ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಶನಿವಾರ, ನವೆಂಬರ್ 13, 2021

ಗೋದಾವರಿಯಾಚೆಗಿನ ಕನ್ನಡ

“ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್

ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ

ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ

ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್”

ರಾಷ್ಟ್ರಕೂಟರ ದೊರೆ ಅಮೋಘವರ್ಷ ನೃಪತುಂಗನ ಕಾಲದಲ್ಲಿ(ಕ್ರಿ.ಶ. 814–878) ಕನ್ನಡ ನಾಡು ಕಾವೇರಿಯಿಂದ ಗೋದಾವರಿಯವರೆಗೆ ವಿಸ್ತರಿಸಿತ್ತೆಂದು ಅವನ ಆಸ್ಥಾನಕವಿ ಶ್ರೀವಿಜಯ ಬರೆದಿದ್ದಾನಷ್ಟೇ? ‘ಕವಿರಾಜಮಾರ್ಗ’ ಬರೆದ ಕೆಲವು ದಶಕಗಳ ಬಳಿಕ ನೃಪತುಂಗನ ವಂಶಸ್ಥ ಮುಮ್ಮಡಿ ಕೃಷ್ಣನೆಂಬ ಕನ್ನಡದ ದೊರೆಯು ತನ್ನ ರಾಜ್ಯದ ಗಡಿಯನ್ನು ಇನ್ನಷ್ಟು ಉತ್ತರಕ್ಕೆ ವಿಸ್ತರಿಸಿ, ವಿಂಧ್ಯ ಪರ್ವತದ ತಪ್ಪಲಿನ ನರ್ಮದೆಯವರೆಗೂ ಕೊಂಡೊಯ್ದಿದ್ದನೆಂದು ನಿಮಗೆ ಗೊತ್ತೇ?
ಸರಿಸುಮಾರು ನೂರು ವರ್ಷಗಳ ಹಿಂದಿನ ಕತೆ. ಮೈಹರ್ ಸಂಸ್ಥಾನವೆಂಬುದು ಈಗಿನ ಮಧ್ಯಪ್ರದೇಶದ ಉತ್ತರ ಭಾಗದಲ್ಲಿದ್ದ ಒಂದು ಪುಟ್ಟ ರಾಜ್ಯ. ವಿಸ್ತೀರ್ಣದಲ್ಲಿ ನಮ್ಮ ಹುಬ್ಬಳ್ಳಿಗಿಂತ ಹೆಚ್ಚಿಲ್ಲದ ಸಂಸ್ಥಾನ. ಹಿಂದೊಮ್ಮೆ ಥಾಕೂರರು ಆಳಿದ್ದ ಈ ರಾಜ್ಯವನ್ನು ಬ್ರಿಟಿಷರ ಹಸ್ತಕ್ಷೇಪದಿಂದಾಗಿ ರಜಪೂತರಿಗೆ ಹಸ್ತಾತರಿಸಲಾಗಿತ್ತು. ಮಹಾರಾಜ ಬ್ರಿಜ್ ನಾಥ ಸಿಂಗ್ ಜುದೇವನೆಂಬ ದೊರೆ ಆಳುತ್ತಿದ್ದ ಕಾಲ. ಹಿಂದೂಸ್ತಾನಿ ಸಂಗೀತ ಪ್ರಿಯರಿಗೆ ಮೈಹರ್ ಘರಾಣೆಯ ಪರಿಚಯವಿದ್ದೀತು. ಅದನ್ನು ಪ್ರಾರಂಭಿಸಿದ ಬಾಬಾ ಅಲ್ಲಾವುದ್ದೀನ್ ಖಾನ್ ಈ ಸಂಸ್ಥಾನದ ರಾಜಾಶ್ರಯದಲ್ಲಿದ್ದ ಸಂಗೀತಗಾರ.ಇವರ ಶಿಷ್ಯಂದಿರಾದ (ಅಳಿಯ, ಸಿತಾರ್ ಕಲಾವಿದ) ಪಂಡಿತ್ ರವಿಶಂಕರ್, ಹಾಗೂ (ಮಗ, ಸರೋದ್ ಕಲಾವಿದ) ಪಂಡಿತ್ ಅಲಿ ಅಕ್ಬರ್ ಖಾನ್, ವಿದುಷಿ ಅನ್ನಪೂರ್ಣಾದೇವಿ (ಮಗಳು, ಸುರ್ ಬಹಾರ್), ಪಂಡಿತ್ ನಿಖಿಲ್ ಬ್ಯಾನರ್ಜಿ (ಸಿತಾರ್), ಪಂಡಿತ್ ಪನ್ನಾಲಾಲ್ ಘೋಷ್ (ಬಾನ್ಸುರಿ), ಪಂಡಿತ್ ರಾಜೀವ್ ತಾರಾನಾಥ (ಸರೋದ್) ಮೊದಲಾದ ಮಹನೀಯರು ಮೈಹರದ ಹೆಸರನ್ನು ಸಂಗೀತದ ಮೂಲಕ ಚಿರಸ್ಥಾಯಿಯಾಗಿಸಿದ್ದಾರೆ.
ಮಹಾರಾಜ ಬ್ರಿಜ್ ನಾಥ ಸಿಂಗ್ ಜುದೇವನ ಆಸ್ಥಾನದ ದಿವಾನನು ಒಮ್ಮೆ ಮೈಹರದಿಂದ ಹನ್ನೆರೆಡು ಮೈಲಿಗಳಷ್ಟು ದೂರದಲ್ಲಿ, ಜೂರಾ ಎಂಬ ಪುಟ್ಟ ಹಳ್ಳಿಯಲ್ಲಿದ್ದ ಮಿತ್ರರ ಬಂಗಲೆಗೆ ಹೋಗಿದ್ದ. ಪಾಳುಬಿದ್ದ ಥಾಕೂರರ ಕೋಟೆಯ ಆವರಣದಲ್ಲಿ ಹೊಸದಾಗಿ ಕಟ್ಟಿದ್ದ ಆ ಬಂಗಲೆಯ ಬಾಗಿಲುವಾಡದ ಮೇಲಿನ ಹಾಸುಗಲ್ಲಿನಲ್ಲಿ ಅಪರಿಚಿತ ಅಕ್ಷರಗಳಂಥಹ ಚಿತ್ತಾರ ದಿವಾನನ ಗಮನ ಸೆಳೆಯಿತು. ಬಂಗಲೆ ಕಟ್ಟಿದವನಿಗೆ ಅದರ ಮಹತ್ತು ಗೊತ್ತಿಲ್ಲ, ಚಂದದ ಚಪ್ಪಟೆಕಲ್ಲು ಕೋಟೆಯ ಆವರಣದಲ್ಲಿ ಸಿಕ್ಕಿತೆಂದು ತಂದು ಗೋಡೆಗೇರಿಸಿದ್ದನಷ್ಟೇ. ದಿವಾನನಿಗೆ ಕುತೂಹಲ ಹೆಚ್ಚಾಯಿತು. ಬ್ರಿಟಿಷರಿಗೆ ಇಂಥದರಲ್ಲಿ ಆಸಕ್ತಿಯಿದೆಯೆಂದು ಬಲ್ಲ ದಿವಾನ ಕೂಡಲೇ ಪುರಾತತ್ವ ಇಲಾಖೆಯವರಿಗೆ ಸುದ್ದಿ ಮುಟ್ಟಿಸಿದ.
ಆಗ ಪುರಾತತ್ವ ಇಲಾಖೆಯ ಪಶ್ಚಿಮ ವಿಭಾಗದ ಮುಖ್ಯಸ್ಥರಾಗಿದ್ದವರು ರಾಖಲದಾಸ್ ಬಂಡೋಪಾಧ್ಯಾಯ, ಬ್ರಿಟಿಷರ ಬಾಯಲ್ಲಿ ಚುಟುಕಾಗಿ ಆರ್. ಡಿ. ಬ್ಯಾನರ್ಜಿ. ಸಿಂಧೂ ತಟದ ನಾಗರೀಕತೆಯ ಮೊಹೆಂಜೋದಾರೋವನ್ನು ಮತ್ತೆ ಬೆಳಕಿಗೆ ತಂದ ಮಹನೀಯರು ಇವರು. ಅಪ್ರತಿಮ ಇತಿಹಾಸಕಾರ ಬಂಡೋಪಾಧ್ಯಾಯರು ಪ್ರಸಿದ್ಧ ಬಂಗಾಳಿ ಸಾಹಿತಿಯೂ ಆಗಿದ್ದರು. ಮೈಹರದ ದಿವಾನನ ಮಾತು ಕೇಳಿ ಅವರು ಜೂರಾ ಹಳ್ಳಿಗೆ ಹೋಗಿ ನೋಡಿದರು. ಕಲ್ಲಿನ ಮೇಲಿನ ಹಳೆಯ ಶಾಸನದ ಅಕ್ಷರಗಳು ಅವರಿಗೂ ಅಪರಿಚಿತ. ಶಾಸನದ ಅಚ್ಚುಕಟ್ಟಾದ ಇಂಕಿನ ಪ್ರತಿ ತೆಗೆದು ಅದನ್ನು ತಮ್ಮ ಸಹೋದ್ಯೋಗಿ ಕೃಷ್ಣಶಾಸ್ತ್ರಿಗಳಿಗೆ ಕಳುಹಿಸಿದರು.
ರಾವ್ ಬಹಾದ್ದೂರ್ ಬಿರುದಾಂಕಿತರಾಗಿದ್ದ ಕೃಷ್ಣಶಾಸ್ತ್ರಿಗಳು ಹೊಸಕೋಟೆಯಲ್ಲಿ ಹುಟ್ಟಿದವರು. ಎಪಿಗ್ರಾಫಿಯ ಇಂಡಿಕಾದ ಹಲವು ಸಂಪುಟಗಳನ್ನು ಸಂಪಾದಿಸಿದ ಮಹತ್ವದ ಶಾಸನತಜ್ಞರು. ಬಂಡೋಪಾಧ್ಯಾಯಯರು ಕಳುಹಿಸಿದ್ದ ಚಿತ್ರಗಳನ್ನು ನೋಡಿದಾಕ್ಷಣ ಅದು ಹಳೆಗನ್ನಡದ ಲಿಪಿಯೆಂದು ಅವರಿಗೆ ಸ್ಪಷ್ಟವಾಯ್ತು. ದೂರದ ಮಧ್ಯಪ್ರದೇಶದಲ್ಲಿ ಅಚ್ಚಗನ್ನಡದ ಶಾಸನ! ಕೃಷ್ಣಶಾಸ್ತ್ರಿಗಳು ಶಾಸನದ ವಿವರಗಳನ್ನು ಓದಿ ದಾಖಲಿಸಿ ಅದನ್ನು ತಮ್ಮ ಶಿಷ್ಯ ತಿರುಮಲೆ ತಾತಾಚಾರ್ಯ ಶರ್ಮರಿಗೆ ಕಳುಹಿಸಿದರು. ತಿ.ತಾ.ಶರ್ಮರು ಅದನ್ನು ಇನ್ನಷ್ಟು ಪರಿಷ್ಕರಿಸಿ ಮಿಥಿಕ್ ಸೊಸೈಟಿಯ ಪತ್ರಿಕೆಯಲ್ಲಿ ಪ್ರಕಟಣೆಗೆಂದು 1922ರಲ್ಲಿ ಕಳಿಸಿದರು. ಅದೇ ಸುಮಾರಿನಲ್ಲಿ ಪುರಾತತ್ವ ಇಲಾಖೆಯಲ್ಲಿದ್ದ ಲಕ್ಷ್ಮೀನಾರಾಯಣ ರಾಯರೂ ಇನ್ನಷ್ಟು ಅಧ್ಯಯನ ಮಾಡಿ ಜೂರಾ ಶಾಸನದ ಬಗ್ಗೆ ಎಪಿಗ್ರಾಫಿಯಾ ಇಂಡಿಕಾದ ಸಂಪುಟವೊಂದರಲ್ಲಿ ಲೇಖನ ಬರೆದಿದ್ದಾರೆ.
ಹೀಗೆ ಶತಮಾನಗಳ ಹಿಂದೆ ಬಹುಶೃತ ವಿದ್ವಾಂಸರ ಕಣ್ಣಿಗೆ ಬಿದ್ದಿದ್ದ ಈ ಜೂರಾ ಶಾಸನ ಕನ್ನಾಡಿನ ದೊರೆಯೊಬ್ಬ ಗೋದಾವರಿಯಾಚೆಗೆ ರಾಜ್ಯ ಬೆಳೆಸಿದ್ದರ ಬಗ್ಗೆ ಮಹತ್ವದ ದಾಖಲೆಯಾಗಿದೆ. ವಿದ್ವಾಂಸರ ಪ್ರಕಾರ ಮಧ್ಯಪ್ರದೇಶದಲ್ಲಿ ದೊರೆತ ಈ ಕನ್ನಡ ಶಾಸನ 10ನೇ ಶತಮಾನದ ರಾಷ್ಟ್ರಕೂಟರ ಕಾಲದ್ದು. ಇದರಲ್ಲಿನ ಬರಹವು ಹಳೆಗನ್ನಡದ ಲಿಪಿಯಲ್ಲಿದೆ. ಸುಮಾರು ಐದು ಅಡಿಗಳಷ್ಟು ಎತ್ತರದ ಕಲ್ಲಿನ ಮೇಲಿನ ಬರಹವು ಕಂದಪದ್ಯ ಹಾಗೂ ಗದ್ಯಗಳ ಮಿಶ್ರಣ. ಕನ್ನರದೇವನೆಂಬ ದೊರೆಯನ್ನು, ಮಹಾ ಸಂಭಾವಿತನೆಂದೂ, ‘ಪರಾಂಗನಾ ಪುತ್ರ’ ಎಂಬ ಬಿರುದಾವಳಿಯೊಂದಿಗೆ ಹೊಗಳುವ ಶಾಸನ ಇದು.

ಸೋಲದೆ ಪರವನಿತೆಗೆ ಕಣ್
ಸೋಲದು ಮೊಲೆವಾಲನೂಡಿ ನಡಪಿದ ತಾಯಿಂ
ಮೇಲೆನೆ ಬಗೆಗುಂ ನೋಡಿರೆ
ಸೋಲದು ಚಿತ್ತಂ ಪರಾಂಗನಾಪುತ್ರಕನಾ
ನೋಡಿರೆ ಪರವಧುಗೆ ಮನಂ
ಕೂಡದು ಸೂೞ್ಸೂೞೊಳೆತ್ತಿ ನಡಪಿದ ತೋಳು
ಣ್ಡಾಡಿದ ಮೊಲೆ ಬಸಿಱೊಳಗಿ
ೞ್ದಾಡಿದ ಚಿತ್ತಂ ಪರಾಂಗನಾಪುತ್ರಕನಾ
ರಾಜನು ಪರಸ್ತ್ರೀಗೆ ಮನಸೋಲದವನಂತೆ. ಹಾಲೂಡಿಸಿದ ತಾಯಿಗಿಂತ ಹೆಚ್ಚಾಗಿ ಅವರನ್ನು ಗೌರವದಿಂದ ಕಾಣುತ್ತಿದ್ದನಂತೆ. ಪರಸ್ತ್ರೀಯರನ್ನು ಕಂಡಾಕ್ಷಣ ಅವನಿಗೆ ತನ್ನ ತಾಯಗರ್ಭದಲ್ಲಿ ಮಗುವಾಗಿದ್ದಂತಹ ಬೆಚ್ಚಗಿನ ಭಾವ ಮೂಡುತ್ತಿತ್ತಂತೆ! ಕೊನೆಯಲ್ಲಿ ‘ಉಬ್ಬಿಕಾಮೈಸೆಟ್ಟಿ’ಯ ತಮ್ಮ ‘ತುಯ್ಯಲ ಚನ್ದಯ್ಯ’ನೆಂಬಾತ ಈ ಪ್ರಶಸ್ತಿಯನ್ನು ಬರೆಯಿಸಿದನೆಂದೂ, ಚಿಮ್ಮಯ್ಯನೆಂಬಾತ ಬರೆದನೆಂದೂ ಈ ಶಾಸನ ಹೇಳುತ್ತದೆ.
ವಿದ್ವಾಂಸರ ಪ್ರಕಾರ ರಾಷ್ಟ್ರಕೂಟರ ದೊರೆ ಮುಮ್ಮಡಿ ಕೃಷ್ಣನೇ ಈ ಕನ್ನರ ದೇವ. ಕ್ರಿ. ಶ. 939ರಿಂದ 967ರ ನಡುವೆ ಆಳಿದವನು. ರಾಷ್ಟ್ರಕೂಟ ಸಾಮ್ರಾಜ್ಯವನ್ನು ಉತ್ತರದಲ್ಲಿ ಗೋದಾವರಿಯಾಚೆಗೆ, ದಕ್ಷಿಣದಲ್ಲಿ ರಾಮೆಶ್ವರದವರೆಗೆ ವಿಸ್ತರಿಸಿದ ದೊರೆ ಇವನು. ಶ್ರೀಲಂಕೆಯ ಮಹಾರಾಜನಿಂದಲೂ ಕಪ್ಪ-ಕಾಣಿಕೆಗಳನ್ನು ಪಡೆಯುತ್ತಿದ್ದನಂತೆ. ಉಭಯಕವಿ ಚಕ್ರವರ್ತಿ ಪೊನ್ನನನ್ನು ಪೊರೆದ ದೊರೆ. ಕೃಷ್ಣನ ಕಾಲದಲ್ಲಿ ಉತ್ತುಂಗಕ್ಕೆ ತಲುಪಿದ ರಾಷ್ಟ್ರಕೂಟರ ಸಾಮ್ರಾಜ್ಯ ಇವನ ಸಾವಿನ ಬಳಿಕ ಅವನತಿಯತ್ತ ಸಾಗಿತು.
ಹಾಗೆ ನೋಡಿದರೆ ಕನ್ನಡದ ದೊರೆಯೊಬ್ಬ ಮಧ್ಯಪ್ರದೇಶದ ಭೂಭಾಗಗಳನ್ನು ಆಳಿದ್ದು ಇದೇ ಮೊದಲೇನಲ್ಲ. ಕನ್ನಡಮೂಲದ (ಖಚಿತ ಆಧಾರಗಳಿಲ್ಲ) ಶಾತವಾಹನರ ಸಾಮ್ರಾಟರು, ಉತ್ತರದಿಂದ ಬಂದರೂ ಇಲ್ಲೇ ನೆಲೆನಿಂತು ಆಳಿದ ಬಾದಾಮಿಯ ಚಲುಕ್ಯರೂ ಕೂಡಾ ಕೆಲಕಾಲ ನರ್ಮದೆಯವರೆಗೂ ಆಳಿದ್ದುಂಟು. ಆದರೆ ಅವರ ಕಾಲದ ಕನ್ನಡ ಶಾಸನ ಮಧ್ಯಪ್ರದೇಶದಲ್ಲೆಲ್ಲೂ ಲಭ್ಯವಿದ್ದಂತಿಲ್ಲ. ಅತ್ತ ಗುಜರಾತಿನ ಕೆಲ ಶಾಸನಗಳಲ್ಲೂ ಹಳೆಗನ್ನಡದ ಕುರುಹು ಇದೆಯೆಂದು ಶಂಬಾ ಜೋಶಿಯವರು ಬರೆಯುತ್ತಾರೆ. ಇನ್ನು ಕರ್ನಾಟಕದಾಚೆಗೆ ಹೋಗಿ ಸಾಮ್ರಾಜ್ಯ ಸ್ಥಾಪಿಸಿದ ಕನ್ನಡ ಮೂಲದ ದೊರೆಗಳು ಹಲವರಿದ್ದಾರೆ.
“ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್” ಎಂದು ಕವಿ ಹೇಳಿದ್ದಾನೆಂದು ಅಥವಾ ವಿಂಧ್ಯದ ಕಣಿವೆಯಲ್ಲೂ ಕನ್ನಡ ಶಾಸನ ಇದೆಯೆಂಬ ಕಾರಣಕ್ಕೆ ರಾಷ್ಟ್ರಕೂಟರ ಸಾಮ್ರಾಜ್ಯದ ಎಲ್ಲೆಡೆ ಕನ್ನಡವೇ ಪ್ರಧಾನ ಭಾಷೆಯಾಗಿತ್ತೆಂದು ಭ್ರಮಿಸಬೇಕಿಲ್ಲ. ಅದು ರಾಜಭಾಷೆ, ಕವಿಯ ಪ್ರಿಯ ಭಾಷೆ, ಅಷ್ಟೇ. ರಾಷ್ಟ್ರಕೂಟರ ಹಲವು ಶಾಸನಗಳು, ತಾಮ್ರಪತ್ರಗಳು ಸಂಸ್ಕೃತದಲ್ಲೂ ಇವೆ. ಕಿಸುವೊಳಲು, ಕೊಪಣ, ಪುಲಿಗೆರೆ, ಒಂಕುಂದಗಳು ‘ತಿರುಳ್ಗನ್ನಡ’ದ ನಾಡೆಂದು ಕವಿರಾಜಮಾರ್ಗಕಾರನೇ ಹೇಳಿರುವಾಗ, ದೂರದ ಮಧ್ಯಪ್ರದೇಶದಲ್ಲೂ ಆಗ ಕನ್ನಡವು ಜನಭಾಷೆ ಆಗಿತ್ತೆಂದು ಭಾವಿಸುವುದು ತಪ್ಪಾದೀತು.
ಭಾಷೆಯೊಂದು ಉಳಿದು ಬೆಳೆಯಬೇಕಾದರೆ ಅದು ರಾಜಭಾಷೆಯಾಗಿದ್ದರಷ್ಟೇ ಸಾಲದು, ಜನಪದರ ಭಾಷೆಯೂ ಆಗಿರಬೇಕು. ಸಾಮ್ರಾಜ್ಯಗಳು ಉರುಳಿ ಹೋದರೂ ಭಾಷೆಯನ್ನು ಬದುಕಾಗಿಸಿಕೊಂಡ ಜನಸಾಮನ್ಯರು ಅದನ್ನು ಉಲಿದು ಉಳಿಸಿ-ಬೆಳೆಸುತ್ತಾರೆ. ಕನ್ನಡ ಶಾಸನ ದೊರೆತ ಮೈಹರದ ಬಳಿಯ ಜೂರಾದಲ್ಲಿ ಈಗ ಯಾರಿಗೂ ಕನ್ನಡ ಗೊತ್ತಿದ್ದಂತಿಲ್ಲ. ಹತ್ತನೇ ಶತಮಾನದಲ್ಲಿ ಮುಮ್ಮಡಿ ಕೃಷ್ಣನ ಆಳ್ವಿಕೆಯ ಬಳಿಕದ ಹನ್ನೊಂದು ಶತಮಾನಗಳ ಈ ನಡುವಿನ ಸಮಯದಲ್ಲಿ ನರ್ಮದೆ, ಗೋದಾವರಿ, ಕಾವೇರಿಗಳಲ್ಲೆಲ್ಲ ಸಾಕಷ್ಟು ನೀರು ಹರಿದು ಹೋಗಿದೆ, ಸಾಮ್ರಾಜ್ಯಗಳು ಉರುಳಿವೆ, ಹೊಸ ರಾಜ್ಯಗಳು ಉದಿಸಿವೆ. ಮಧ್ಯ ಪ್ರದೇಶದ ಆ ಭಾಗದಲ್ಲಿ ಕನ್ನಡವು ಹೇಳಹೆಸರಿಲ್ಲದಾಗಿದೆಯಾದರೂ ಬೇರೊಂದೆಡೆ ಕನ್ನಡವನ್ನು ಮಾತನಾಡುವ ಕೆಲವು ಹಳ್ಳಿಗಳಿವೆ. ಮುಂದೆಂದಾದರೂ ಆ ಬಗ್ಗೆ ಇನ್ನಷ್ಟು ಹೇಳುವೆ.
ಹೀಗೆ ಹೋದಲ್ಲೆಲ್ಲ ತನ್ನ ಹೆಸರಿನ ಶಾಸನ ಕೆತ್ತುವ ಹವ್ಯಾಸ ಮಹಾರಾಜರಿಗಷ್ಟೇ ಸೀಮಿತವಲ್ಲ, ಬಿಡಿ. ಇತ್ತೀಚೆಗೆ ಭೋಪಾಲದ ಬೇಗಮ್ಮಳ ಕೋಟೆಯ ಆವರಣದಲ್ಲಿ ಪಾಳುಬಿದ್ದ ಗೋಡೆಯ ಮೇಲೆ ಅಮರಪ್ರೇಮಿ ಕನ್ನಡಿಗನೊಬ್ಬ ‘ರವಿ ಲವ್ಸ್ ಗೀತಾ’ ಎಂದು ಅಚ್ಚಗನ್ನಡದ ಲಿಪಿಯಲ್ಲಿ ಬರೆದಿದ್ದು ಕಾಣಿಸಿತು! ಎಂದಾದರೊಂದು ದಿನ ಇತಿಹಾಸಕಾರರು ಕನ್ನಡಿಗನೊಬ್ಬ ಇಲ್ಲಿಯವರೆಗೂ ಬಂದಿದ್ದ ಎಂಬುದಕ್ಕೆ ಸಾಕ್ಷಿಯಾಗಿ ಇದನ್ನು ಬಳಸಿಕೊಳ್ಳೊತ್ತಾರೋ ಏನೋ, ನೋಡೋಣ !
ಬಹುಶಃ ಹತ್ತನೇ ಶತಮಾನದ ಮುಮ್ಮಡಿ ಕೃಷ್ಣನ ಆಳ್ವಿಕೆಯ ಬಳಿಕ ಕನ್ನಡಿಗನೊಬ್ಬ ತನ್ನ ‘ಸಾಮ್ರಾಜ್ಯ’ವನ್ನು ಇನ್ನಷ್ಟು ಉತ್ತರಕ್ಕೆ ಬೆಳೆಸಿ, ದಿಲ್ಲಿಯಲ್ಲಿ ಕುಳಿತು ಇಡೀ ಭಾರತವನ್ನು ಕೆಲಕಾಲ 'ಆಳಿದ್ದು' ಇಪ್ಪತ್ತನೇ ಶತಮಾನದ ಅಂತ್ಯದಲ್ಲೇ ಇರಬೇಕು. ಅದು ನಮ್ಮ ಹರದನಹಳ್ಳಿಯ ದೇವೇಗೌಡರು!

-ಪ್ರಸನ್ನ ಆಡುವಳ್ಳಿ


ಗುರುವಾರ, ಜನವರಿ 21, 2021

ಬೀಡಿ ಬಾಬಾ!

ಮಧ್ಯ ಪ್ರದೇಶದ ಸಾತ್ಪುರಾ ಬೆಟ್ಟಗಳ ನಡುವಿನ ಸಣ್ಣದೊಂದು ರಸ್ತೆಯಲ್ಲಿ ಗೂಬೆಯನ್ನು ಹುಡುಕುತ್ತಾ ಜೀಪನ್ನೋಡಿಸುತ್ತಿದ್ದೆ. "..ಸಾಬ್.. ಸಾಬ್... ಏಕ್ ಮಿನಟ್ ರುಖಿಯೇ!" ಎಂದು ಹಿಂದಿನ ಸೀಟಿನಲ್ಲಿದ್ದ ಬಾಬೂಲಾಲ ಕೂಗಿದ. ಅವನಿಗೆಲ್ಲೋ ಹಕ್ಕಿ ಕಂಡಿರಬಹುದೇನೋ ಎಂದುಕೊಂಡು ಗಾಡಿ ನಿಲ್ಲಿಸಿ ಕ್ಯಾಮರಾ ತೆಗೆದುಕೊಂಡು ಹಗೂರಕ್ಕೆ ಹೆಜ್ಜೆಯಿಟ್ಟು ಕೆಳಗಿಳಿದು ಹಕ್ಕಿ ಹುಡುಕತೊಡಗಿದೆ.ಇವನೋ ಆರಾಮಕ್ಕೆ ಇಳಿದು ಬೀಡಿ ಹಚ್ಚಿ ಗಗನಮುಖಿಯಾಗಿ ಹೊಗೆಬಿಡತೊಡಗಿದ. 

ಬಿರುಬೇಸಗೆಯ ದಿನಗಳಲ್ಲಿ ಕಾಡಿನ ಮಧ್ಯೆ ಕೆಲಸ ಮಾಡುವಾಗ ಬೀಡಿ ಸೇದುವಂತಿಲ್ಲ ಎಂದು ಇವನಿಗೆ ಎಷ್ಟು ಬಾರಿ ಹೇಳಿದ್ದೇನೆ! ನನ್ನ ಕೋಪ ನೆತ್ತಿಗೇರಿತು. ನಾನು ಬೈಯ್ಯುವ ಮೊದಲೇ ಬಾಯ್ಬಿಟ್ಟ... "ಸಾಬ್, ಮುಝೆ ಬೀಡಿ ಪೀನಾ ನಹೀ ಥಾ... ಮಗರ್ ಬಾಬಾ ಕೆಲಿಯೆ ಪೀರಹಾ ಹೂ..." ಎಂದು ರಸ್ತೆಬದಿಯ ಈ 'ಬೀಡಿ ಬಾಬಾನ ಮಂದಿರ'ವನ್ನು ತೋರಿಸಿದ. 




ವರ್ಷಗಳ ಹಿಂದೆ ಇದೇ ಜಾಗದಲ್ಲಿ ಬೈಕ್ ಸವಾರನೊಬ್ಬ ಕಲ್ಲು ತಾಗಿ ಆಯತಪ್ಪಿ ಕೆಳಗೆ ಬಿದ್ದು ಸತ್ತಿದ್ದನಂತೆ. ಪ್ರಾಣ ಹೋದ ಮೇಲೂ ಅವನ ಬಾಯಲ್ಲಿದ್ದ ಬೀಡಿ ಹಾಗೇ ಉರಿಯುತ್ತಿತ್ತಂತೆ. ಆಮೇಲೆ ದಾರಿಹೋಕರಿಗೆಲ್ಲ ಅವನ ಆತ್ಮ ಕಾಟಕೊಡುತ್ತಿತ್ತಂತೆ. ಹೀಗಾಗಿ ಯಾರೋ ಪುಣ್ಯಾತ್ಮರು ಅವನು ಬೀಳಲು ಕಾರಣವಾದ ಕಲ್ಲು ಹುಡುಕಿ ಹೀಗೆ ಗೂಡು ಕಟ್ಟಿ ದೇವಸ್ಥಾನ ಮಾಡಿದ್ದಾರೆ. ಬೀಡಿ ಬಾಬಾನಿಗೆ ಬೀಡಿಯದ್ದೇ ಆರತಿ. ಉರಿದ ಬೂದಿಯೇ ಪ್ರಸಾದ. ದಾರಿಯಲ್ಲಿ ಹೋಗುವ ಡ್ರೈವರುಗಳೆಲ್ಲ ಅವನಿಗೆ ಬೀಡಿಪೂಜೆ ಮಾಡಿಯೇ ಮುಂದೆ ಹೋಗುತ್ತಾರಂತೆ. ಅಪಘಾತಗಳಿಂದ ಬೀಡಿಬಾಬಾ ರಕ್ಷಿಸುತ್ತಾನೆ ಎಂದು ಕತೆ ಹೇಳಿ ಅರ್ಧಸುಟ್ಟ ಬೀಡಿಯಿಂದ ಆರತಿ ಎತ್ತಿ, ಕಲ್ಲಿನ ಮುಂದಿಟ್ಟು, ಹಳೆಯ ಬೀಡಿಯ ಉರಿದ ಬೂದಿಯನ್ನೇ ಹಣೆಗಿಟ್ಟುಕೊಂಡ. 

ಆಮೇಲಿಂದ ಆ ರಸ್ತೆಯಲ್ಲಿ ಹೋಗುವ ದಿನವೆಲ್ಲ ಬಾಬಾನ ಪೂಜೆಗೆ ಬೀಡಿ ಬೇಕೆಂದು ನನ್ನಿಂದ ಇಪ್ಪತ್ತು ರೂಪಾಯಿ ಪೀಕುತ್ತಿದ್ದ. ಏನೋ ಇವನ ನಂಬಿಕೆ, ಹೋಗಲಿ ಎಂದು ನಾನೂ ಸುಮ್ಮನಿದ್ದೆ. ಕೊಂಡ ಬೀಡಿಗಳಲ್ಲಿ ಬಹುತೇಕ ಇವನೇ ಸೇದಿ ಖಾಲಿ ಮಾಡುತ್ತಿದ್ದ. ಉಳಿದೊಂದು ಬೀಡಿಯನ್ನೂ ಮುಕ್ಕಾಲು ಭಾಗ ಸೇದಿಯಾದ ಮೇಲಷ್ಟೇ ಬಾಬಾನಿಗೆ ಅರ್ಪಿಸುತ್ತಿದ್ದ. ಇದ್ಯಾಕೋ ಅತಿಯಾಯ್ತು ಅನ್ನಿಸಿ ಒಂದು ದಿನ ಬೀಡಿಗಾಗಿ ದುಡ್ಡು ಕೊಡೋಲ್ಲವೆಂದು ಕೈ ಎತ್ತಿದೆ. 

ಮರುದಿನ ಜೇಬಲ್ಲಿ ಬೀಡಿ ಇಲ್ಲದಿದ್ದರೂ ಗಾಡಿ ನಿಲ್ಲಿಸಲು ಹೇಳಿದ. ಹೋಗಿ ಬೀಡಿಬಾಬಾನ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿ ಯಾರೋ ಇಟ್ಟು ಹೋಗಿದ್ದ ಅರ್ಧ ಉರಿದ ಬೀಡಿಯನ್ನು ಎತ್ತಿಕೊಂಡು ಬಂದ. "ಅಲ್ಲಯ್ಯಾ... ಬಾಬಾನ ಬೀಡಿಯನ್ನೇ ಕಳ್ಳತನ ಮಾಡ್ತಿದ್ದೀಯಲ್ಲಾ..." ಎಂದು ಒಂದಿಷ್ಟು ಪಾಪಪ್ರಜ್ಞೆ ಹುಟ್ಟಿಸಿ ಬೀಡಿ ಸೇದುವುದನ್ನು ತಪ್ಪಿಸಲು ಹವಣಿಸಿದೆ.

 "ಏನ್ಸಾರ್ ನೀವೇ ಹಿಂಗೇಳ್ತೀರಾ... ಬೀಡಿಯೂ ಅವನದ್ದೇ, ಬದುಕೂ ಅವನದ್ದೇ. ಅವನೇ ಕೊಡೋನು, ತಗಳ್ಳೋನೂ ಅವನೇ... ನಮ್ಮದೇನಿದೆ ಸಾರ್.." ಎಂದು ನನಗೊಂದಿಷ್ಟು ತತ್ವಜ್ಞಾನ ಬೋಧನೆ ಮಾಡಿ ಮೋಟುಬೀಡಿಗೆ ಬೆಂಕಿ ಹಚ್ಚಿದ.

~ಪ್ರಸನ್ನ ಆಡುವಳ್ಳಿ

ಬುಧವಾರ, ಏಪ್ರಿಲ್ 17, 2013

ಕರೆಂಟು ಹೊಡೆಸಿಕೊಂಡ ಡಿಎನ್ಯೆಯೂ, ವಿಮಾನ ಹತ್ತಿದ ಕಾರ್ಟೂನೂ..

ಎಂದಿನಂತೆ ಬೆಳ್ಳಂಬೆಳಗ್ಗೆ ಎದ್ದು ನನ್ನ ಲ್ಯಾಬೋರೇಟರಿಗೆ ಬಂದು, ನಿನ್ನೆಯಷ್ಟೇ ಅಗಸೀ ಗಿಡದ ಎಲೆಯನ್ನೆಲ್ಲ ಹಿಂಡಿ ಹಿಪ್ಪೆ ಮಾಡಿ ತೆಗೆದಿದ್ದ ಕಣ್ಣಿಗೂ ಕಾಣದ ಡಿಎನ್ಎಯನ್ನು , ಪುಟ್ಟ ಇಲೆಕ್ಟ್ರಾನಿಕ್ ಟ್ಯಾಂಕಿಯಲ್ಲಿ ಈಗಾಗಲೇ ಮಾಡಿಟ್ಟಿದ್ದ ಯಾವುದೋ ಸಮುದ್ರ ಕಳೆಯಿಂದ ತೆಗೆದ ಜೆಲ್ಲಿಯೊಳಕ್ಕೆ ತೂರಿಸಿ, ಸರಿಯಾಗಿ ಎಂಬತ್ತು ವೋಲ್ಟ್ ಕರೆಂಟು ಕೊಟ್ಟು, ಡಿಎನ್ಯೆಯನ್ನು ಟ್ಯಾಂಕಿಯ ಒಂದು ಧ್ರುವದಿಂದ ಮತ್ತೊಂದಕ್ಕೆ ಓಡಿಸುತ್ತಿದ್ದೆ. ಹೀಗೆ ಕರೆಂಟು ಹೊಡೆಸಿಕೊಂಡ ಡಿಎನ್ಯೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ತನ್ನ ಗಾತ್ರಕ್ಕನುಗುಣವಾಗಿ ಜೆಲ್ಲಿಯೊಳಕ್ಕೆ ಓಡುತ್ತಿತ್ತು. ತೆಳ್ಳಗಿನ ಪುಟ್ಟ ಡಿಎನ್ಯೆ ಜೆಲ್ಲಿಯೊಳಗಣ ತೂತಿನೊಳಗೆ ತೂರಿಕೊಂಡು ಸಲೀಸಾಗಿ ಓಡಬಲ್ಲುದು. ದಪ್ಪದ್ದು-ದೊಡ್ಡದ್ದಕ್ಕೆ ಅಡೆತಡೆಗಳನ್ನೆಲ್ಲ ದಾಟಿ ಓಡುವುದು ಕಷ್ಟ; ಹೀಗಾಗಿ ಅವು ನಿಧಾನಕ್ಕೆ ಸಾಗುತ್ತವೆ (ಮನುಷ್ಯರಲ್ಲೂ ಅಷ್ಟೇ ತಾನೇ!)

ಹೀಗೆ ಅವು ಒಮ್ಮೆ ಓಡತೊಡಗಿದರೆ ತುದಿ ಮುಟ್ಟಲು ಮತ್ತೆರೆಡು ಗಂಟೆ ಕಾಯಬೇಕು. ಹೀಗಾಗಿ ಮಾಡಲು ಬೇರೇನೂ ಕೆಲಸವಿರಲಿಲ. ಬೇರೆ ದಿನವಾಗಿದ್ದರೆ ಈ ಸಮಯದಲ್ಲಿ ಯಾವ್ಯಾವುದೋ ತಲೆತಿನ್ನುವ- ತಲೆಕೆಳಗಾಗಿ ಓದಿದರೂ ಸುಲಭಕ್ಕೆ ಅರ್ಥವಾಗದ ವೈಜ್ನಾನಿಕ ಲೇಖನಗಳನ್ನು ಓದಿ ಅರಿಯಲು ತಿಣುಕುತ್ತಿದ್ದೆ. ಅದೂ ಬೇಸರ ಮೂಡಿಸಿದರೆ ಮೂರ್ತೀರಾಯರ ಪ್ರಬಂಧವನ್ನೋ, ವಸುಧೇಂದ್ರರ ಕಥೆಯನ್ನೋ, ಇಲ್ಲಾ ಕುವೆಂಪುರವರ ಕಾದಂಬರಿಯನ್ನೋ ಹಿಡಿದು ಡಿಎನ್ಯೆ ಜಗತ್ತಿನಿಂದ ದೂರಾಗಿ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದೆ. ಆದರಿವತ್ತು ಹಾಗೆ ಮಾಡುವಂತಿರಲಿಲ್ಲ…
ಬೆಳಿಗ್ಗೆ ನಾನು ‘ಕರಾಗ್ರೇ ವಸತೇ ಲಕ್ಷ್ಮೀ’ ಹೇಳುವ ಮೊದಲೇ ಫೋನ್ ಮಾಡಿದ್ದ ನನ್ನ ಸಂಶೋಧನೆಯ ಗೈಡ್ ಇವತ್ತು ಯಾವುದೋ ಯೂರೋಪಿಯನ್ ಯೂನಿವರ್ಸಿಟಿಯ ಘನಂದಾರಿ ವಿಜ್ನಾನಿಗಳೂ, ಅಧಿಕಾರಿಗಳೂ ಬರುತ್ತಿದ್ದಾರೆಂದೂ, ತನಗೆ ಬೇರೆ ಅಗತ್ಯ ಕೆಲಸಗಳಿರುವುದರಿಂದ ಅವರನ್ನು ಅಟೆಂಡ್ ಮಾಡಲಾಗುವುದಿಲ್ಲವೆಂದೂ ಹೇಳಿ, ನೀನೇ ಹೇಗಾದರೂ ನಿಭಾಯಿಸು ಅನ್ನುತ್ತಾ ಎಂದಿನಂತೆ ಜಾರಿಕೊಂಡರು. ಅವರು ಲ್ಯಾಬಿಗೆ ಬಂದಾಗ ಏನಾದರೂ ಕೆಲಸ ಮಾಡುತ್ತಿರು, ಸುಮ್ಮನೆ ಏನೇನೋ ಓದುತ್ತಾ ಕೂರಬೇಡ ಎಂದರು!

ಹೀಗೆ ಯಾರ್ಯಾರೋ ನನ್ನ ಲ್ಯಾಬಿಗೆ ಭೇಟಿಯಿಡುವುದು ಹೊಸತಲ್ಲದ್ದರಿಂದ ಅದೊಂದು ದೊಡ್ಡ ವಿಷಯವಾಗಿರಲಿಲ್ಲ. ಆದರೆ ನಾನು ಕದ್ದು-ಮುಚ್ಚಿ ‘ಏನೇನೋ ಓದುವ’ ಸಂಗತಿ ನನ್ನ ಗೈಡ್ಗೆ ಗೊತ್ತಾಗಿದ್ದಾದರೂ ಹೇಗೆ? ಇನ್ನೊಮ್ಮೆ ಸಿಕ್ಕಿಹಾಕಿಕೊಂಡರೆ ಅವರಿಂದ ಮಹಾಮಂಗಳಾರತಿ ಗ್ಯಾರಂಟಿ ಎಂದುಕೊಳ್ಳುತ್ತಾ ಹಾಸ್ಟೆಲ್ಲಿನಲ್ಲಿ ತಿಂಡಿಯನ್ನೂ ತಿನ್ನದೇ ಲ್ಯಾಬೋರೇಟರಿಗೆ ಓಡಿಬಂದಿದ್ದೆ. ಅಲ್ಲಿದ್ದ ಕಥೆ-ಕಾದಂಬರಿಗಳನ್ನೆಲ್ಲಾ ಅಡಿಗೆ ತೂರಿಸಿ, ದಪ್ಪ-ದಪ್ಪ ವೈಜ್ನಾನಿಕ ಪುಸ್ತಕಗಳನ್ನೂ, ಸಂಶೋಧನಾ ಪ್ರಬಂಧಗಳನ್ನೂ ಎಲ್ಲರಿಗೆ ಕಾಣುವಂತೆ ಇಟ್ಟು, ನನ್ನ ಲ್ಯಾಪ್ಟಾಪಿನ ವಾಲ್ ಪೇಪರಾಗಿ ಮಿಂಚುತ್ತಿದ್ದ ಸಿನೆಮಾ ತಾರೆಯನ್ನು ವಾಪಸ್ಸು ಕಳುಹಿಸಿ, ಅವಳ ಬದಲಿಗೆ ನಮ್ಮೊಳಗಿನ ಡಿಎನ್ಯೆಯ ಗ್ರಾಫಿಕ್ ಚಿತ್ರವೊಂದನ್ನು ಹಾಕಿಟ್ಟು, ಪಿಪೆಟ್ಟು-ಟೆಸ್ಟ್ ಟ್ಯೂಬು ಹಿಡಿದು ಏನೋ ಭಯಂಕರ ರೀಸರ್ಚು ಮಾಡುವವನಂತೆ ಫೋಸುಕೊಡುತ್ತಾ ಅವರಿಗಾಗಿ ಕಾಯುತ್ತಿದ್ದೆ..

ಸರಿಯಾಗಿ ಒಂಭತ್ತೂವರೆಗೆ ನನ್ನ ಡಿಪಾರ್ಟ್ ಮೆಂಟಿನ ಹೆಡ್ಡು ನಾಲ್ಕೈದು ಬಿಳಿಚರ್ಮದವರನ್ನು ಕರೆದುಕೊಂಡು ಲ್ಯಾಬಿಗೆ ಬಂದರು. ಆರಡಿ ಮೀರಿದ ಧಡೂತಿ ದೇಹದ, ನೀಟಾಗಿ ಶೇವ್ ಮಾಡಿ ಇನ್ ಶರ್ಟ್ ಮಾಡಿದವ ಅಧಿಕಾರಿಯಿರಬೇಕೆಂದೂ, ಅಷ್ಟೇ ಎತ್ತರದ, ಲವಲವಿಕೆಯಿಲ್ಲದ ದೇಹದ, ಗಡ್ಡಬಿಟ್ಟು ದಪ್ಪ ಕನ್ನಡಕ ಹಾಕಿ, ತಲೆಬಾಚಲು ಮರೆತಂತಿದ್ದವ ವಿಜ್ನಾನಿಯಿರಬೇಕೆಂದೂ ಊಹಿಸಿದೆ. ಜೊತೆಗಿಬ್ಬರು ಮೂವತ್ತೈದು ದಾಟದ ಮಹಿಳೆಯರೂ ಇದ್ದರು. ನಾನು ಎಂದಿನಂತೆ ನನ್ನ ಲ್ಯಾಬೋರೇಟರಿ ಇದುವರೆಗೆ ಮಾಡಿರುವ ಸಾಧನೆಯನ್ನೂ, ನಾನೀಗ ಮಾಡುತ್ತಿರುವ ಅಗಸೀ ಗಿಡದ ಬಗೆಗಿನ ಸಂಶೋಧನೆಯನ್ನೂ, ಅದರ ಪ್ರಾಮುಖ್ಯತೆಯನ್ನೂ ಪವರ್ ಪಾಯಿಂಟ್ ಬಳಸಿ ಪುಟ್ಟದೊಂದು ಉಪನ್ಯಾಸ ಕೊಟ್ಟೆ. ಡಿಎನ್ಯೆ ಫಿಂಗರ್ ಪ್ರಿಂಟಿಂಗ್ ಹೇಗೆಲ್ಲಾ ಮಾಡುತ್ತೇವೆಂದೂ, ಕುಲಾಂತರಿಗಳನ್ನು ಹೇಗೆ ಗುರುತಿಸಬಹುದೆಂದೂ ಅಲ್ಲಿದ್ದ ಉಪಕರಣ ತೋರಿಸಿ ವಿವರಿಸಿದೆ. ಎಲ್ಲರೂ ಆಸಕ್ತಿಯಿಂದ ಕೇಳಿ ನೋಟ್ಸ್ ಮಾಡಿಕೊಂಡರು, ಪ್ರಶ್ನೆ ಕೇಳಿದರು. ಗೊತ್ತಿದ್ದಷ್ಟನ್ನು ಉತ್ತರಿಸಿದೆ.

ಆದರೆ ಅವರೊಡನಿದ್ದ ಅಧಿಕಾರಿ ಮಾತ್ರ ಏನೋ ಚಡಪಡಿಕೆಯಲ್ಲಿದ್ದಾನೆಂದು ತೋರುತ್ತಿತ್ತು ಅತ್ತಿತ್ತ ನೋಡುತ್ತ ಕಂಗಾಲಾಗಿದ್ದ. ಮಾತುಕತೆಯೆಲ್ಲ ಮುಗಿದ ಮೇಲೆ ಎಲ್ಲರೂ ನನ್ನ ಲ್ಯಾಬನ್ನ ಗಮನಿಸಿ ಹೊರಡುತ್ತಿದ್ದಂತೆ, ಆ ಅಧಿಕಾರಿ ವಾಪಸ್ಸು ದೌಡಾಯಿಸಿ ಬಂದು ಇಲ್ಲಿ ಟಾಯ್ಲೆಟ್ ಎಲ್ಲಿದೆ..? ಅಂತ ಸಂಕೋಚದಿಂದಲೇ ಕೇಳಿದ. ಅವನ ಅದುವರೆಗಿನ ಚಡಪಡಿಕೆಗೆ ಕಾರಣ ಗೊತ್ತಾಯ್ತು! ಯಾಕೋ ಇಂಡಿಯನ್ ಫುಡ್ಡು ಹಿಡಿಸುತ್ತಿಲ್ಲ ನೋಡು.. ಎನ್ನುತ್ತಾ ನಾನು ಕೈತೋರಿದೆಡೆಗೆ ಬಿರಬಿರ ಹೆಜ್ಜೆಹಾಕತೊಡಗಿದ…

ಸಧ್ಯ! ಎಲ್ಲಾ ಸುಸೂತ್ರವಾಗಿ ಮುಗೀತಲ್ಲಾ ಎಂದುಕೊಳ್ಳುತ್ತಾ ನಾನು ಅಲ್ಲೇ ಬಚ್ಚಿಟ್ಟಿದ್ದ ‘ಅಪಾರ’ನ ‘ಮದ್ಯಸಾರ’ಕ್ಕೆ ಕೈಯಿಟ್ಟೆ! ಉಳಿವರು ಅವನಿಗಾಗಿ ಕಾಯುತ್ತಾ ಹೊರಗಿನ ಸೋಫಾದಲ್ಲಿ ಪವಡಿಸಿದ್ದರು.
ಸ್ವಲ್ಪ ಹೊತ್ತಿನಲ್ಲೇ ಅವರೊಡನಿದ್ದ ಬಿಳೀ ಟೀಶರ್ಟು-ಜೀನ್ಸ್ ಪ್ಯಾಂಟಿನಾಕೆ ಲ್ಯಾಬೊಳಗೆ ಬಂದಳು. ನಾನು ಕೈಲಿದ್ದ ಪುಸ್ತಕವನ್ನು ತದಬಡಿಸಿ ಮುಚ್ಚಿಟ್ಟು ಕಷ್ಟಪಟ್ಟು ಕಿರುನಗೆ ಬೀರಿದೆ. ಆ ಪೋಸ್ಟರ್ಗಳು ನಂಗಿಷ್ಟವಾದವು, ಎಲ್ಲಿಂದ ಕೊಂಡು ತಂದೆ? ಎಂದಳು. ಯಾವ ಪೋಸ್ಟರ್ ಎಂದು ನನಗರ್ಥವಾಗಲಿಲ್ಲ. ಅವಳೇ ತೋರಿಸಿದಳು. ನಾನು ಲ್ಯಾಬಿನ ಅಲ್ಲಲ್ಲಿ ‘ಡು ನಾಟ್ ಟಚ್’, ‘ಬಯೋ ಹಜಾರ್ಡ್’, ‘ಇನ್ಸ್ಟ್ರಕ್ಷನ್ಸ್’ ಅಂತೆಲ್ಲಾ ಬರೆಯಬೇಕಿದ್ದಲ್ಲಿ ಒಂದೊಂದು ಕಾರ್ಟೂನು ಬಿಡಿಸಿ-ಬಣ್ಣ ಹಚ್ಚಿ, ಅದರ ಮೂಲಕ ಹಾಗೆಲ್ಲಾ ಹೇಳಿಸಿ ಅಂಟಿಸಿದ್ದೆ. ಅದನ್ನೇ ಅವಳು ಪೋಸ್ಟರ್ ಅಂದಿದ್ದು..

ಥ್ಯಾಂಕ್ಸ್! ಅದು ಕೊಂಡಿದ್ದಲ್ಲ; ನಾನೇ ಸ್ವತಃ ಬಿಡಿಸಿದ್ದು ಅಂದೆ. ಹೌದಾ..?! ಎನ್ನುತ್ತಾ ಕಣ್ಣನ್ನು ಇಷ್ಟಗಲ ಮಾಡಿಕೊಂಡು ಚಿತ್ರಗಳನ್ನೇ ತದೇಕಚಿತ್ತದಿಂದ ನೋಡುತ್ತಾ ಕ್ಯಾನ್ ಐ ಗೆಟ್ ವನ್, ಐ ರಿಯಲ್ಲೀ ಲೈಕ್ ದೆಮ್… ಎಂದಳು. ಇದನ್ನೇ ತಗೊಳ್ಳಿ ಎನ್ನುತ್ತಾ ಅಲ್ಲಿದ್ದುದನ್ನು ಅವಳ ಕೈಗಿಟ್ಟೆ. ಇದಕ್ಕೆ ಎಷ್ಟು ತಗೋತೀರಾ? ಎಂದುಲಿದು ಪರ್ಸಿಗೆ ಕೈ ಹಾಕಿದಳು! ನಮ್ಮ ದೇಶದ ಕಾರ್ಟೂನಿಷ್ಟರಿಗೆ ಒಂದೋ ಎರೆಡೋ ಯೂರೋ ಸಿಕ್ಕುವುದೇ ಕಷ್ಟ.. ಎಂದು ಹೇಳಬೇಕೆಂದಿದ್ದವನು ನಾಲಿಗೆ ತಡೆದು ಇರಲಿ ಬಿಡಿ, ನಿಮ್ಮ-ನನ್ನ ಭೇಟಿಯ ನೆನಪಿಗೆ ಇದೊಂದು ಕಾಣಿಕೆ ಎಂದಿಟ್ಟುಕೊಳ್ಳಿ.. ಎಂದುಬಿಟ್ಟೆ!! ಹೌದಾ..?! ಅಂತ ಮತ್ತೊಮ್ಮೆ ಕಣ್ಣರಳಿಸಿ, ಕೈನೀಡಿ ನನ್ನ ಕೈಯನ್ನೂ ಅವಳ ಧಡೂತಿ ದೇಹವನ್ನೂ ಒಟ್ಟೊಟ್ಟಿಗೆ ಕುಲುಕುಲು ಕುಲುಕಿ ಥ್ಯಾಂಕ್ಯೂ ವೆರಿಮಚ್ ಎನ್ನುತ್ತಾ ಅವಳ ಪರಿಚಯದ ಕಾರ್ಡನ್ನು ನನ್ನ ಕೈಗಿತ್ತು ಹೊರಹೊರಟಳು.
ಅದೇ ಸಮಯದಲ್ಲಿ ಅತ್ತ ಕಡೆಯಿಂದ ಬಂದ ಅಧಿಕಾರಿಯೂ ಥ್ಯಾಂಕ್ಸ್ ಎ ಲಾಟ್ ಎಂದು ಪೆಚ್ಚು ನಗೆ ಬೀರುತ್ತಾ ಹೇಳಿ ಅವರನ್ನು ಕೂಡಿಕೊಂಡ.

ಈ ಎರೆಡು ‘ಥಾಂಕ್ಯೂ’ಗಳಿಂದಾಗಿ ನನ್ನ ಕಾರ್ಟೂನೊಂದು ಯೂರೋಪಿನ ಹಾದಿ ಹಿಡಿದಿದ್ದನ್ನು ನೆನೆದು ಹಿಗ್ಗುತ್ತಾ, ಕರೆಂಟು ಹೊಡೆಸಿಕೊಂಡ ಡಿಎನ್ಯೆ ಕಥೆ ಏನಾಗಿದೆಯೆಂದು ನೋಡಲು ಅತ್ತ ಹೆಜ್ಜೆ ಹಾಕಿದೆ…

ಈ ಬರಹವನ್ನು ಅವಧಿಯಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ...

ಗುರುವಾರ, ಏಪ್ರಿಲ್ 5, 2012

ನಿರವಯವ ಹಾಗೂ ನಾಗರಾಜ ವಸ್ತಾರೆ...




ನಾಳೆ ವಸುಧೇಂದ್ರರ ಛಂದ ಪುಸ್ತಕಗಳ ಬಿಡುಗಡೆ ಸಮಾರಂಭವಿದೆ. ಅಲ್ಲಿ ನಮ್ಮೂರ ಕಥೆಗಾರ ನಾಗರಾಜ ವಸ್ತಾರೆಯವರ ಸಂಕಲನ 'ನಿರವಯವ' ಅನಾವರಣಗೊಳ್ಳಲಿದೆ....
ಇಷ್ಟಕ್ಕೂ ನಿರವಯವ ಎಂದರೇನು ಎಂಬ ಕುತೂಹಲಕಾರಿ ಚರ್ಚೆ ಫೇಸ್ಬುಕ್ಕಿನಲ್ಲಿ ನಡೆಯುತ್ತಿತ್ತು. ಅದಕ್ಕೆ ವಸ್ತಾರೆಯವರು ಉತ್ತರಿಸಿದ್ದು ಹೀಗೆ....


ನಿರವಯವ- ಅಂದರೆ ಸರಳವಾಗಿ ಅವಯವಯವಿಲ್ಲದ್ದು ಅಂತ ಅರ್ಥೈಸಬಹುದೇನೋ. 

ವಸುವಿನ ಪ್ರಕಾರ, ಅವನೊಮ್ಮೆ ಹೇಳಿದ ಹಾಗೆ- ಅದು ಅನಂಗ, ಅರ್ಥಾತ್ ಕಾಮ! ಸ್ಸಾರಿ... ನಾನು ಹಾಗೆ ಯೋಚಿಸಿಯೇ ಇರಲಿಲ್ಲ. 

ಇಂಗ್ಲಿಶ್ನಲ್ಲಿ ಆರ್ಗ್ಯಾನಿಕ್ (organ-ic) ಅನ್ನೋ ಬಳಕೆ ಇದೆ ನೋಡಿ- ಅದನ್ನ ಕನ್ನಡದ ಭೂಪರು ಸಾವಯವ (-ಅವಯವ) ಅಂತ ಬಳಸುತ್ತಾರೆ. ಆರ್ಗ್ಯಾನಿಕ್ಅನ್ನುವುದನ್ನು ಎಲ್ಲ ಸೃಜನಶೀಲ ಕ್ಷೇತ್ರದ ಮಂದಿಯೂ ಬಳಸುತ್ತಾರೆ ಅನಿಸುತ್ತೆ. (ಎಸ್. ಆರ್. ವಿಜಯಶಂಕರರು ಆಗಾಗ- ಅಂದರೆ ಎಲ್ಲರ ಕೃತಿಗಳ ಮೇಲೂಸಾವಯವಶಿಲ್ಪದ ಸಮಗ್ರೀಕರಣಅಂತೇನನ್ನೋ ಹೇಳುತ್ತಾರೆ!!) ನನಗೆ ತಿಳಿದ ಮಟ್ಟಿಗೆ ಆರ್ಗ್ಯಾನಿಕ್ ಅಂದರೆ ತಂತಾನೇ ಆಗಿರ್ಓದು ಅಂತ ಅರ್ಥ. ಅಂದರೆ ಯಾವುದೇ ಬುದ್ಧಿ (ಬೌದ್ಧಿಕವಾದ) ಸರ್ಕಸುಗಳಿಲ್ಲದೆ ತನ್ನಷ್ಟಕ್ಕೆ ಆಗಿರ್ಓದು. ನಮ್ಮ ಹಳೆಯ ಊರುಗಳು ಆಗಿರುವುದು ಹೀಗೆ. ಹೊಸ ಊರುಗಳಲ್ಲಿ ಆಗುವ ಹಾಗೆ ದೊಡ್ಡ ದೊಡ್ಡ ಡಿಗರಿಗಳಿರುವ ಇಂಜಿನಿಯರು, ಆರ್ಕಿಟೆಕ್ಟುಗಳು ಪ್ರಜ್ಞಾಪೂರ್ವಕವಾಗಿ ಇಂತಹ ಊರುಗಳನ್ನು ಕಟ್ಟಿರುವುದಿಲ್ಲ. ಹಾಗಾಗಿಯೇ ಊರುಗಳು ಸಾವಯವವಿರುತ್ತವೆ. ಅಂದರೆ ಅವುಗಳಲ್ಲೇನೋ ಜೀವಂತಿಕೆಯಿದೆ. ಸಾವಯವವೆನ್ನುವುದಕ್ಕೆ ವ್ಯತಿರಿಕ್ತವಾಗಿ ನಿರವಯವ ಅಂತನ್ನುವ ಪ್ರಯೋಗವಿದೆ. ಅಂದರೆ- ಇನಾರ್ಗ್ಯಾನಿಕ್ (in-organ-ic). ಇದನ್ನು ಜೀವಂತಿಕೆಯಿಲ್ಲದ್ದು ಅನ್ನಬಹುದೆ? ಹಾಗೆ ನೋಡಿದರೆ ನಮ್ಮ ದೊಡ್ಡ ದೊಡ್ಡ ಊರುಗಳೆಲ್ಲ ಇಂಥವು. ಬರೇ ಯಾಂತ್ರಿಕ. ಬುದ್ಧಿಯ ಕಸರತ್ತು ಮಾಡುವ ಮಂದಿ ಬರೆದಿಟ್ಟ ಪ್ರೋಗ್ರಾಮಿಗೆ ತಕ್ಕುದಾಗಿ ಜರುಗುವಂಥವು!

ಇನ್ನು ಕನ್ನಡದಲ್ಲಿ ಓದಲಾಗುವ ಖೆಮಿಸ್ಟ್ರಿಯಲ್ಲಿ- ಸಾವಯವ ರಸಾಯನ (organic chemistry), ನಿರವಯ ರಸಾಯನ (inorganic chemistry) ಅಂತನ್ನುವ ಪ್ರಯೋಗಗಳಿವೆ. ಇಲ್ಲಿ ಸಾವಯವ ಅಂತನ್ನುವುದು ಜೀವಿಗಳಿಗೆ ಸಂಬಂಧಿಸಿದ ಅಥವಾಜೀವವನ್ನು ಕಟ್ಟುವ ರಸಾಯನಗಳನ್ನು ಕುರಿತು ರೆಫರಿಸುತ್ತದೆ. ಗ್ಲುಕೋಸ್, ಸುಕ್ರೋಸ್... ಇತ್ಯಾದಿ ಸಕ್ಕರೆಗಳು, ಪ್ರೋಟೀನು-ಅಮಿನೋಆಮ್ಲಗಳು... ಇತ್ಯಾದಿಗಳುಸಾವವಯವವೆಂದು ನೆನಪಿಗೆ ಬರುತ್ತವೆ. ಹಾಗೆಯೇ ಖೆಮಿಸ್ಟ್ರಿಯಲ್ಲಿ ನಿರವಯವ- ಅಜೀವ/ನಿರ್ಜೀವ ವಸ್ತುಕಣಗಳಿಗೆ ಸಂಬಂಧಿಸಿದ್ದು. 

ವಿವರಣೆ ಹೆಚ್ಚಾಯಿತೇನೋ... ಇರಲಿ. 

ಇನ್ನು ನನ್ನನಿರವಯವಕ್ಕೆ ಸಂಬಂಧಿಸಿದ ಹಾಗೆ- ಒಂದೆರಡು ಮಾತು. ಅವಯವಗಳಿರುವ ನಾವೆಲ್ಲರೂ ಸಾವಯವರು. ನಮ್ಮೊಳಗೆ ಅವಯವವಿಲ್ಲದಇನ್ನೊಂದುಇದೆಯಲ್ಲ- ಒಳಗಿದ್ದು ನನ್ನನ್ನುನಾನುಅಂತ ಗಣಿಸುವುಂಥದು... ಅದು ನನ್ನ ಮಟ್ಟಿಗಿನ ನಿರವಯವ!
ದಯಮಾಡಿ ನನ್ನನಿರವಯವವನ್ನು ಕೊಂಡು ಓದಿ. ‘ಛಂದವನ್ನು ಉದ್ಧರಿಸಿ.