ಳಿಗಿಂತ ಹೆಚ್ಚಿಲ್ಲದ ಸಂಸ್ಥಾನ. ಹಿಂದೊಮ್ಮೆ ಥಾಕೂರರು ಆಳಿದ್ದ ಈ ರಾಜ್ಯವನ್ನು ಬ್ರಿಟಿಷರ ಹಸ್ತಕ್ಷೇಪದಿಂದಾಗಿ ರಜಪೂತರಿಗೆ ಹಸ್ತಾತರಿಸಲಾಗಿತ್ತು. ಮಹಾರಾಜ ಬ್ರಿಜ್ ನಾಥ ಸಿಂಗ್ ಜುದೇವನೆಂಬ ದೊರೆ ಆಳುತ್ತಿದ್ದ ಕಾಲ. ಹಿಂದೂಸ್ತಾನಿ ಸಂಗೀತ ಪ್ರಿಯರಿಗೆ ಮೈಹರ್ ಘರಾಣೆಯ ಪರಿಚಯವಿದ್ದೀತು. ಅದನ್ನು ಪ್ರಾರಂಭಿಸಿದ ಬಾಬಾ ಅಲ್ಲಾವುದ್ದೀನ್ ಖಾನ್ ಈ ಸಂಸ್ಥಾನದ ರಾಜಾಶ್ರಯದಲ್ಲಿದ್ದ ಸಂಗೀತಗಾರ.ಇವರ ಶಿಷ್ಯಂದಿರಾದ (ಅಳಿಯ, ಸಿತಾರ್ ಕಲಾವಿದ) ಪಂಡಿತ್ ರವಿಶಂಕರ್, ಹಾಗೂ (ಮಗ, ಸರೋದ್ ಕಲಾವಿದ) ಪಂಡಿತ್ ಅಲಿ ಅಕ್ಬರ್ ಖಾನ್, ವಿದುಷಿ ಅನ್ನಪೂರ್ಣಾದೇವಿ (ಮಗಳು, ಸುರ್ ಬಹಾರ್), ಪಂಡಿತ್ ನಿಖಿಲ್ ಬ್ಯಾನರ್ಜಿ (ಸಿತಾರ್), ಪಂಡಿತ್ ಪನ್ನಾಲಾಲ್ ಘೋಷ್ (ಬಾನ್ಸುರಿ), ಪಂಡಿತ್ ರಾಜೀವ್ ತಾರಾನಾಥ (ಸರೋದ್) ಮೊದಲಾದ ಮಹನೀಯರು ಮೈಹರದ ಹೆಸರನ್ನು ಸಂಗೀತದ ಮೂಲಕ ಚಿರಸ್ಥಾಯಿಯಾಗಿಸಿದ್ದಾರೆ.
ಮಹಾರಾಜ ಬ್ರಿಜ್ ನಾಥ ಸಿಂಗ್ ಜುದೇವನ ಆಸ್ಥಾನದ ದಿವಾನನು ಒಮ್ಮೆ ಮೈಹರದಿಂದ ಹನ್ನೆರೆಡು ಮೈಲಿಗಳಷ್ಟು ದೂರದಲ್ಲಿ, ಜೂರಾ ಎಂಬ ಪುಟ್ಟ ಹಳ್ಳಿಯಲ್ಲಿದ್ದ ಮಿತ್ರರ ಬಂಗಲೆಗೆ ಹೋಗಿದ್ದ. ಪಾಳುಬಿದ್ದ ಥಾಕೂರರ ಕೋಟೆಯ ಆವರಣದಲ್ಲಿ ಹೊಸದಾಗಿ ಕಟ್ಟಿದ್ದ ಆ ಬಂಗಲೆಯ ಬಾಗಿಲುವಾಡದ ಮೇಲಿನ ಹಾಸುಗಲ್ಲಿನಲ್ಲಿ ಅಪರಿಚಿತ ಅಕ್ಷರಗಳಂಥಹ ಚಿತ್ತಾರ ದಿವಾನನ ಗಮನ ಸೆಳೆಯಿತು. ಬಂಗಲೆ ಕಟ್ಟಿದವನಿಗೆ ಅದರ ಮಹತ್ತು ಗೊತ್ತಿಲ್ಲ, ಚಂದದ ಚಪ್ಪಟೆಕಲ್ಲು ಕೋಟೆಯ ಆವರಣದಲ್ಲಿ ಸಿಕ್ಕಿತೆಂದು ತಂದು ಗೋಡೆಗೇರಿಸಿದ್ದನಷ್ಟೇ. ದಿವಾನನಿಗೆ ಕುತೂಹಲ ಹೆಚ್ಚಾಯಿತು. ಬ್ರಿಟಿಷರಿಗೆ ಇಂಥದರಲ್ಲಿ ಆಸಕ್ತಿಯಿದೆಯೆಂದು ಬಲ್ಲ ದಿವಾನ ಕೂಡಲೇ ಪುರಾತತ್ವ ಇಲಾಖೆಯವರಿಗೆ ಸುದ್ದಿ ಮುಟ್ಟಿಸಿದ.
ಆಗ ಪುರಾತತ್ವ ಇಲಾಖೆಯ ಪಶ್ಚಿಮ ವಿಭಾಗದ ಮುಖ್ಯಸ್ಥರಾಗಿದ್ದವರು ರಾಖಲದಾಸ್ ಬಂಡೋಪಾಧ್ಯಾಯ, ಬ್ರಿಟಿಷರ ಬಾಯಲ್ಲಿ ಚುಟುಕಾಗಿ ಆರ್. ಡಿ. ಬ್ಯಾನರ್ಜಿ. ಸಿಂಧೂ ತಟದ ನಾಗರೀಕತೆಯ ಮೊಹೆಂಜೋದಾರೋವನ್ನು ಮತ್ತೆ ಬೆಳಕಿಗೆ ತಂದ ಮಹನೀಯರು ಇವರು. ಅಪ್ರತಿಮ ಇತಿಹಾಸಕಾರ ಬಂಡೋಪಾಧ್ಯಾಯರು ಪ್ರಸಿದ್ಧ ಬಂಗಾಳಿ ಸಾಹಿತಿಯೂ ಆಗಿದ್ದರು. ಮೈಹರದ ದಿವಾನನ ಮಾತು ಕೇಳಿ ಅವರು ಜೂರಾ ಹಳ್ಳಿಗೆ ಹೋಗಿ ನೋಡಿದರು. ಕಲ್ಲಿನ ಮೇಲಿನ ಹಳೆಯ ಶಾಸನದ ಅಕ್ಷರಗಳು ಅವರಿಗೂ ಅಪರಿಚಿತ. ಶಾಸನದ ಅಚ್ಚುಕಟ್ಟಾದ ಇಂಕಿನ ಪ್ರತಿ ತೆಗೆದು ಅದನ್ನು ತಮ್ಮ ಸಹೋದ್ಯೋಗಿ ಕೃಷ್ಣಶಾಸ್ತ್ರಿಗಳಿಗೆ ಕಳುಹಿಸಿದರು.
ರಾವ್ ಬಹಾದ್ದೂರ್ ಬಿರುದಾಂಕಿತರಾಗಿದ್ದ ಕೃಷ್ಣಶಾಸ್ತ್ರಿಗಳು ಹೊಸಕೋಟೆಯಲ್ಲಿ ಹುಟ್ಟಿದವರು. ಎಪಿಗ್ರಾಫಿಯ ಇಂಡಿಕಾದ ಹಲವು ಸಂಪುಟಗಳನ್ನು ಸಂಪಾದಿಸಿದ ಮಹತ್ವದ ಶಾಸನತಜ್ಞರು. ಬಂಡೋಪಾಧ್ಯಾಯಯರು ಕಳುಹಿಸಿದ್ದ ಚಿತ್ರಗಳನ್ನು ನೋಡಿದಾಕ್ಷಣ ಅದು ಹಳೆಗನ್ನಡದ ಲಿಪಿಯೆಂದು ಅವರಿಗೆ ಸ್ಪಷ್ಟವಾಯ್ತು. ದೂರದ ಮಧ್ಯಪ್ರದೇಶದಲ್ಲಿ ಅಚ್ಚಗನ್ನಡದ ಶಾಸನ! ಕೃಷ್ಣಶಾಸ್ತ್ರಿಗಳು ಶಾಸನದ ವಿವರಗಳನ್ನು ಓದಿ ದಾಖಲಿಸಿ ಅದನ್ನು ತಮ್ಮ ಶಿಷ್ಯ ತಿರುಮಲೆ ತಾತಾಚಾರ್ಯ ಶರ್ಮರಿಗೆ ಕಳುಹಿಸಿದರು. ತಿ.ತಾ.ಶರ್ಮರು ಅದನ್ನು ಇನ್ನಷ್ಟು ಪರಿಷ್ಕರಿಸಿ ಮಿಥಿಕ್ ಸೊಸೈಟಿಯ ಪತ್ರಿಕೆಯಲ್ಲಿ ಪ್ರಕಟಣೆಗೆಂದು 1922ರಲ್ಲಿ ಕಳಿಸಿದರು. ಅದೇ ಸುಮಾರಿನಲ್ಲಿ ಪುರಾತತ್ವ ಇಲಾಖೆಯಲ್ಲಿದ್ದ ಲಕ್ಷ್ಮೀನಾರಾಯಣ ರಾಯರೂ ಇನ್ನಷ್ಟು ಅಧ್ಯಯನ ಮಾಡಿ ಜೂರಾ ಶಾಸನದ ಬಗ್ಗೆ ಎಪಿಗ್ರಾಫಿಯಾ ಇಂಡಿಕಾದ ಸಂಪುಟವೊಂದರಲ್ಲಿ ಲೇಖನ ಬರೆದಿದ್ದಾರೆ.
ಹೀಗೆ ಶತಮಾನಗಳ ಹಿಂದೆ ಬಹುಶೃತ ವಿದ್ವಾಂಸರ ಕಣ್ಣಿಗೆ ಬಿದ್ದಿದ್ದ ಈ ಜೂರಾ ಶಾಸನ ಕನ್ನಾಡಿನ ದೊರೆಯೊಬ್ಬ ಗೋದಾವರಿಯಾಚೆಗೆ ರಾಜ್ಯ ಬೆಳೆಸಿದ್ದರ ಬಗ್ಗೆ ಮಹತ್ವದ ದಾಖಲೆಯಾಗಿದೆ. ವಿದ್ವಾಂಸರ ಪ್ರಕಾರ ಮಧ್ಯಪ್ರದೇಶದಲ್ಲಿ ದೊರೆತ ಈ ಕನ್ನಡ ಶಾಸನ 10ನೇ ಶತಮಾನದ ರಾಷ್ಟ್ರಕೂಟರ ಕಾಲದ್ದು. ಇದರಲ್ಲಿನ ಬರಹವು ಹಳೆಗನ್ನಡದ ಲಿಪಿಯಲ್ಲಿದೆ. ಸುಮಾರು ಐದು ಅಡಿಗಳಷ್ಟು ಎತ್ತರದ ಕಲ್ಲಿನ ಮೇಲಿನ ಬರಹವು ಕಂದಪದ್ಯ ಹಾಗೂ ಗದ್ಯಗಳ ಮಿಶ್ರಣ. ಕನ್ನರದೇವನೆಂಬ ದೊರೆಯನ್ನು, ಮಹಾ ಸಂಭಾವಿತನೆಂದೂ, ‘ಪರಾಂಗನಾ ಪುತ್ರ’ ಎಂಬ ಬಿರುದಾವಳಿಯೊಂದಿಗೆ ಹೊಗಳುವ ಶಾಸನ ಇದು.

ಸೋಲದೆ ಪರವನಿತೆಗೆ ಕಣ್
ಸೋಲದು ಮೊಲೆವಾಲನೂಡಿ ನಡಪಿದ ತಾಯಿಂ
ಮೇಲೆನೆ ಬಗೆಗುಂ ನೋಡಿರೆ
ಸೋಲದು ಚಿತ್ತಂ ಪರಾಂಗನಾಪುತ್ರಕನಾ
ನೋಡಿರೆ ಪರವಧುಗೆ ಮನಂ
ಕೂಡದು ಸೂೞ್ಸೂೞೊಳೆತ್ತಿ ನಡಪಿದ ತೋಳು
ಣ್ಡಾಡಿದ ಮೊಲೆ ಬಸಿಱೊಳಗಿ
ೞ್ದಾಡಿದ ಚಿತ್ತಂ ಪರಾಂಗನಾಪುತ್ರಕನಾ
ರಾಜನು ಪರಸ್ತ್ರೀಗೆ ಮನಸೋಲದವನಂತೆ. ಹಾಲೂಡಿಸಿದ ತಾಯಿಗಿಂತ ಹೆಚ್ಚಾಗಿ ಅವರನ್ನು ಗೌರವದಿಂದ ಕಾಣುತ್ತಿದ್ದನಂತೆ. ಪರಸ್ತ್ರೀಯರನ್ನು ಕಂಡಾಕ್ಷಣ ಅವನಿಗೆ ತನ್ನ ತಾಯಗರ್ಭದಲ್ಲಿ ಮಗುವಾಗಿದ್ದಂತಹ ಬೆಚ್ಚಗಿನ ಭಾವ ಮೂಡುತ್ತಿತ್ತಂತೆ! ಕೊನೆಯಲ್ಲಿ ‘ಉಬ್ಬಿಕಾಮೈಸೆಟ್ಟಿ’ಯ ತಮ್ಮ ‘ತುಯ್ಯಲ ಚನ್ದಯ್ಯ’ನೆಂಬಾತ ಈ ಪ್ರಶಸ್ತಿಯನ್ನು ಬರೆಯಿಸಿದನೆಂದೂ, ಚಿಮ್ಮಯ್ಯನೆಂಬಾತ ಬರೆದನೆಂದೂ ಈ ಶಾಸನ ಹೇಳುತ್ತದೆ.
ವಿದ್ವಾಂಸರ ಪ್ರಕಾರ ರಾಷ್ಟ್ರಕೂಟರ ದೊರೆ ಮುಮ್ಮಡಿ ಕೃಷ್ಣನೇ ಈ ಕನ್ನರ ದೇವ. ಕ್ರಿ. ಶ. 939ರಿಂದ 967ರ ನಡುವೆ ಆಳಿದವನು. ರಾಷ್ಟ್ರಕೂಟ ಸಾಮ್ರಾಜ್ಯವನ್ನು ಉತ್ತರದಲ್ಲಿ ಗೋದಾವರಿಯಾಚೆಗೆ, ದಕ್ಷಿಣದಲ್ಲಿ ರಾಮೆಶ್ವರದವರೆಗೆ ವಿಸ್ತರಿಸಿದ ದೊರೆ ಇವನು. ಶ್ರೀಲಂಕೆಯ ಮಹಾರಾಜನಿಂದಲೂ ಕಪ್ಪ-ಕಾಣಿಕೆಗಳನ್ನು ಪಡೆಯುತ್ತಿದ್ದನಂತೆ. ಉಭಯಕವಿ ಚಕ್ರವರ್ತಿ ಪೊನ್ನನನ್ನು ಪೊರೆದ ದೊರೆ. ಕೃಷ್ಣನ ಕಾಲದಲ್ಲಿ ಉತ್ತುಂಗಕ್ಕೆ ತಲುಪಿದ ರಾಷ್ಟ್ರಕೂಟರ ಸಾಮ್ರಾಜ್ಯ ಇವನ ಸಾವಿನ ಬಳಿಕ ಅವನತಿಯತ್ತ ಸಾಗಿತು.
ಹಾಗೆ ನೋಡಿದರೆ ಕನ್ನಡದ ದೊರೆಯೊಬ್ಬ ಮಧ್ಯಪ್ರದೇಶದ ಭೂಭಾಗಗಳನ್ನು ಆಳಿದ್ದು ಇದೇ ಮೊದಲೇನಲ್ಲ. ಕನ್ನಡಮೂಲದ (ಖಚಿತ ಆಧಾರಗಳಿಲ್ಲ) ಶಾತವಾಹನರ ಸಾಮ್ರಾಟರು, ಉತ್ತರದಿಂದ ಬಂದರೂ ಇಲ್ಲೇ ನೆಲೆನಿಂತು ಆಳಿದ ಬಾದಾಮಿಯ ಚಲುಕ್ಯರೂ ಕೂಡಾ ಕೆಲಕಾಲ ನರ್ಮದೆಯವರೆಗೂ ಆಳಿದ್ದುಂಟು. ಆದರೆ ಅವರ ಕಾಲದ ಕನ್ನಡ ಶಾಸನ ಮಧ್ಯಪ್ರದೇಶದಲ್ಲೆಲ್ಲೂ ಲಭ್ಯವಿದ್ದಂತಿಲ್ಲ. ಅತ್ತ ಗುಜರಾತಿನ ಕೆಲ ಶಾಸನಗಳಲ್ಲೂ ಹಳೆಗನ್ನಡದ ಕುರುಹು ಇದೆಯೆಂದು ಶಂಬಾ ಜೋಶಿಯವರು ಬರೆಯುತ್ತಾರೆ. ಇನ್ನು ಕರ್ನಾಟಕದಾಚೆಗೆ ಹೋಗಿ ಸಾಮ್ರಾಜ್ಯ ಸ್ಥಾಪಿಸಿದ ಕನ್ನಡ ಮೂಲದ ದೊರೆಗಳು ಹಲವರಿದ್ದಾರೆ.
“ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್” ಎಂದು ಕವಿ ಹೇಳಿದ್ದಾನೆಂದು ಅಥವಾ ವಿಂಧ್ಯದ ಕಣಿವೆಯಲ್ಲೂ ಕನ್ನಡ ಶಾಸನ ಇದೆಯೆಂಬ ಕಾರಣಕ್ಕೆ ರಾಷ್ಟ್ರಕೂಟರ ಸಾಮ್ರಾಜ್ಯದ ಎಲ್ಲೆಡೆ ಕನ್ನಡವೇ ಪ್ರಧಾನ ಭಾಷೆಯಾಗಿತ್ತೆಂದು ಭ್ರಮಿಸಬೇಕಿಲ್ಲ. ಅದು ರಾಜಭಾಷೆ, ಕವಿಯ ಪ್ರಿಯ ಭಾಷೆ, ಅಷ್ಟೇ. ರಾಷ್ಟ್ರಕೂಟರ ಹಲವು ಶಾಸನಗಳು, ತಾಮ್ರಪತ್ರಗಳು ಸಂಸ್ಕೃತದಲ್ಲೂ ಇವೆ. ಕಿಸುವೊಳಲು, ಕೊಪಣ, ಪುಲಿಗೆರೆ, ಒಂಕುಂದಗಳು ‘ತಿರುಳ್ಗನ್ನಡ’ದ ನಾಡೆಂದು ಕವಿರಾಜಮಾರ್ಗಕಾರನೇ ಹೇಳಿರುವಾಗ, ದೂರದ ಮಧ್ಯಪ್ರದೇಶದಲ್ಲೂ ಆಗ ಕನ್ನಡವು ಜನಭಾಷೆ ಆಗಿತ್ತೆಂದು ಭಾವಿಸುವುದು ತಪ್ಪಾದೀತು.
ಭಾಷೆಯೊಂದು ಉಳಿದು ಬೆಳೆಯಬೇಕಾದರೆ ಅದು ರಾಜಭಾಷೆಯಾಗಿದ್ದರಷ್ಟೇ ಸಾಲದು, ಜನಪದರ ಭಾಷೆಯೂ ಆಗಿರಬೇಕು. ಸಾಮ್ರಾಜ್ಯಗಳು ಉರುಳಿ ಹೋದರೂ ಭಾಷೆಯನ್ನು ಬದುಕಾಗಿಸಿಕೊಂಡ ಜನಸಾಮನ್ಯರು ಅದನ್ನು ಉಲಿದು ಉಳಿಸಿ-ಬೆಳೆಸುತ್ತಾರೆ. ಕನ್ನಡ ಶಾಸನ ದೊರೆತ ಮೈಹರದ ಬಳಿಯ ಜೂರಾದಲ್ಲಿ ಈಗ ಯಾರಿಗೂ ಕನ್ನಡ ಗೊತ್ತಿದ್ದಂತಿಲ್ಲ. ಹತ್ತನೇ ಶತಮಾನದಲ್ಲಿ ಮುಮ್ಮಡಿ ಕೃಷ್ಣನ ಆಳ್ವಿಕೆಯ ಬಳಿಕದ ಹನ್ನೊಂದು ಶತಮಾನಗಳ ಈ ನಡುವಿನ ಸಮಯದಲ್ಲಿ ನರ್ಮದೆ, ಗೋದಾವರಿ, ಕಾವೇರಿಗಳಲ್ಲೆಲ್ಲ ಸಾಕಷ್ಟು ನೀರು ಹರಿದು ಹೋಗಿದೆ, ಸಾಮ್ರಾಜ್ಯಗಳು ಉರುಳಿವೆ, ಹೊಸ ರಾಜ್ಯಗಳು ಉದಿಸಿವೆ. ಮಧ್ಯ ಪ್ರದೇಶದ ಆ ಭಾಗದಲ್ಲಿ ಕನ್ನಡವು ಹೇಳಹೆಸರಿಲ್ಲದಾಗಿದೆಯಾದರೂ ಬೇರೊಂದೆಡೆ ಕನ್ನಡವನ್ನು ಮಾತನಾಡುವ ಕೆಲವು ಹಳ್ಳಿಗಳಿವೆ. ಮುಂದೆಂದಾದರೂ ಆ ಬಗ್ಗೆ ಇನ್ನಷ್ಟು ಹೇಳುವೆ.
ಹೀಗೆ ಹೋದಲ್ಲೆಲ್ಲ ತನ್ನ ಹೆಸರಿನ ಶಾಸನ ಕೆತ್ತುವ ಹವ್ಯಾಸ ಮಹಾರಾಜರಿಗಷ್ಟೇ ಸೀಮಿತವಲ್ಲ, ಬಿಡಿ. ಇತ್ತೀಚೆಗೆ ಭೋಪಾಲದ ಬೇಗಮ್ಮಳ ಕೋಟೆಯ ಆವರಣದಲ್ಲಿ ಪಾಳುಬಿದ್ದ ಗೋಡೆಯ ಮೇಲೆ ಅಮರಪ್ರೇಮಿ ಕನ್ನಡಿಗನೊಬ್ಬ ‘ರವಿ ಲವ್ಸ್ ಗೀತಾ’ ಎಂದು ಅಚ್ಚಗನ್ನಡದ ಲಿಪಿಯಲ್ಲಿ ಬರೆದಿದ್ದು ಕಾಣಿಸಿತು! ಎಂದಾದರೊಂದು ದಿನ ಇತಿಹಾಸಕಾರರು ಕನ್ನಡಿಗನೊಬ್ಬ ಇಲ್ಲಿಯವರೆಗೂ ಬಂದಿದ್ದ ಎಂಬುದಕ್ಕೆ ಸಾಕ್ಷಿಯಾಗಿ ಇದನ್ನು ಬಳಸಿಕೊಳ್ಳೊತ್ತಾರೋ ಏನೋ, ನೋಡೋಣ !
ಬಹುಶಃ ಹತ್ತನೇ ಶತಮಾನದ ಮುಮ್ಮಡಿ ಕೃಷ್ಣನ ಆಳ್ವಿಕೆಯ ಬಳಿಕ ಕನ್ನಡಿಗನೊಬ್ಬ ತನ್ನ ‘ಸಾಮ್ರಾಜ್ಯ’ವನ್ನು ಇನ್ನಷ್ಟು ಉತ್ತರಕ್ಕೆ ಬೆಳೆಸಿ, ದಿಲ್ಲಿಯಲ್ಲಿ ಕುಳಿತು ಇಡೀ ಭಾರತವನ್ನು ಕೆಲಕಾಲ 'ಆಳಿದ್ದು' ಇಪ್ಪತ್ತನೇ ಶತಮಾನದ ಅಂತ್ಯದಲ್ಲೇ ಇರಬೇಕು. ಅದು ನಮ್ಮ ಹರದನಹಳ್ಳಿಯ ದೇವೇಗೌಡರು!

-ಪ್ರಸನ್ನ ಆಡುವಳ್ಳಿ


ಗುರುವಾರ, ಜನವರಿ 21, 2021

ಬೀಡಿ ಬಾಬಾ!

ಮಧ್ಯ ಪ್ರದೇಶದ ಸಾತ್ಪುರಾ ಬೆಟ್ಟಗಳ ನಡುವಿನ ಸಣ್ಣದೊಂದು ರಸ್ತೆಯಲ್ಲಿ ಗೂಬೆಯನ್ನು ಹುಡುಕುತ್ತಾ ಜೀಪನ್ನೋಡಿಸುತ್ತಿದ್ದೆ. "..ಸಾಬ್.. ಸಾಬ್... ಏಕ್ ಮಿನಟ್ ರುಖಿಯೇ!" ಎಂದು ಹಿಂದಿನ ಸೀಟಿನಲ್ಲಿದ್ದ ಬಾಬೂಲಾಲ ಕೂಗಿದ. ಅವನಿಗೆಲ್ಲೋ ಹಕ್ಕಿ ಕಂಡಿರಬಹುದೇನೋ ಎಂದುಕೊಂಡು ಗಾಡಿ ನಿಲ್ಲಿಸಿ ಕ್ಯಾಮರಾ ತೆಗೆದುಕೊಂಡು ಹಗೂರಕ್ಕೆ ಹೆಜ್ಜೆಯಿಟ್ಟು ಕೆಳಗಿಳಿದು ಹಕ್ಕಿ ಹುಡುಕತೊಡಗಿದೆ.ಇವನೋ ಆರಾಮಕ್ಕೆ ಇಳಿದು ಬೀಡಿ ಹಚ್ಚಿ ಗಗನಮುಖಿಯಾಗಿ ಹೊಗೆಬಿಡತೊಡಗಿದ. 

ಬಿರುಬೇಸಗೆಯ ದಿನಗಳಲ್ಲಿ ಕಾಡಿನ ಮಧ್ಯೆ ಕೆಲಸ ಮಾಡುವಾಗ ಬೀಡಿ ಸೇದುವಂತಿಲ್ಲ ಎಂದು ಇವನಿಗೆ ಎಷ್ಟು ಬಾರಿ ಹೇಳಿದ್ದೇನೆ! ನನ್ನ ಕೋಪ ನೆತ್ತಿಗೇರಿತು. ನಾನು ಬೈಯ್ಯುವ ಮೊದಲೇ ಬಾಯ್ಬಿಟ್ಟ... "ಸಾಬ್, ಮುಝೆ ಬೀಡಿ ಪೀನಾ ನಹೀ ಥಾ... ಮಗರ್ ಬಾಬಾ ಕೆಲಿಯೆ ಪೀರಹಾ ಹೂ..." ಎಂದು ರಸ್ತೆಬದಿಯ ಈ 'ಬೀಡಿ ಬಾಬಾನ ಮಂದಿರ'ವನ್ನು ತೋರಿಸಿದ. 




ವರ್ಷಗಳ ಹಿಂದೆ ಇದೇ ಜಾಗದಲ್ಲಿ ಬೈಕ್ ಸವಾರನೊಬ್ಬ ಕಲ್ಲು ತಾಗಿ ಆಯತಪ್ಪಿ ಕೆಳಗೆ ಬಿದ್ದು ಸತ್ತಿದ್ದನಂತೆ. ಪ್ರಾಣ ಹೋದ ಮೇಲೂ ಅವನ ಬಾಯಲ್ಲಿದ್ದ ಬೀಡಿ ಹಾಗೇ ಉರಿಯುತ್ತಿತ್ತಂತೆ. ಆಮೇಲೆ ದಾರಿಹೋಕರಿಗೆಲ್ಲ ಅವನ ಆತ್ಮ ಕಾಟಕೊಡುತ್ತಿತ್ತಂತೆ. ಹೀಗಾಗಿ ಯಾರೋ ಪುಣ್ಯಾತ್ಮರು ಅವನು ಬೀಳಲು ಕಾರಣವಾದ ಕಲ್ಲು ಹುಡುಕಿ ಹೀಗೆ ಗೂಡು ಕಟ್ಟಿ ದೇವಸ್ಥಾನ ಮಾಡಿದ್ದಾರೆ. ಬೀಡಿ ಬಾಬಾನಿಗೆ ಬೀಡಿಯದ್ದೇ ಆರತಿ. ಉರಿದ ಬೂದಿಯೇ ಪ್ರಸಾದ. ದಾರಿಯಲ್ಲಿ ಹೋಗುವ ಡ್ರೈವರುಗಳೆಲ್ಲ ಅವನಿಗೆ ಬೀಡಿಪೂಜೆ ಮಾಡಿಯೇ ಮುಂದೆ ಹೋಗುತ್ತಾರಂತೆ. ಅಪಘಾತಗಳಿಂದ ಬೀಡಿಬಾಬಾ ರಕ್ಷಿಸುತ್ತಾನೆ ಎಂದು ಕತೆ ಹೇಳಿ ಅರ್ಧಸುಟ್ಟ ಬೀಡಿಯಿಂದ ಆರತಿ ಎತ್ತಿ, ಕಲ್ಲಿನ ಮುಂದಿಟ್ಟು, ಹಳೆಯ ಬೀಡಿಯ ಉರಿದ ಬೂದಿಯನ್ನೇ ಹಣೆಗಿಟ್ಟುಕೊಂಡ. 

ಆಮೇಲಿಂದ ಆ ರಸ್ತೆಯಲ್ಲಿ ಹೋಗುವ ದಿನವೆಲ್ಲ ಬಾಬಾನ ಪೂಜೆಗೆ ಬೀಡಿ ಬೇಕೆಂದು ನನ್ನಿಂದ ಇಪ್ಪತ್ತು ರೂಪಾಯಿ ಪೀಕುತ್ತಿದ್ದ. ಏನೋ ಇವನ ನಂಬಿಕೆ, ಹೋಗಲಿ ಎಂದು ನಾನೂ ಸುಮ್ಮನಿದ್ದೆ. ಕೊಂಡ ಬೀಡಿಗಳಲ್ಲಿ ಬಹುತೇಕ ಇವನೇ ಸೇದಿ ಖಾಲಿ ಮಾಡುತ್ತಿದ್ದ. ಉಳಿದೊಂದು ಬೀಡಿಯನ್ನೂ ಮುಕ್ಕಾಲು ಭಾಗ ಸೇದಿಯಾದ ಮೇಲಷ್ಟೇ ಬಾಬಾನಿಗೆ ಅರ್ಪಿಸುತ್ತಿದ್ದ. ಇದ್ಯಾಕೋ ಅತಿಯಾಯ್ತು ಅನ್ನಿಸಿ ಒಂದು ದಿನ ಬೀಡಿಗಾಗಿ ದುಡ್ಡು ಕೊಡೋಲ್ಲವೆಂದು ಕೈ ಎತ್ತಿದೆ. 

ಮರುದಿನ ಜೇಬಲ್ಲಿ ಬೀಡಿ ಇಲ್ಲದಿದ್ದರೂ ಗಾಡಿ ನಿಲ್ಲಿಸಲು ಹೇಳಿದ. ಹೋಗಿ ಬೀಡಿಬಾಬಾನ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿ ಯಾರೋ ಇಟ್ಟು ಹೋಗಿದ್ದ ಅರ್ಧ ಉರಿದ ಬೀಡಿಯನ್ನು ಎತ್ತಿಕೊಂಡು ಬಂದ. "ಅಲ್ಲಯ್ಯಾ... ಬಾಬಾನ ಬೀಡಿಯನ್ನೇ ಕಳ್ಳತನ ಮಾಡ್ತಿದ್ದೀಯಲ್ಲಾ..." ಎಂದು ಒಂದಿಷ್ಟು ಪಾಪಪ್ರಜ್ಞೆ ಹುಟ್ಟಿಸಿ ಬೀಡಿ ಸೇದುವುದನ್ನು ತಪ್ಪಿಸಲು ಹವಣಿಸಿದೆ.

 "ಏನ್ಸಾರ್ ನೀವೇ ಹಿಂಗೇಳ್ತೀರಾ... ಬೀಡಿಯೂ ಅವನದ್ದೇ, ಬದುಕೂ ಅವನದ್ದೇ. ಅವನೇ ಕೊಡೋನು, ತಗಳ್ಳೋನೂ ಅವನೇ... ನಮ್ಮದೇನಿದೆ ಸಾರ್.." ಎಂದು ನನಗೊಂದಿಷ್ಟು ತತ್ವಜ್ಞಾನ ಬೋಧನೆ ಮಾಡಿ ಮೋಟುಬೀಡಿಗೆ ಬೆಂಕಿ ಹಚ್ಚಿದ.

~ಪ್ರಸನ್ನ ಆಡುವಳ್ಳಿ