ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...
ನಗೆಗವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನಗೆಗವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಮಾರ್ಚ್ 1, 2012

ಒಂದು ಬೆಳ್ಳಿ ಕೂದಲು


ಮೊನ್ನೆ ಒಂದು ಭಾನುವಾರದಂದು
ಲೇಟಾಗೆದ್ದು, ಹಲ್ಲುಜ್ಜಿ ಕಾಫಿ ಹೀರಿ
ಹಾಡುಹೇಳುತ್ತಾ ಸ್ನಾನ ಮಾಡಿ
ಕನ್ನಡಿ ಮುಂದೆ ತಲೆ ಒರೆಸಿಕೊಳ್ಳುತ್ತಾ
ನಿಂತವನಿಗೆ ತಲೆಯಲ್ಲೇನೋ
ಫಳ್ ಎಂದು ಹೊಳೆದಂತಾಯ್ತು...

ನನ್ನಂಥ ಟ್ಯೂಬ್‍ಲೈಟು ಕವಿಗೆ
ಆಗೀಗ ಹಾಗೆ ಝಗ್ಗನೆ ಸ್ಪೂರ್ತಿ
ಉಕ್ಕುವುದು ಹೊಸತಲ್ಲ ಬಿಡಿ...

ಆದರೆ ಈ ಬಾರಿ ಹಾಗಲ್ಲ,
ಹೀಗೆ ಹೊಳೆದಿದ್ದು ತಲೆಯೊಳಗಲ್ಲ,
ಅದೊಂದು ಬೆಳ್ಳಿ ಕೂದಲು!

ಅರೆ! ಅರವತ್ತಾದ ಮೇಲೆ
ಬಣ್ಣ ಬದಲಿಸಬೆಕಾದ್ದು
ಈಗಲೇ ಫಳಫಳಿಸಿದರೆ ಹೇಗೆ?!
ಅದೂ ನನ್ನಂಥ ಮೊನ್ನೆ ಮೊನ್ನೆ
ಟೀನೇಜು ಜಾರಿಸಿದವನಿಗೆ...?
ತಲೆ ಕೆರೆದು ಯೋಚಿಸಿದೆ,
ಒಂದಿಷ್ಟು ಕೂದಲುದುರಿತೇ ವಿನಃ
ಉತ್ತರ ಸಿಗಲಿಲ್ಲ...


ತಲೆಬಿಸಿಯಾಯ್ತು...
ನನಗಿನ್ನೂ ಇಪ್ಪತ್ತೈದಾಗಿಲ್ಲ,
ಮದುವೆ ಆಗಿಲ್ಲ; ಹೋಗಲಿ,
ಹುಡುಗಿಯನ್ನೂ ಹುಡುಕಿಕೊಂಡಿಲ್ಲ!
ಈಗಷ್ಟೇ ಅಆಇಈ ಮುಗಿಸಿ
ಕಾಲೇಜು ಮೆಟ್ಟಿಲೇರಿದವನಿಗೆ
ಕೂದಲು ಬೆಳ್ಳಗಾಗಲು ಕಾರಣವೇ ಇಲ್ಲ...

ಇರಬಹುದೇ ಇದು
ತಲೆತುಂಬಾ ತುಂಬಿಕೊಂಡ
ಟೆನ್ಶನ್ನುಗಳ ಫಲ?
ಮಾಲಿನ್ಯ? ವಿಷವುಳ್ಳ ಆಹಾರ?
ಅಥವಾ ನನ್ನ ಚಂದದ ಕೂದಲ ಮೇಲೆ
ಯಾರದೋ ಹೊಟ್ಟೆಕಿಚ್ಚು?!

ತಲೆ ಕೊಡವಿದೆ;
ಹೋಗಲಿ ಬಿಡಿ, ಯಾಕಿಷ್ಟು ಚಿಂತೆ?
ಇಷ್ಟಕ್ಕೂ ಒಂದೇ ಒಂದು ಕೂದಲು ತಾನೇ..?
ಬಿಳಿಕೂದಲು ಬುದ್ದಿಜೀವಿಗಳ ಲಕ್ಷಣ!
ಆದರೂ...
ಸದ್ಯಕ್ಕೆ ಹೇರ್‌ಡೈ ಹಚ್ಚೋಣ..!!

ಶುಕ್ರವಾರ, ಜುಲೈ 2, 2010

ರನ್ನ ಚರಿತ

ಹತ್ತನೆಯ ಶತಮಾನದೋಳ್
ತಾನ್ ಬರೆದ
ಮಹಾಭಾರತದ
‘ಸಾಹಸ ಭೀಮ ವಿಜಯ೦’
ಎಂಬ ಕೃತಿಯ೦
ಪ್ರಸ್ತುತ
ಇಪ್ಪತ್ತೊ೦ದನೆಯ ಶತಮಾನದೋಳ್
‘ನವಭಾರತ’ವೆಂಬ ಪೆಸರೋಳ್
ಚಲನಚಿತ್ರವಾಗಿರ್ಪದೆ೦ಬ
ಮಿಥ್ಯ ಸುದ್ದಿಯಂ ಕೇಳಿ
ತಡಬಡಿಸಿ ಸ್ವರ್ಗದಿಂದಿಳಿದು
ಬ೦ದನಾರನ್ನ ಮಹಾಶಯನ೦
ಭುವಿಯಲವತರಿಸಿ
ತನ್ನ ನಾಡಾಲ್ ಇರ್ಪ ಒ೦ದು
ಸಿನೆಮಾ ಥಿಯೇಟರ೦ ಪೊಕ್ಕು
ಆ ಚಲನಚಿತ್ರ೦ ನೋಳ್ಪೆ
ಆ ಲಲನೆಯರ ಕಂಡು
ಅರೆಕ್ಷಣದಲ್ಲಿ
ಹೆದರಿ-ಬೆದರಿ ಬೆವರ್ಪಲಾಗಿ
ಪ್ರಜ್ಞೆ ತಪ್ಪಿ ಭುವಿಗುರುಳಿ
ಮತ್ತೆ ಮಣ್ಣಾದನಾ ರನ್ನ ಭೂಪ೦…!

ವರ್ಣನೆ…

ಎಲ್ಲ ಸುಂದರಿಯರಂತೆ
ನನ್ನವಳಿಗೂ ಎರೆಡು ಕಣ್ಣು,
ಚಂದಿರನ ಮೇಲಿನ ಕಪ್ಪು ಕಲೆಗಳ ಹಾಗೆ !
ಮತ್ತೆರೆಡು ಕಿವಿ,ಅವೋ ಗಜದಗಲ…
ಮೂಗು…?
ಅದು ಒಂದೇ
ಅದರಲ್ಲಿದೆ ಎರೆದು ರಂಧ್ರ,
ಇಲಿಯ ಬಿಲದ ಹಾಗೆ…!
ಮತ್ತ್ತೆ ಯಥಾ ಪ್ರಕಾರ
ತುಟಿ ತೊಂಡೆಯ ಹಾಗೆ
ಹಲ್ಲು ಕೆಂಪು-ಕೆಂಪು ಹೈಬ್ರಿಡ್ ದಾಳಿಂಬೆಯ ಹಾಗೆ…!
ಗಲ್ಲ ಕರಿ ಇರುವೆ ಮುಟ್ಟಿದ ಬೆಲ್ಲದ ಹಾಗೆ…!
ಕೇಶರಾಶಿಯೋ …
ಬೆಳ್ಳಿ ಮೋಡದ ಹಾಗೆ…!
ಮತ್ತೆ ನೋಡದ ಹಾಗೆ….!!!!