ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...
ಕೃಷಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕೃಷಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಮಾರ್ಚ್ 28, 2012

ಕುಲಾಂತರಿ ಚರ್ಚೆ ಬಗ್ಗೆ ಒಂದಿಷ್ಟು

ಕುಲಾಂತರಿಗಳ ಬಗ್ಗೆ  "ಕನ್ನಡಪ್ರಭ"  ಪತ್ರಿಕೆಯಲ್ಲಿ ಶಾಂತು ಶಾಂತಾರಾಮ್ ಹಾಗೂ ಎಮ್ ಮಹದೇವಪ್ಪ ಅವರು ಬರೆದ ಬರಹ ಓದುಗರನ್ನು ದಾರಿತಪ್ಪಿಸುವಂತಿದೆಯೇ ವಿನಹಾ ಅವುಗಳ ಕುರಿತು ಸರಿಯಾದ ಮಾಹಿತಿಯನ್ನು ನೀಡುವಲ್ಲಿ ವಿಫಲವಾಗಿದೆ. ಕುಲಾಂತರಿಗಳನ್ನು ಅಭಿವೃದ್ದಿಯ ಹೆಸರಲ್ಲಿ, ಅಧಿಕ ಅಹಾರ ಉತ್ಪಾದನೆಯ ನೆಪದಲ್ಲಿ ರೈತರ ಹಾಗೂ ಗ್ರಾಹಕರ ಮೇಲೆ ಹೇರುವ ಪ್ರಯತ್ನದ ಒಂದು ಭಾಗವಾಗಿ ಈ ಬರಹಗಳು ಮೂಡಿಬಂದಿವೆಯಷ್ಟೇ.

 ವಿಜ್ಞಾನವು ಸತ್ಯ ಶೋಧನೆಯಿಂದ ರೂಪಗೊಳ್ಳುವುದೇ ವಿನಹ ಸಂಖ್ಯಾ ಬಲದಿಂದಲ್ಲ ಎಂಬ ಮಹದೇವಪ್ಪನವರ ಮಾತುಗಳು ಒಪ್ಪತಕ್ಕದ್ದೇ . ಆದರೆ ಬಿ.ಟಿ. ಬದನೆ ಕುರಿತ ಚರ್ಚೆ ಯಲ್ಲಿ ವಿಜ್ಞಾನಿಗಳಿಗೆ ಸೂಕ್ತ ಕಾಲಾವಕಾಶ ಸಿಗಲಿಲ್ಲ ಎಂಬ ಮಾತು ಸತ್ಯಕ್ಕೆ ದೂರ. ತಾತ್ಕಾಲಿಕ ನಿಷೇಧ ಹೇರುವ ಮುನ್ನ ದೇಶದ ಹಲವೆಡೆಗಳಲ್ಲಿ ಪರ-ವಿರೋಧಗಳ ಬಗ್ಗೆ ಪರಿಸರ ಸಚಿವಾಲಯ ವಿಸ್ತೃತ ಚರ್ಚೆ ನಡೆಸಿತ್ತು. ಇಷ್ಟಲ್ಲದೇ  ದೇಶದ ಪ್ರತಿಷ್ಟಿತ ಆರು ವಿಜ್ಞಾನ ಅಕಾಡೆಮಿಗಳಿಂದ ಅಭಿಪ್ರಾಯ ಕೇಳಿತ್ತು. ಆದರೆ ಅಲ್ಲಿನ ವಿಜ್ಞಾನಿಗಳು ಕೊಟ್ಟ ಬೇಜಾವಾಬ್ದಾರಿಯುತ ವರದಿ ಎಲ್ಲರಿಂದ ಟೀಕೆಗೆ ಒಳಗಾಗಿದ್ದು ನೆನಪಿರಬಹುದು. ಎಲ್ಲದಕ್ಕೂ ವೈಜ್ಞಾನಿಕ ಆಧಾರ ಕೇಳುವವರು ತಮ್ಮ ವರದಿಯ ಬಗ್ಗೆ ಏಕೆ ಚಕಾರ ಎತ್ತುವುದಿಲ್ಲ? ಅಲ್ಲೇಕೆ ಯಾವುದೇ ವೈಜ್ಞಾನಿಕ ಆಧಾರ ನೀಡದೇ ತೀರ ಕಳಪೆ ಗುಣಮಟ್ಟದ ವರದಿ ಕೊಟ್ಟರು?

ಬಿ.ಟಿ. ಹತ್ತಿ ಬಂದ ಮೇಲೆ ಹತ್ತಿಯನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ ಹತ್ತಿ ರಫ್ತು ಮಾಡುವ ದೇಶವಾಯ್ತೆಂದು ಹೆಮ್ಮೆಯಿಂದ ಹೇಳುವವರು ಇತ್ತೀಚೆಗೆ ಹತ್ತಿಯ ಒಟ್ಟಾರೆ ಉತ್ಪಾದನೆ ಕಡಿಮೆಯಾಗಿದೆಯೆಂದು ಕೇಂದ್ರ ರಫ್ತು ನಿಷೇಧ ಮಾಡಲು ಹೊರಟಿದ್ದನ್ನೇಕೆ ಪ್ರಜ್ನಾಪೂರ್ವಕವಾಗಿ ಮರೆಮಾಚುತ್ತಾರೆ? ದೇಶದ ಶೇಕಡಾ 93ರಷ್ಟು ಭಾಗದಲ್ಲಿ ಬಿ.ಟಿ.ಹತ್ತಿಯನ್ನೇ ಬೆಳೆಯುತ್ತಿದ್ದರೂ ಹೀಗಾಗಿದ್ದೇಕೆ?!

ಸದ್ಯ ನಮ್ಮ ಮಾರುಕಟ್ಟೆಯಲ್ಲಿರುವ ಎಲ್ಲ ಕುಲಾಂತರಿ ತಳಿಗಳು ಖಾಸಗೀ ಕಂಪನಿಗಳಿಂದಲೇ ಬಂದವು. ಸರ್ಕಾರಿ ಸ್ವಾಮ್ಯದ ಸಂಸ್ತೆಗಳು ಇನ್ನೂ ಅಂಬೆಗಾಲಿಕ್ಕುತ್ತಿವೆಯಷ್ಟೆ. ಮೊನ್ಸಾಂಟೋ ಕಂಪನಿಯ ಬಿ.ಟಿ. ಜೀನನ್ನು ತೋರಿಸಿ ತಾವು ತಯಾರಿಸಿದ್ದೆಂದು ಹೇಳಿ ಸಿಕ್ಕಿಹಾಕಿಕೊಂಡ ಧಾರವಾಡ ಹಾಗೂ ದೆಹಲಿಯ ಕೃಷಿ ವಿಜ್ಞಾನಿಗಳ ಪ್ರಕರಣವನ್ನು ಇಲ್ಲಿ ನೆನಪಿಸಿಕೊಂಡರೆ ತಪ್ಪಾಗಲಾರದು. ಹೀಗೇ ಆದರೆ ಇನ್ನೊಂದು ದಶಕ ಕಳೆದರೂ ಸರ್ಕಾರಿ ರಂಗದಿಂದ ಬಿ.ಟಿ. ಅಭಿವೃದ್ದಿ ಅನುಮಾನ. ಅಷ್ತರಲ್ಲಿ ಖಾಸಗೀ ಕಂಪನಿಗಳು ರೈತರನ್ನು ತಮ್ಮ ಕಪಿಮುಷ್ಟಿಯೊಳಗೆ ಹಿಡಿದಿರುವುದರಲ್ಲಿ ಅನುಮಾನವಿಲ್ಲ. ಇನ್ನು ರೈತರೇ ಇದರ ಬೀಜೋತ್ಪಾದನೆ ಮಾಡಿಕೊಳ್ಳಬಹುದೆಂಬ ಹಸಿ ಸುಳ್ಳನ್ನೇಕೆ ಹೇಳುತ್ತಾರೆಂಬುದು ಅರ್ಥವಾಗದು.

ವೈಜ್ಞಾನಿಕ ಸಂಶೋಧನೆ ನಡೆಸಿ ಸುರಕ್ಷಿತ ಎಂದು ಸಾಬೀತಾದವುಗಳನ್ನು ಬಳಸಬಹುದೆನ್ನುತ್ತಲೇ ಸುರಕ್ಷತೆಗಾಗಿ ಯಾವ್ಯಾವ ಪರೀಕ್ಷೆ ಮಾಡಾಬೇಕೆಂದು ಸೂಚಿಸಿದ ಪುಷ್ಪ ಭಾರ್ಗವರ ಮೆಲೆ ಹರಿಹಾಯುವುದು ಪೂರ್ವಾಗ್ರಹವಲ್ಲದೇ ಮತ್ತೇನು?
ಹಸಿರು ಕ್ರಾಂತಿಯ ಗಡಿಬಿಡಿಯಲ್ಲಿ ನಾವು ಮಾಡಿದ ಅದ್ವಾನಗಳು ಈಗಷ್ಟೇ ಅರಿವಿಗೆ ಬರುತ್ತಿರುವಾಗ ಮತ್ತೊಂದು ಹಸಿರು ಕ್ರಾಂತಿ ಮಾಡುವ ಮುನ್ನ ಅದರಿಂದಾಗಬಹುದಾದ ಹಾನಿಕಾರಕ ಪರಿಣಾಮಗಳ ಬಗ್ಗೆ ಈಗಲೇ ಯೋಚಿಸಿ, ಸೂಕ್ತ ಸಂಶೋಧನೆ ನಡೆಸಿ ನಿವಾರಿಸಿಕೊಳ್ಳಬೇಕಿದೆ. ಕುಲಾಂತರಿಗಳ ಬಗ್ಗೆ ಇನ್ನೂ ವಿರೋಧಾಭಾಸ ಅಭಿಪ್ರಾಯಗಳು ವಿಜ್ಞಾನಿಗಳಲ್ಲೆ ಇರುವಾಗ ಅವನ್ನು ಮಾರುಕಟ್ಟೆಗೆ ಬಿಡಬೇಕೆನ್ನುವುದರ ಹಿಂದೆ ಕಾರ್ಪೋರೇಟ್ ಲಾಬಿಯಿದೆಯೇ ಹೊರತು ಮತ್ತೇನಲ್ಲ.

ಕುಲಾಂತರಿ ಬೀಜಗಳನ್ನು ಮೊದಮೊದಲಿಗೆ ಕಡಿಮೆ ಬೆಲೆಗೆ ಮಾರಿ ಒಮ್ಮೆಗೆ ನಾಲ್ಕು ಪಟ್ಟು ಬೆಲೆ ಏರಿಸಿದರೆ ರೈತರ ಸ್ತಿತಿ ಏನಾಗಬೇಡ? ತನ್ನಲ್ಲಿದ್ದ ದೇಶಿ ತಳಿಗಳ ಬೀಜವನ್ನು ಕಳೆದುಕೊಂಡು ಬೇರೆ ದಾರಿಯಿಲ್ಲದೇ ಕಂಪನಿಗಳ ಬಾಗಿಲು ಬಡಿಯುವ ರೈತನ ಸ್ತಿತಿಯನ್ನು ಆಧುನಿಕ ವಸಾಹತುಶಾಹಿಯ ಪರಿಣಾಮ ಅನ್ನದೇ ವಿಧಿಯಿಲ್ಲ. ಡಾಲರ್ ಲೆಕ್ಕದಲ್ಲಿ ಸಂಬಳ ಎಣಿಸುವವರಿಗೆ ನಮ್ಮ ಸಣ್ಣ ಹಿಡುವಳಿದಾರರಿಗೆ 1000 ರೂಪಾಯಿಯೂ ದೊಡ್ದ ವೊತ್ತ ಎಂಬುದು ಅರ್ಥವಾಗುವುದಿಲ್ಲ.

ಎಲ್ಲದಕ್ಕೂ ವೈಜ್ಞಾನಿಕ ಆಧಾರ ಕೇಳುವವರು ಬಿ.ಟಿ.ಯ ಹಾನಿಕಾರಕ ಅಂಶಗಳ ಬಗ್ಗೆ ಬೆಳಕು ಚೆಲ್ಲುವ ಸಂಶೋಧನಾ ಪ್ರಭಂಧಗಳನ್ನೇಕೆ ಮರೆಮಾಚುತ್ತಾರೆಂದು ಅರ್ಥವಾಗದು. ಮೊನಾರ್ಕ್ ಚಿಟ್ಟೆ, ಲೇಸ್ವಿಂಗ್ ಮೊದಲಾದ ನಿರಪಾಯಕಾರಿ ಕೀಟಗಳಿಗೆ ಬಿ.ಟಿ. ವಿಶಕಾರಿ ಎಂಬ ಬಗ್ಗೆ ಸಾಕಷ್ಟು  ವೈಜ್ನಾನಿಕ ಮಾಹಿತಿ ಇದೆಯಲ್ಲಾ?!

ಇನ್ನು ಶಾಂತು ಶಾಂತಾರಾಮರ ರೈತಪರ ಕಳಕಳಿ ಎಷ್ತಿದೆ ಅನ್ನೊದು ಗೊತ್ತಾಗಬೇಕಾದರೆ ಅವರೇ ಕೇರಳದಲ್ಲಿ ನಡೆದ ಸಮಾರಂಭವೊಂದರಲ್ಲಿ ನೀಡಿದ ಹೇಳಿಕೆಯನ್ನು ಗಮನಿಸಬೇಕು “if any of us are the seed companies or in the seed business, would we like ourcustomers to approach us only once? Why wouldn't we like our business to multiply? Wouldn't it be economically viable for us to ensure that farmers buy seed from us every year? “  ಇದು ಅವರು ಮಾಡುತ್ತಿರುವ ಕಾರ್ಪೋರೆಟ್  ಲಾಬಿಯಲ್ಲದೇ ಮತ್ತೇನು?

ಇಷ್ಟಕ್ಕೂ ಶಾಂತಾರಾಮರು ಕೃಷಿ ಜೈವಿಕ ತಂತ್ರಜ್ಞಾನದ ದೈತ್ಯ ಕಂಪನಿ 'ಸಿಂಜೆಂಟಾ'ದ ಉದ್ಯೋಗಿಯಾಗಿದ್ದವರು. ಕುಲಾಂತರಿಗಳನ್ನೆ ಉಸಿರಾಡುತ್ತಿರುವ ಹನ್ನೆರೆಡು ಜಾಗತಿಕ ಕಂಪನಿಗಳ ಮುಖವಾಣಿಯಾದ ABLE-AG(Association of Biotech LeadEnterprices-Agriculture Group)ನ ಮುಖ್ಯಸ್ತರಾಗಿರುವವರು. 'ಬಯಾಲಜಿಕ್ಸ್ ಇಂಟೆನ್ರ್ಯಾಶನಲ್' ಎಂಬ ತಮ್ಮದೇ ಆದ ಸಂಸ್ತೆಯೊಂದನ್ನು ಕಟ್ಟಿಕೊಂಡು ಜೈವಿಕ ತಂತ್ರಜ್ಞಾನ ಕಂಪನಿಗಳಿಗೆ ಸಲಹೆ ಕೊಡುತ್ತಿರುವವರು. ಅವರಿಗೆ ರೈತಪರ ಕಳಕಳಿಗಿಂತ ಕಾರ್ಪೋರೇಟ್ ಕಳಕಳಿಯೇ ಹೆಚ್ಚಾಗಿ ಇದ್ದಂತಿದೆ!

ಭಾರತೀಯ ಕೃಷಿಕ ಹಾಡುತ್ತ ಕುಣಿಯುತ್ತ ಸ್ತಳೀಯವಾಗಿ ಲಭ್ಯವಿದ್ದುದನ್ನೇ ಬಳಸಿಕೊಂಡು ಖುಶಿಯಿಂದ ಕೃಷಿ ಮಾಡಿದ್ದುಕೊಂಡವ. ಅಭಿವೃದ್ದಿಯ ಹೆಸರಲ್ಲಿ ಆತನಿಗೆ ದೇಶಕ್ಕೆಲ್ಲ ಅನ್ನವುಣಿಸುವ ಜವಾಬ್ದಾರಿ ಕೊಟ್ಟು, ಭೂಮಿ ಕಿತ್ತುಕೊಳ್ಳುತ್ತಾ ಈಗಾಗಲೆ ಸಾಕಷ್ಟು ಸಂಕಷ್ಟಗಳಿಗೆ ಈಡು ಮಾಡಿದ್ದೇವೆ. ಹೀಗೇ ಆದರೆ ಇನ್ನವನನ್ನು ಬಹುರಾಷ್ಟ್ರೀಯ ಕಂಪನಿಗಳ ಜೀತಕ್ಕಿಡುವ ದಿನಗಳೂ ದೂರವಿಲ್ಲ ಎನಿಸುತ್ತಿದೆ.. ..

ಶುಕ್ರವಾರ, ಆಗಸ್ಟ್ 26, 2011

ಕುವೆಂಪು ಕಾಡಿಂದ ಬೇಂದ್ರೆ ಕೇರಿಗೆ...!


ಓದುಗರೆಲ್ಲರಿಗೂ ನಮಸ್ಕಾರ...

ಈ ಬದುಕೇ ಹೀಗೇ ಏನೋ..
ಅಂದುಕೊಂಡಿದ್ದು ಇನ್ನೇನೋ ಆಗಿಬಿಡುತ್ತದೆ, ಕನಸಿಗೆ ಬ್ರೇಕ್ ಹಾಕಿ ಧುತ್ತೆಂದು ಕಟುವಾಸ್ತವಗಳನ್ನೆಲ್ಲಾ ಎದುರಿಗೆ ತಂದು ನಿಲ್ಲಿಸುತ್ತದೆ, ಒಮ್ಮೊಮ್ಮೆ ಅಚ್ಚರಿಯ ಅಂಚಿಗೆ ದೂಡುತ್ತದೆ, ಅಸಂಗತಗಳನ್ನೆಲ್ಲಾ ಅಡ್ಡ ತಂದು ಆಗಾಗ ಕಾಡುತ್ತದೆ, ಹೀಗೆ ಏನೇನೋ...!

ಅಷ್ಟಕ್ಕೂ ನಾನು ಧಾರವಾಡದಂತಹ ಧಾರವಾಡಕ್ಕೆ ಬಂದು ಬದುಕುತ್ತೆನೆಂದು  ಕನಸಲ್ಲೂ ಯೋಚಿಸಿರಲಿಲ್ಲ.ಅಂಥ ಯಾವ ಆಸೆಯು ನನಗಿರಲಿಲ್ಲ. ತೀರಾತೀರ ಮಲೆನಾಡಿನ ಮಧ್ಯದ ಊರಿಂದ ಬಂದ ನನಗೆ ಹಾಗೆ ಯೋಚಿಸುವುದರ ಅಗತ್ಯವೂ ಇರಲಿಲ್ಲ. ಆದರು...

ಏನೇನೋ ಆಗಿ ಕೊನೆಗೂ ಗಟ್ಟಿ ನಿರ್ಧಾರ ಮಾಡಿ, ಬೆಂಗಳೂರನ್ನು ಬದಿಗೊತ್ತಿ, ಧಾರವಾಡಕ್ಕೆ ಬಂದು ಕುಳಿತಿದ್ದೇನೆ.ಅದ್ಯಾವ ಗಳಿಗೆಯಲ್ಲಿ  ಧಾರವಾಡ ಬಂದು ನನ್ನೊಳಗೆ ಕುಳಿತಿತೋ ಗೊತ್ತಿಲ್ಲ...


ಇಷ್ಟಕ್ಕೂ ನನಗೂ ಒಂದು ಬದಲಾವಣೆ ಬೇಕಿತ್ತು.ಎಲ್ಲರಿಗೂ ಮಹಾನಗರಿ ಬೆರಗು ಹುಟ್ಟಿಸಿದರೆ ನನಗೆ ಒಂದೇ  ವರ್ಷದಲ್ಲಿ ಬೋರು ಹೊಡೆಸತೊಡಗಿತ್ತು.ಮುಖವಾಡ ಹೊತ್ತು ಬದುಕುವುದು ಸಾಕುಸಾಕಾಗಿತ್ತು. ಹೀಗಾಗಿ ಧಾರವಾಡ ಬಳಿಯ ಈ ಹಳ್ಳಿಯ ಕಾಲೇಜಿಗೆ ಬರಬೇಕಾಯ್ತು...

ಅಂದ  ಹಾಗೆ ಧಾರವಾಡಕ್ಕೆ ವಿಶ್ರಾಂತಿತಾಣ ಅಂತಲೂ ಅರ್ಥ ಇದೆ ಅನ್ನುತ್ತೆ ವಿಕಿಪೇಡಿಯಾ.ಬಯಲುನಾಡಿಂದ ಮಲೆನಾಡ ಸೆರಗಿಗೆ ಹೆಬ್ಬಾಗಿಲ ಹಾಗಿದೆ ಈ ಊರು! ಜೊತೆಗೆ ಪೇಡದ ಸವಿ ಬೇರೆ..!

"ಬೆಂಗಳೂರಂಥಾ ಬೆಂಗಳೂರು ಬಿಟ್ಟು ಧಾರವಾಡಕ್ಕೆ ಯಾಕೆ ಹೋಗ್ತಿ?" ಅಂತ ಮೂಗು ಮುರಿದು ಪ್ರಶ್ನಿಸಿದವರೇ ಹೆಚ್ಚು.ಆದರೆ ಅವರಿಗೆ ನನ್ನೊಳಗಿನ ತಳಮಳಗಳನ್ನೆಲ್ಲಾ ಹೇಗೆ ಹೇಳಲಿ ಹೇಳಿ? "ಅಲ್ಲಿ ಜನಾ ತುಂಬಾ ಒರಟಂತೆ" ಅಂತ ಹೇಳಿದವರಿಗೇನು ಕಮ್ಮಿಯಿಲ್ಲ. ಆದರೆ 'ಅತ್ತಾರೆ ಅತ್ತುಬಿಡು ಹೊನಲು ಬರಲಿ' ಅಂತ ಭಾವುಕರಾಗಿ ಹಾಡಿದ ಕವಿ ಇಲ್ಲಿಯವರೇ ಅಂತ ಅವರಿಗೆ ಹೇಗೆ ಹೇಳಲಿ?!


ಒಟ್ಟಿನಲ್ಲಿ ಕುವೆಂಪು ಕಾಡಿಂದ ಬೇಂದ್ರೆ ಕೇರಿಗೆ ಬಂದು ಕುಳಿತಿದ್ದೇನೆ! ಬೇಂದ್ರೆಯಷ್ಟೇ ಅಲ್ಲ, ಗೋಕಾಕ್, ಕಾರ್ನಾಡರ ಮೂಲ ಬೇರೂ ಇಲ್ಲೇ ಇದೆ. ಸಾಹಿತಿಗಳಷ್ಟೇ ಅಲ್ಲ.... ಅಂತ ವಿಕಿಪೀಡಿಯಾ ಖ್ಯಾತ ಧಾರವಾಡಿಗರ ಉದ್ದ ಪಟ್ಟಿಯನ್ನೇ ಹಾಕಿದೆ.

ಈ ನಡುವೆ ನನ್ನ ಬ್ಲಾಗು ಬಾಗಿಲು ಹಾಕಿಕೊಂದು ಕೂತುಬಿಟ್ಟಿತ್ತು. ಶುರುಮಾಡಿ ವರ್ಷಗಳೇ ಕಳೆದರೂ ಬೆರಳೆಣಿಕೆಯಷ್ಟೇ ಬರಹಗಳು ಇಲ್ಲಿವೆ. ಅವೋ ಓಬೀರಾಯನ ಕಾಲದ್ದು.ಆಮೇಲೆ ನಾನೂ ಸಾಕಷ್ಟು ಬೆಳೆದಿದ್ದೇನೆ,ಬಲಿತಿದ್ದೇನೆ,ಬರೆದಿದ್ದೇನೆ.ಆದರೂ ಯಾಕೆ ಬ್ಲಾಗ್ ಅಪ್ ಡೇಟ್ ಮಾಡಲಿಲ್ಲ..?

ಬೆಂಗಳೂರು ಸೇರಿದ ಮೇಲೆ ಧಾವಂತ ಬದುಕಿಗೆ ಧಾಂಗುಡಿಯಿಟ್ಟಿತು. ಅದರಲ್ಲೂ ರಾಷ್ಟೀಯ ಜೀವ ವಿಜ್ಣಾನ ಕೇಂದ್ರದಲ್ಲಿ ಸಣ್ಣದೊಂದು ಸಂಶೋಧನೆಗೆ ಶುರುವಿಟ್ಟುಕೊಂಡ ಮೇಲಂತೂ .....ತುರಿಸಲೂ ಪುರುಸೊತ್ತಿರಲಿಲ್ಲ.ಬರೆಯದೇ ಇರಲಾರೆ ಎನಿಸಿ ಆಗೀಗ ಬರೆದಿದ್ದು ಪುಸ್ತಕದಲ್ಲೇ ಉಳಿದುಹೋಯಿತೇ ವಿನಹ ಬ್ಲಾಗಿನವರೆಗೆ ಬರಲಿಲ್ಲ.ಟೈಪುಕುಟ್ಟುವ ವಿಚಾರದಲ್ಲಂತೂ ನಾನು ಶುದ್ದ ಸೋಮಾರಿ!


ಈಗ ಧಾರಾನಗರಿಯ ಬಳಿಯ ಪುಟ್ಟ ಊರಿನ ಹಾಸ್ಟೆಲಿಗೆ ಸೇರಿಕಂಡಿದ್ದೇನೆ.ಇನ್ನಾದರೂ ಕಂಡಿದ್ದು, ಓದಿದ್ದನ್ನು ನಿಮ್ಮೊಡನೆ ಹಂಚಿಕೊಳ್ಳಬೇಕಿದೆ.

ಸದ್ಯಕ್ಕೆ ಒಂದಿಷ್ಟು ಪುಸ್ತಕ ಗುಡ್ಡೆ ಹಾಕಿಕಂಡು ಕೂತಿದ್ದೇನೆ. I Too Had A Dream ಅನ್ನೋದನ್ನ ಈಗಾಗಲೇ ಓದಿ ಮುಗಿಸಿದ್ದೇನೆ.ಕಳೆದ ವರ್ಷ ಗುಜರಾತಿನ ಆನಂದ್ ಗೆ ಹೋದಾಗ ಕೊಂಡ ಹಾಲು ಕ್ರಾಂತಿಯ ಹರಿಕಾರನ ಆತ್ಮಕಥೆಯಿದು. ಕನ್ನಡಕ್ಕೆ ಇದನ್ನು ಯಾರಾದರೂ ಅನುವಾದಿಸಿದ್ದರೋ ಇಲ್ಲವೋ ಗೊತ್ತಿಲ್ಲ. ನಾನಂತೂ ಒಂದಿಷ್ಟನ್ನು ಕನ್ನಡೀಕರಿಸಿ ಇಟ್ಟಿದ್ದೇನೆ. ತುಂಬಾ ಕುತೂಹಲಕಾರಿ ಪುಸ್ತಕ.ಮುಂದೊಂಮ್ಮೆ ವಿವರವಾಗಿ ಬರೆಯುವೆ.

ಇನ್ನುಳಿದವು ನನ್ನ ಓದು ವಿಜ್ನಾನ ಸಂಶೋಧನೆಗೆ ಪರೋಕ್ಷವಾಗಿ ಸಂಭಂಧಿಸಿದವು. Costs and benefits of transgenic crops -ಕುಲಾಂತರಿಗಳ ನಿಜ ಹಣೆಬರಹ ಇದರಲ್ಲಿದೆ.A doble image of double helix ಇಂಥದ್ದೇ ಇನ್ನಂದು ಪುಸ್ತಕ. Agriculture's ethical horizon ಅನ್ನೋ ಕೃಷಿಯ ಇತಿಮಿತಿಗಳ ಬಗೆಗಿನ ಪುಸ್ತಕವೂ ಜೊತೆಗಿದೆ.

ಮತ್ತೊ0ದು Darwinism DEFENDED ಅಂತ. ಡಾರ್ವಿನ್ನನ ವಿಕಾಸವಾದವನ್ನು ಒರೆಗೆ ಹಚ್ಚುವ ಪುಸ್ತಕ.ಇದನ್ನು ಓದಲು ಪ್ರಾರಂಭಿಸುವ ಮೊದಲು ಮತ್ತೊಮ್ಮೆ 'ಕರ್ವಾಲೋ' ಅನ್ನು ಓದಿಕೊಂಡೆ.ಅಥವಾ ಕರ್ವಾಲೋದಿಂದಾಗಿಯೇ ಈ ಪುಸ್ತಕದ ಬಗ್ಗೆ ಕುತೂಹಲ ಹೆಚ್ಚಿದೆ!!

ಈ ಎಲ್ಲದರ ಬಗ್ಗೆ ನಿಮ್ಮೊಡನೆ ಹಂಚಿಕೊಳ್ಳಬೇಕಿದೆ.ಆದರೆ...ಅದು ನನ್ನ ಪುಸ್ತಕ ದಾಟಿ ಬ್ಲಾಗಿನ ಬಾಗಿಲು ಬಡಿದು ಇಲ್ಲಿ ಸೇರಿಕೊಳ್ಳುತ್ತಾ...?

ಗೊತ್ತಿಲ್ಲ!

(ಕೊನೆಗೊಂದು ಮಾತು: ಅಕಾಡೆಮಿಕ್ ವಲಯದ ಹೊರಗಿನವರಿಗೆ ಇಂತಹ ಪುಸ್ತಕಗಳು ಸುಲಭಕ್ಕೆ ಸಿಗಲಿಕ್ಕಿಲ್ಲ.ಓದಲು ಆಸಕ್ತಿಯಿದ್ದರೆ ಹೇಳಿ,ಪ್ರತಿಯೊಂದನ್ನು ಕಳಿಸಿಕೊಡುವೆ..)