ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಶುಕ್ರವಾರ, ಆಗಸ್ಟ್ 26, 2011

ಕುವೆಂಪು ಕಾಡಿಂದ ಬೇಂದ್ರೆ ಕೇರಿಗೆ...!


ಓದುಗರೆಲ್ಲರಿಗೂ ನಮಸ್ಕಾರ...

ಈ ಬದುಕೇ ಹೀಗೇ ಏನೋ..
ಅಂದುಕೊಂಡಿದ್ದು ಇನ್ನೇನೋ ಆಗಿಬಿಡುತ್ತದೆ, ಕನಸಿಗೆ ಬ್ರೇಕ್ ಹಾಕಿ ಧುತ್ತೆಂದು ಕಟುವಾಸ್ತವಗಳನ್ನೆಲ್ಲಾ ಎದುರಿಗೆ ತಂದು ನಿಲ್ಲಿಸುತ್ತದೆ, ಒಮ್ಮೊಮ್ಮೆ ಅಚ್ಚರಿಯ ಅಂಚಿಗೆ ದೂಡುತ್ತದೆ, ಅಸಂಗತಗಳನ್ನೆಲ್ಲಾ ಅಡ್ಡ ತಂದು ಆಗಾಗ ಕಾಡುತ್ತದೆ, ಹೀಗೆ ಏನೇನೋ...!

ಅಷ್ಟಕ್ಕೂ ನಾನು ಧಾರವಾಡದಂತಹ ಧಾರವಾಡಕ್ಕೆ ಬಂದು ಬದುಕುತ್ತೆನೆಂದು  ಕನಸಲ್ಲೂ ಯೋಚಿಸಿರಲಿಲ್ಲ.ಅಂಥ ಯಾವ ಆಸೆಯು ನನಗಿರಲಿಲ್ಲ. ತೀರಾತೀರ ಮಲೆನಾಡಿನ ಮಧ್ಯದ ಊರಿಂದ ಬಂದ ನನಗೆ ಹಾಗೆ ಯೋಚಿಸುವುದರ ಅಗತ್ಯವೂ ಇರಲಿಲ್ಲ. ಆದರು...

ಏನೇನೋ ಆಗಿ ಕೊನೆಗೂ ಗಟ್ಟಿ ನಿರ್ಧಾರ ಮಾಡಿ, ಬೆಂಗಳೂರನ್ನು ಬದಿಗೊತ್ತಿ, ಧಾರವಾಡಕ್ಕೆ ಬಂದು ಕುಳಿತಿದ್ದೇನೆ.ಅದ್ಯಾವ ಗಳಿಗೆಯಲ್ಲಿ  ಧಾರವಾಡ ಬಂದು ನನ್ನೊಳಗೆ ಕುಳಿತಿತೋ ಗೊತ್ತಿಲ್ಲ...


ಇಷ್ಟಕ್ಕೂ ನನಗೂ ಒಂದು ಬದಲಾವಣೆ ಬೇಕಿತ್ತು.ಎಲ್ಲರಿಗೂ ಮಹಾನಗರಿ ಬೆರಗು ಹುಟ್ಟಿಸಿದರೆ ನನಗೆ ಒಂದೇ  ವರ್ಷದಲ್ಲಿ ಬೋರು ಹೊಡೆಸತೊಡಗಿತ್ತು.ಮುಖವಾಡ ಹೊತ್ತು ಬದುಕುವುದು ಸಾಕುಸಾಕಾಗಿತ್ತು. ಹೀಗಾಗಿ ಧಾರವಾಡ ಬಳಿಯ ಈ ಹಳ್ಳಿಯ ಕಾಲೇಜಿಗೆ ಬರಬೇಕಾಯ್ತು...

ಅಂದ  ಹಾಗೆ ಧಾರವಾಡಕ್ಕೆ ವಿಶ್ರಾಂತಿತಾಣ ಅಂತಲೂ ಅರ್ಥ ಇದೆ ಅನ್ನುತ್ತೆ ವಿಕಿಪೇಡಿಯಾ.ಬಯಲುನಾಡಿಂದ ಮಲೆನಾಡ ಸೆರಗಿಗೆ ಹೆಬ್ಬಾಗಿಲ ಹಾಗಿದೆ ಈ ಊರು! ಜೊತೆಗೆ ಪೇಡದ ಸವಿ ಬೇರೆ..!

"ಬೆಂಗಳೂರಂಥಾ ಬೆಂಗಳೂರು ಬಿಟ್ಟು ಧಾರವಾಡಕ್ಕೆ ಯಾಕೆ ಹೋಗ್ತಿ?" ಅಂತ ಮೂಗು ಮುರಿದು ಪ್ರಶ್ನಿಸಿದವರೇ ಹೆಚ್ಚು.ಆದರೆ ಅವರಿಗೆ ನನ್ನೊಳಗಿನ ತಳಮಳಗಳನ್ನೆಲ್ಲಾ ಹೇಗೆ ಹೇಳಲಿ ಹೇಳಿ? "ಅಲ್ಲಿ ಜನಾ ತುಂಬಾ ಒರಟಂತೆ" ಅಂತ ಹೇಳಿದವರಿಗೇನು ಕಮ್ಮಿಯಿಲ್ಲ. ಆದರೆ 'ಅತ್ತಾರೆ ಅತ್ತುಬಿಡು ಹೊನಲು ಬರಲಿ' ಅಂತ ಭಾವುಕರಾಗಿ ಹಾಡಿದ ಕವಿ ಇಲ್ಲಿಯವರೇ ಅಂತ ಅವರಿಗೆ ಹೇಗೆ ಹೇಳಲಿ?!


ಒಟ್ಟಿನಲ್ಲಿ ಕುವೆಂಪು ಕಾಡಿಂದ ಬೇಂದ್ರೆ ಕೇರಿಗೆ ಬಂದು ಕುಳಿತಿದ್ದೇನೆ! ಬೇಂದ್ರೆಯಷ್ಟೇ ಅಲ್ಲ, ಗೋಕಾಕ್, ಕಾರ್ನಾಡರ ಮೂಲ ಬೇರೂ ಇಲ್ಲೇ ಇದೆ. ಸಾಹಿತಿಗಳಷ್ಟೇ ಅಲ್ಲ.... ಅಂತ ವಿಕಿಪೀಡಿಯಾ ಖ್ಯಾತ ಧಾರವಾಡಿಗರ ಉದ್ದ ಪಟ್ಟಿಯನ್ನೇ ಹಾಕಿದೆ.

ಈ ನಡುವೆ ನನ್ನ ಬ್ಲಾಗು ಬಾಗಿಲು ಹಾಕಿಕೊಂದು ಕೂತುಬಿಟ್ಟಿತ್ತು. ಶುರುಮಾಡಿ ವರ್ಷಗಳೇ ಕಳೆದರೂ ಬೆರಳೆಣಿಕೆಯಷ್ಟೇ ಬರಹಗಳು ಇಲ್ಲಿವೆ. ಅವೋ ಓಬೀರಾಯನ ಕಾಲದ್ದು.ಆಮೇಲೆ ನಾನೂ ಸಾಕಷ್ಟು ಬೆಳೆದಿದ್ದೇನೆ,ಬಲಿತಿದ್ದೇನೆ,ಬರೆದಿದ್ದೇನೆ.ಆದರೂ ಯಾಕೆ ಬ್ಲಾಗ್ ಅಪ್ ಡೇಟ್ ಮಾಡಲಿಲ್ಲ..?

ಬೆಂಗಳೂರು ಸೇರಿದ ಮೇಲೆ ಧಾವಂತ ಬದುಕಿಗೆ ಧಾಂಗುಡಿಯಿಟ್ಟಿತು. ಅದರಲ್ಲೂ ರಾಷ್ಟೀಯ ಜೀವ ವಿಜ್ಣಾನ ಕೇಂದ್ರದಲ್ಲಿ ಸಣ್ಣದೊಂದು ಸಂಶೋಧನೆಗೆ ಶುರುವಿಟ್ಟುಕೊಂಡ ಮೇಲಂತೂ .....ತುರಿಸಲೂ ಪುರುಸೊತ್ತಿರಲಿಲ್ಲ.ಬರೆಯದೇ ಇರಲಾರೆ ಎನಿಸಿ ಆಗೀಗ ಬರೆದಿದ್ದು ಪುಸ್ತಕದಲ್ಲೇ ಉಳಿದುಹೋಯಿತೇ ವಿನಹ ಬ್ಲಾಗಿನವರೆಗೆ ಬರಲಿಲ್ಲ.ಟೈಪುಕುಟ್ಟುವ ವಿಚಾರದಲ್ಲಂತೂ ನಾನು ಶುದ್ದ ಸೋಮಾರಿ!


ಈಗ ಧಾರಾನಗರಿಯ ಬಳಿಯ ಪುಟ್ಟ ಊರಿನ ಹಾಸ್ಟೆಲಿಗೆ ಸೇರಿಕಂಡಿದ್ದೇನೆ.ಇನ್ನಾದರೂ ಕಂಡಿದ್ದು, ಓದಿದ್ದನ್ನು ನಿಮ್ಮೊಡನೆ ಹಂಚಿಕೊಳ್ಳಬೇಕಿದೆ.

ಸದ್ಯಕ್ಕೆ ಒಂದಿಷ್ಟು ಪುಸ್ತಕ ಗುಡ್ಡೆ ಹಾಕಿಕಂಡು ಕೂತಿದ್ದೇನೆ. I Too Had A Dream ಅನ್ನೋದನ್ನ ಈಗಾಗಲೇ ಓದಿ ಮುಗಿಸಿದ್ದೇನೆ.ಕಳೆದ ವರ್ಷ ಗುಜರಾತಿನ ಆನಂದ್ ಗೆ ಹೋದಾಗ ಕೊಂಡ ಹಾಲು ಕ್ರಾಂತಿಯ ಹರಿಕಾರನ ಆತ್ಮಕಥೆಯಿದು. ಕನ್ನಡಕ್ಕೆ ಇದನ್ನು ಯಾರಾದರೂ ಅನುವಾದಿಸಿದ್ದರೋ ಇಲ್ಲವೋ ಗೊತ್ತಿಲ್ಲ. ನಾನಂತೂ ಒಂದಿಷ್ಟನ್ನು ಕನ್ನಡೀಕರಿಸಿ ಇಟ್ಟಿದ್ದೇನೆ. ತುಂಬಾ ಕುತೂಹಲಕಾರಿ ಪುಸ್ತಕ.ಮುಂದೊಂಮ್ಮೆ ವಿವರವಾಗಿ ಬರೆಯುವೆ.

ಇನ್ನುಳಿದವು ನನ್ನ ಓದು ವಿಜ್ನಾನ ಸಂಶೋಧನೆಗೆ ಪರೋಕ್ಷವಾಗಿ ಸಂಭಂಧಿಸಿದವು. Costs and benefits of transgenic crops -ಕುಲಾಂತರಿಗಳ ನಿಜ ಹಣೆಬರಹ ಇದರಲ್ಲಿದೆ.A doble image of double helix ಇಂಥದ್ದೇ ಇನ್ನಂದು ಪುಸ್ತಕ. Agriculture's ethical horizon ಅನ್ನೋ ಕೃಷಿಯ ಇತಿಮಿತಿಗಳ ಬಗೆಗಿನ ಪುಸ್ತಕವೂ ಜೊತೆಗಿದೆ.

ಮತ್ತೊ0ದು Darwinism DEFENDED ಅಂತ. ಡಾರ್ವಿನ್ನನ ವಿಕಾಸವಾದವನ್ನು ಒರೆಗೆ ಹಚ್ಚುವ ಪುಸ್ತಕ.ಇದನ್ನು ಓದಲು ಪ್ರಾರಂಭಿಸುವ ಮೊದಲು ಮತ್ತೊಮ್ಮೆ 'ಕರ್ವಾಲೋ' ಅನ್ನು ಓದಿಕೊಂಡೆ.ಅಥವಾ ಕರ್ವಾಲೋದಿಂದಾಗಿಯೇ ಈ ಪುಸ್ತಕದ ಬಗ್ಗೆ ಕುತೂಹಲ ಹೆಚ್ಚಿದೆ!!

ಈ ಎಲ್ಲದರ ಬಗ್ಗೆ ನಿಮ್ಮೊಡನೆ ಹಂಚಿಕೊಳ್ಳಬೇಕಿದೆ.ಆದರೆ...ಅದು ನನ್ನ ಪುಸ್ತಕ ದಾಟಿ ಬ್ಲಾಗಿನ ಬಾಗಿಲು ಬಡಿದು ಇಲ್ಲಿ ಸೇರಿಕೊಳ್ಳುತ್ತಾ...?

ಗೊತ್ತಿಲ್ಲ!

(ಕೊನೆಗೊಂದು ಮಾತು: ಅಕಾಡೆಮಿಕ್ ವಲಯದ ಹೊರಗಿನವರಿಗೆ ಇಂತಹ ಪುಸ್ತಕಗಳು ಸುಲಭಕ್ಕೆ ಸಿಗಲಿಕ್ಕಿಲ್ಲ.ಓದಲು ಆಸಕ್ತಿಯಿದ್ದರೆ ಹೇಳಿ,ಪ್ರತಿಯೊಂದನ್ನು ಕಳಿಸಿಕೊಡುವೆ..)






3 ಕಾಮೆಂಟ್‌ಗಳು:

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನುಇಲ್ಲಿ ಬರೆಯಿರಿ