ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...
ಪುಸ್ತಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪುಸ್ತಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಏಪ್ರಿಲ್ 5, 2012

ನಿರವಯವ ಹಾಗೂ ನಾಗರಾಜ ವಸ್ತಾರೆ...




ನಾಳೆ ವಸುಧೇಂದ್ರರ ಛಂದ ಪುಸ್ತಕಗಳ ಬಿಡುಗಡೆ ಸಮಾರಂಭವಿದೆ. ಅಲ್ಲಿ ನಮ್ಮೂರ ಕಥೆಗಾರ ನಾಗರಾಜ ವಸ್ತಾರೆಯವರ ಸಂಕಲನ 'ನಿರವಯವ' ಅನಾವರಣಗೊಳ್ಳಲಿದೆ....
ಇಷ್ಟಕ್ಕೂ ನಿರವಯವ ಎಂದರೇನು ಎಂಬ ಕುತೂಹಲಕಾರಿ ಚರ್ಚೆ ಫೇಸ್ಬುಕ್ಕಿನಲ್ಲಿ ನಡೆಯುತ್ತಿತ್ತು. ಅದಕ್ಕೆ ವಸ್ತಾರೆಯವರು ಉತ್ತರಿಸಿದ್ದು ಹೀಗೆ....


ನಿರವಯವ- ಅಂದರೆ ಸರಳವಾಗಿ ಅವಯವಯವಿಲ್ಲದ್ದು ಅಂತ ಅರ್ಥೈಸಬಹುದೇನೋ. 

ವಸುವಿನ ಪ್ರಕಾರ, ಅವನೊಮ್ಮೆ ಹೇಳಿದ ಹಾಗೆ- ಅದು ಅನಂಗ, ಅರ್ಥಾತ್ ಕಾಮ! ಸ್ಸಾರಿ... ನಾನು ಹಾಗೆ ಯೋಚಿಸಿಯೇ ಇರಲಿಲ್ಲ. 

ಇಂಗ್ಲಿಶ್ನಲ್ಲಿ ಆರ್ಗ್ಯಾನಿಕ್ (organ-ic) ಅನ್ನೋ ಬಳಕೆ ಇದೆ ನೋಡಿ- ಅದನ್ನ ಕನ್ನಡದ ಭೂಪರು ಸಾವಯವ (ಸ-ಅವಯವ) ಅಂತ ಬಳಸುತ್ತಾರೆ. ಈ ‘ಆರ್ಗ್ಯಾನಿಕ್’ ಅನ್ನುವುದನ್ನು ಎಲ್ಲ ಸೃಜನಶೀಲ ಕ್ಷೇತ್ರದ ಮಂದಿಯೂ ಬಳಸುತ್ತಾರೆ ಅನಿಸುತ್ತೆ. (ಎಸ್. ಆರ್. ವಿಜಯಶಂಕರರು ಆಗಾಗ- ಅಂದರೆ ಎಲ್ಲರ ಕೃತಿಗಳ ಮೇಲೂ ‘ಸಾವಯವಶಿಲ್ಪದ ಸಮಗ್ರೀಕರಣ’ ಅಂತೇನನ್ನೋ ಹೇಳುತ್ತಾರೆ!!) ನನಗೆ ತಿಳಿದ ಮಟ್ಟಿಗೆ ಆರ್ಗ್ಯಾನಿಕ್ ಅಂದರೆ ತಂತಾನೇ ಆಗಿರ್ಓದು ಅಂತ ಅರ್ಥ. ಅಂದರೆ ಯಾವುದೇ ಬುದ್ಧಿ (ಬೌದ್ಧಿಕವಾದ) ಸರ್ಕಸುಗಳಿಲ್ಲದೆ ತನ್ನಷ್ಟಕ್ಕೆ ಆಗಿರ್ಓದು. ನಮ್ಮ ಹಳೆಯ ಊರುಗಳು ಆಗಿರುವುದು ಹೀಗೆ. ಹೊಸ ಊರುಗಳಲ್ಲಿ ಆಗುವ ಹಾಗೆ ದೊಡ್ಡ ದೊಡ್ಡ ಡಿಗರಿಗಳಿರುವ ಇಂಜಿನಿಯರು, ಆರ್ಕಿಟೆಕ್ಟುಗಳು ಪ್ರಜ್ಞಾಪೂರ್ವಕವಾಗಿ ಇಂತಹ ಊರುಗಳನ್ನು ಕಟ್ಟಿರುವುದಿಲ್ಲ. ಹಾಗಾಗಿಯೇ ಈ ಊರುಗಳು ಸಾವಯವವಿರುತ್ತವೆ. ಅಂದರೆ ಅವುಗಳಲ್ಲೇನೋ ಜೀವಂತಿಕೆಯಿದೆ. ಸಾವಯವವೆನ್ನುವುದಕ್ಕೆ ವ್ಯತಿರಿಕ್ತವಾಗಿ ನಿರವಯವ ಅಂತನ್ನುವ ಪ್ರಯೋಗವಿದೆ. ಅಂದರೆ- ಇನಾರ್ಗ್ಯಾನಿಕ್ (in-organ-ic). ಇದನ್ನು ಜೀವಂತಿಕೆಯಿಲ್ಲದ್ದು ಅನ್ನಬಹುದೆ? ಹಾಗೆ ನೋಡಿದರೆ ನಮ್ಮ ದೊಡ್ಡ ದೊಡ್ಡ ಊರುಗಳೆಲ್ಲ ಇಂಥವು. ಬರೇ ಯಾಂತ್ರಿಕ. ಬುದ್ಧಿಯ ಕಸರತ್ತು ಮಾಡುವ ಮಂದಿ ಬರೆದಿಟ್ಟ ಪ್ರೋಗ್ರಾಮಿಗೆ ತಕ್ಕುದಾಗಿ ಜರುಗುವಂಥವು!

ಇನ್ನು ಕನ್ನಡದಲ್ಲಿ ಓದಲಾಗುವ ಖೆಮಿಸ್ಟ್ರಿಯಲ್ಲಿ- ಸಾವಯವ ರಸಾಯನ (organic chemistry), ನಿರವಯ ರಸಾಯನ (inorganic chemistry) ಅಂತನ್ನುವ ಪ್ರಯೋಗಗಳಿವೆ. ಇಲ್ಲಿ ಸಾವಯವ ಅಂತನ್ನುವುದು ಜೀವಿಗಳಿಗೆ ಸಂಬಂಧಿಸಿದ ಅಥವಾ ‘ಜೀವ’ವನ್ನು ಕಟ್ಟುವ ರಸಾಯನಗಳನ್ನು ಕುರಿತು ರೆಫರಿಸುತ್ತದೆ. ಗ್ಲುಕೋಸ್, ಸುಕ್ರೋಸ್... ಇತ್ಯಾದಿ ಸಕ್ಕರೆಗಳು, ಪ್ರೋಟೀನು-ಅಮಿನೋಆಮ್ಲಗಳು... ಇತ್ಯಾದಿಗಳು ‘ಸಾವವಯವ’ವೆಂದು ನೆನಪಿಗೆ ಬರುತ್ತವೆ. ಹಾಗೆಯೇ ಖೆಮಿಸ್ಟ್ರಿಯಲ್ಲಿ ನಿರವಯವ- ಅಜೀವ/ನಿರ್ಜೀವ ವಸ್ತುಕಣಗಳಿಗೆ ಸಂಬಂಧಿಸಿದ್ದು. 

ವಿವರಣೆ ಹೆಚ್ಚಾಯಿತೇನೋ... ಇರಲಿ. 

ಇನ್ನು ನನ್ನ ‘ನಿರವಯವ’ಕ್ಕೆ ಸಂಬಂಧಿಸಿದ ಹಾಗೆ- ಒಂದೆರಡು ಮಾತು. ಅವಯವಗಳಿರುವ ನಾವೆಲ್ಲರೂ ಸಾವಯವರು. ನಮ್ಮೊಳಗೆ ಅವಯವವಿಲ್ಲದ ‘ಇನ್ನೊಂದು’ ಇದೆಯಲ್ಲ- ಒಳಗಿದ್ದು ನನ್ನನ್ನು ‘ನಾನು’ ಅಂತ ಗಣಿಸುವುಂಥದು... ಅದು ನನ್ನ ಮಟ್ಟಿಗಿನ ನಿರವಯವ!
ದಯಮಾಡಿ ನನ್ನ ‘ನಿರವಯವ’ವನ್ನು ಕೊಂಡು ಓದಿ. ‘ಛಂದ’ವನ್ನು ಉದ್ಧರಿಸಿ.  



ಶುಕ್ರವಾರ, ಆಗಸ್ಟ್ 26, 2011

ಕುವೆಂಪು ಕಾಡಿಂದ ಬೇಂದ್ರೆ ಕೇರಿಗೆ...!


ಓದುಗರೆಲ್ಲರಿಗೂ ನಮಸ್ಕಾರ...

ಈ ಬದುಕೇ ಹೀಗೇ ಏನೋ..
ಅಂದುಕೊಂಡಿದ್ದು ಇನ್ನೇನೋ ಆಗಿಬಿಡುತ್ತದೆ, ಕನಸಿಗೆ ಬ್ರೇಕ್ ಹಾಕಿ ಧುತ್ತೆಂದು ಕಟುವಾಸ್ತವಗಳನ್ನೆಲ್ಲಾ ಎದುರಿಗೆ ತಂದು ನಿಲ್ಲಿಸುತ್ತದೆ, ಒಮ್ಮೊಮ್ಮೆ ಅಚ್ಚರಿಯ ಅಂಚಿಗೆ ದೂಡುತ್ತದೆ, ಅಸಂಗತಗಳನ್ನೆಲ್ಲಾ ಅಡ್ಡ ತಂದು ಆಗಾಗ ಕಾಡುತ್ತದೆ, ಹೀಗೆ ಏನೇನೋ...!

ಅಷ್ಟಕ್ಕೂ ನಾನು ಧಾರವಾಡದಂತಹ ಧಾರವಾಡಕ್ಕೆ ಬಂದು ಬದುಕುತ್ತೆನೆಂದು  ಕನಸಲ್ಲೂ ಯೋಚಿಸಿರಲಿಲ್ಲ.ಅಂಥ ಯಾವ ಆಸೆಯು ನನಗಿರಲಿಲ್ಲ. ತೀರಾತೀರ ಮಲೆನಾಡಿನ ಮಧ್ಯದ ಊರಿಂದ ಬಂದ ನನಗೆ ಹಾಗೆ ಯೋಚಿಸುವುದರ ಅಗತ್ಯವೂ ಇರಲಿಲ್ಲ. ಆದರು...

ಏನೇನೋ ಆಗಿ ಕೊನೆಗೂ ಗಟ್ಟಿ ನಿರ್ಧಾರ ಮಾಡಿ, ಬೆಂಗಳೂರನ್ನು ಬದಿಗೊತ್ತಿ, ಧಾರವಾಡಕ್ಕೆ ಬಂದು ಕುಳಿತಿದ್ದೇನೆ.ಅದ್ಯಾವ ಗಳಿಗೆಯಲ್ಲಿ  ಧಾರವಾಡ ಬಂದು ನನ್ನೊಳಗೆ ಕುಳಿತಿತೋ ಗೊತ್ತಿಲ್ಲ...


ಇಷ್ಟಕ್ಕೂ ನನಗೂ ಒಂದು ಬದಲಾವಣೆ ಬೇಕಿತ್ತು.ಎಲ್ಲರಿಗೂ ಮಹಾನಗರಿ ಬೆರಗು ಹುಟ್ಟಿಸಿದರೆ ನನಗೆ ಒಂದೇ  ವರ್ಷದಲ್ಲಿ ಬೋರು ಹೊಡೆಸತೊಡಗಿತ್ತು.ಮುಖವಾಡ ಹೊತ್ತು ಬದುಕುವುದು ಸಾಕುಸಾಕಾಗಿತ್ತು. ಹೀಗಾಗಿ ಧಾರವಾಡ ಬಳಿಯ ಈ ಹಳ್ಳಿಯ ಕಾಲೇಜಿಗೆ ಬರಬೇಕಾಯ್ತು...

ಅಂದ  ಹಾಗೆ ಧಾರವಾಡಕ್ಕೆ ವಿಶ್ರಾಂತಿತಾಣ ಅಂತಲೂ ಅರ್ಥ ಇದೆ ಅನ್ನುತ್ತೆ ವಿಕಿಪೇಡಿಯಾ.ಬಯಲುನಾಡಿಂದ ಮಲೆನಾಡ ಸೆರಗಿಗೆ ಹೆಬ್ಬಾಗಿಲ ಹಾಗಿದೆ ಈ ಊರು! ಜೊತೆಗೆ ಪೇಡದ ಸವಿ ಬೇರೆ..!

"ಬೆಂಗಳೂರಂಥಾ ಬೆಂಗಳೂರು ಬಿಟ್ಟು ಧಾರವಾಡಕ್ಕೆ ಯಾಕೆ ಹೋಗ್ತಿ?" ಅಂತ ಮೂಗು ಮುರಿದು ಪ್ರಶ್ನಿಸಿದವರೇ ಹೆಚ್ಚು.ಆದರೆ ಅವರಿಗೆ ನನ್ನೊಳಗಿನ ತಳಮಳಗಳನ್ನೆಲ್ಲಾ ಹೇಗೆ ಹೇಳಲಿ ಹೇಳಿ? "ಅಲ್ಲಿ ಜನಾ ತುಂಬಾ ಒರಟಂತೆ" ಅಂತ ಹೇಳಿದವರಿಗೇನು ಕಮ್ಮಿಯಿಲ್ಲ. ಆದರೆ 'ಅತ್ತಾರೆ ಅತ್ತುಬಿಡು ಹೊನಲು ಬರಲಿ' ಅಂತ ಭಾವುಕರಾಗಿ ಹಾಡಿದ ಕವಿ ಇಲ್ಲಿಯವರೇ ಅಂತ ಅವರಿಗೆ ಹೇಗೆ ಹೇಳಲಿ?!


ಒಟ್ಟಿನಲ್ಲಿ ಕುವೆಂಪು ಕಾಡಿಂದ ಬೇಂದ್ರೆ ಕೇರಿಗೆ ಬಂದು ಕುಳಿತಿದ್ದೇನೆ! ಬೇಂದ್ರೆಯಷ್ಟೇ ಅಲ್ಲ, ಗೋಕಾಕ್, ಕಾರ್ನಾಡರ ಮೂಲ ಬೇರೂ ಇಲ್ಲೇ ಇದೆ. ಸಾಹಿತಿಗಳಷ್ಟೇ ಅಲ್ಲ.... ಅಂತ ವಿಕಿಪೀಡಿಯಾ ಖ್ಯಾತ ಧಾರವಾಡಿಗರ ಉದ್ದ ಪಟ್ಟಿಯನ್ನೇ ಹಾಕಿದೆ.

ಈ ನಡುವೆ ನನ್ನ ಬ್ಲಾಗು ಬಾಗಿಲು ಹಾಕಿಕೊಂದು ಕೂತುಬಿಟ್ಟಿತ್ತು. ಶುರುಮಾಡಿ ವರ್ಷಗಳೇ ಕಳೆದರೂ ಬೆರಳೆಣಿಕೆಯಷ್ಟೇ ಬರಹಗಳು ಇಲ್ಲಿವೆ. ಅವೋ ಓಬೀರಾಯನ ಕಾಲದ್ದು.ಆಮೇಲೆ ನಾನೂ ಸಾಕಷ್ಟು ಬೆಳೆದಿದ್ದೇನೆ,ಬಲಿತಿದ್ದೇನೆ,ಬರೆದಿದ್ದೇನೆ.ಆದರೂ ಯಾಕೆ ಬ್ಲಾಗ್ ಅಪ್ ಡೇಟ್ ಮಾಡಲಿಲ್ಲ..?

ಬೆಂಗಳೂರು ಸೇರಿದ ಮೇಲೆ ಧಾವಂತ ಬದುಕಿಗೆ ಧಾಂಗುಡಿಯಿಟ್ಟಿತು. ಅದರಲ್ಲೂ ರಾಷ್ಟೀಯ ಜೀವ ವಿಜ್ಣಾನ ಕೇಂದ್ರದಲ್ಲಿ ಸಣ್ಣದೊಂದು ಸಂಶೋಧನೆಗೆ ಶುರುವಿಟ್ಟುಕೊಂಡ ಮೇಲಂತೂ .....ತುರಿಸಲೂ ಪುರುಸೊತ್ತಿರಲಿಲ್ಲ.ಬರೆಯದೇ ಇರಲಾರೆ ಎನಿಸಿ ಆಗೀಗ ಬರೆದಿದ್ದು ಪುಸ್ತಕದಲ್ಲೇ ಉಳಿದುಹೋಯಿತೇ ವಿನಹ ಬ್ಲಾಗಿನವರೆಗೆ ಬರಲಿಲ್ಲ.ಟೈಪುಕುಟ್ಟುವ ವಿಚಾರದಲ್ಲಂತೂ ನಾನು ಶುದ್ದ ಸೋಮಾರಿ!


ಈಗ ಧಾರಾನಗರಿಯ ಬಳಿಯ ಪುಟ್ಟ ಊರಿನ ಹಾಸ್ಟೆಲಿಗೆ ಸೇರಿಕಂಡಿದ್ದೇನೆ.ಇನ್ನಾದರೂ ಕಂಡಿದ್ದು, ಓದಿದ್ದನ್ನು ನಿಮ್ಮೊಡನೆ ಹಂಚಿಕೊಳ್ಳಬೇಕಿದೆ.

ಸದ್ಯಕ್ಕೆ ಒಂದಿಷ್ಟು ಪುಸ್ತಕ ಗುಡ್ಡೆ ಹಾಕಿಕಂಡು ಕೂತಿದ್ದೇನೆ. I Too Had A Dream ಅನ್ನೋದನ್ನ ಈಗಾಗಲೇ ಓದಿ ಮುಗಿಸಿದ್ದೇನೆ.ಕಳೆದ ವರ್ಷ ಗುಜರಾತಿನ ಆನಂದ್ ಗೆ ಹೋದಾಗ ಕೊಂಡ ಹಾಲು ಕ್ರಾಂತಿಯ ಹರಿಕಾರನ ಆತ್ಮಕಥೆಯಿದು. ಕನ್ನಡಕ್ಕೆ ಇದನ್ನು ಯಾರಾದರೂ ಅನುವಾದಿಸಿದ್ದರೋ ಇಲ್ಲವೋ ಗೊತ್ತಿಲ್ಲ. ನಾನಂತೂ ಒಂದಿಷ್ಟನ್ನು ಕನ್ನಡೀಕರಿಸಿ ಇಟ್ಟಿದ್ದೇನೆ. ತುಂಬಾ ಕುತೂಹಲಕಾರಿ ಪುಸ್ತಕ.ಮುಂದೊಂಮ್ಮೆ ವಿವರವಾಗಿ ಬರೆಯುವೆ.

ಇನ್ನುಳಿದವು ನನ್ನ ಓದು ವಿಜ್ನಾನ ಸಂಶೋಧನೆಗೆ ಪರೋಕ್ಷವಾಗಿ ಸಂಭಂಧಿಸಿದವು. Costs and benefits of transgenic crops -ಕುಲಾಂತರಿಗಳ ನಿಜ ಹಣೆಬರಹ ಇದರಲ್ಲಿದೆ.A doble image of double helix ಇಂಥದ್ದೇ ಇನ್ನಂದು ಪುಸ್ತಕ. Agriculture's ethical horizon ಅನ್ನೋ ಕೃಷಿಯ ಇತಿಮಿತಿಗಳ ಬಗೆಗಿನ ಪುಸ್ತಕವೂ ಜೊತೆಗಿದೆ.

ಮತ್ತೊ0ದು Darwinism DEFENDED ಅಂತ. ಡಾರ್ವಿನ್ನನ ವಿಕಾಸವಾದವನ್ನು ಒರೆಗೆ ಹಚ್ಚುವ ಪುಸ್ತಕ.ಇದನ್ನು ಓದಲು ಪ್ರಾರಂಭಿಸುವ ಮೊದಲು ಮತ್ತೊಮ್ಮೆ 'ಕರ್ವಾಲೋ' ಅನ್ನು ಓದಿಕೊಂಡೆ.ಅಥವಾ ಕರ್ವಾಲೋದಿಂದಾಗಿಯೇ ಈ ಪುಸ್ತಕದ ಬಗ್ಗೆ ಕುತೂಹಲ ಹೆಚ್ಚಿದೆ!!

ಈ ಎಲ್ಲದರ ಬಗ್ಗೆ ನಿಮ್ಮೊಡನೆ ಹಂಚಿಕೊಳ್ಳಬೇಕಿದೆ.ಆದರೆ...ಅದು ನನ್ನ ಪುಸ್ತಕ ದಾಟಿ ಬ್ಲಾಗಿನ ಬಾಗಿಲು ಬಡಿದು ಇಲ್ಲಿ ಸೇರಿಕೊಳ್ಳುತ್ತಾ...?

ಗೊತ್ತಿಲ್ಲ!

(ಕೊನೆಗೊಂದು ಮಾತು: ಅಕಾಡೆಮಿಕ್ ವಲಯದ ಹೊರಗಿನವರಿಗೆ ಇಂತಹ ಪುಸ್ತಕಗಳು ಸುಲಭಕ್ಕೆ ಸಿಗಲಿಕ್ಕಿಲ್ಲ.ಓದಲು ಆಸಕ್ತಿಯಿದ್ದರೆ ಹೇಳಿ,ಪ್ರತಿಯೊಂದನ್ನು ಕಳಿಸಿಕೊಡುವೆ..)