ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಭಾನುವಾರ, ಆಗಸ್ಟ್ 17, 2008






ಪ್ರವಾಸೋದ್ಯಮ ತಾಣಗಳ ಸ್ತಿತಿ-ಗತಿ...

ಇತ್ತೀಚಿಗೆ ಗೆಳೆಯರೆಲ್ಲರೂ ಸೇರಿ "ಶ್ರವಣಬೆಳಗೊಳಕ್ಕೆ ಪಿಕ್-ನಿಕ್ ಹೋಗೋಣ ಎಂದಾಗ ಬಹಳ ಸಂತೋಷದಿಂದಲೇ ಒಪ್ಪಿಗೆ ಇತ್ತೆ. ಅಲ್ಲಿಗೆ ಹೋಗಬೇಕೆಂಬುದು ನನ್ನ ಬಹಳ ದಿನಗಳ ಆಸೆಯಾಗಿತ್ತು. ಎತ್ತರದ ಚಂದ್ರ ದ್ರೋಣ ಬೆಟ್ಟದ ಮೇಲೆ ಐವತ್ತೇಳು ಅಡಿ ಎತ್ತರದ ಭವ್ಯ ಏಕ ಶೀಲಾ ಮೂರ್ತಿಯನ್ನು ಕಾಣುವ ಕಾತರ-ಕುತೂಹಲದೊಂದಿಗೆ ಹೊರಟೆ.
ಅಲ್ಲಿಗೆ ಹೋದಮೇಲೆ ನಿರಾಸೆ ಕಾಡತೊಡಗಿತ್ತು. ಅಂತಹ ಐತಿಹಾಸಿಕ ಊರಿನ ಪರಿಸ್ತಿತಿ ಕಂಡು ಬೇಸರವಾಯಿತು. ವಿಶ್ವ ಪ್ರಸಿದ್ದ ತಾಣದ ಬಗ್ಗೆ ನನ್ನಲ್ಲಿದ್ದ ಕಲ್ಪನೆ-ಕನಸು ವಾಸ್ತವಕ್ಕಿಂತ ಭಿನ್ನವಾಗಿತ್ತು. ಕಾರಣ ಅಲ್ಲಿನ ನಿರ್ವಹಣೆ.
ವರ್ಷಗಳ ಹಿಂದೆ ಹೊರ ರಾಜ್ಯದ, ಅಷ್ಟೇ ಏಕೆ? ಹೊರ ದೇಶದ ಪ್ರವಾಸಿಗರ ಗಮನ ಶ್ರವಣಬೆಳಗೊಳದತ್ತ ನೆಟ್ಟಿತ್ತು.ಹನ್ನೆರೆಡು ವರ್ಷಗಳಿಗೊಮ್ಮೆ ನಡೆಯುವ ಮಹಾ ಮಸ್ತಕಾಭಿಷೇಕಕ್ಕೆ ಸಹಸ್ರಾರು ಜನರು ಬಂದಿದ್ದರು. ಸರ್ಕಾರವು ಸಕಲ ಪ್ರೋತ್ಸಾಹ ನೀಡಿತ್ತು. ಆದರೆ ಆ ನಂತರ ಅಲ್ಲಿದ್ದ ಕಸದ ರಾಶಿಯನ್ನು ತೆಗೆಯುವ ಕೆಲಸ ಮಾಡಲೇ ಇಲ್ಲ. ಗೊಮ್ಮಟನ ಅಭಿಷೆಕಕ್ಕೆಂದು ಮೇಲೆ ಹತ್ತಲು ಬಳಸಿದ್ದ ಕಬ್ಬಿಣದ ಕಂಬಗಳು ಬೆಟ್ಟದ ಮೇಲೆ ಎಲ್ಲೆಂದರಲ್ಲಿ ಬಿದ್ದಿವೆ. ಆಗ ಕಟ್ಟಿದ್ದ ಬ್ಯಾನರಗಳು-ಪ್ಲಾಸ್ಟಿಕ್ ತೋರಣಗಳೆಲ್ಲ ಅಲ್ಲೇ ಅನಾಥವಾಗಿ ಬಿದ್ದಿವೆ. ಅವುಗಳಿಗಿನ್ನುಮುಕ್ತಿ ಸಿಕ್ಕಿಲ್ಲ !

ಇಂತಿಷ್ಟೇ ಬೀದಿ ಇದೆ ಎಂದು ನಿಖರವಾಗಿ ಲೆಖ್ಖ ಹಾಕಬಹುದಾದ ಪುಟ್ಟ ಊರು ಅದು.ಜಿಲ್ಲಾ ಕೇಂದ್ರವಾದ ಹಾಸನದಿಂದಲೇ ಅಲ್ಲಿಗೆ ಸಾಕಷ್ಟು ಬಸ್ ವ್ಯವಸ್ಥೆ ಇಲ್ಲ. ಪ್ರವಾಸಿಗರ ಪರದಾಟ ಹೇಳತೀರದು. ಹೊಂಡ-ಗುಂಡಿಗಳಿಂದ ಕೂಡಿದ ರಸ್ತೆ, ಬಸ್ಸ್ಟ್ಯಾಂಡ್ನಲ್ಲಂತೂ ಕಣ್ಣಿಗೆ ರಾಚುವ ಕಸ. ಅಚ್ಚುಕಟ್ಟಾಗಿರಬೇಕಿದ್ದ ಅವಳಿ ಬೆಟ್ಟಗಳ ಮೇಲೆ ಯಥೇಚ್ಛವಾಗಿ ಬೆಳೆದ ಕುರುಚಲು ಗಿಡಗಳ ಸಾಲು,ನಿರ್ವಹಣಾ ಅವ್ಯವಸ್ತೆ... ಬಹುತೇಕ ಬಂಡೆಗಳ ಮೇಲೆ ಅನಾಗರಿಕ ಜನರ ಹಸ್ತಾಕ್ಷರ... ಹೀಗೆ ಸಮಸ್ಯೆಗಳ ಪಟ್ಟಿ ಮಾಡುತ್ತ ಹೋದರೆ ಅದು ಗೊಮ್ಮಟನಿಗಿಂತಲೂ ಎತ್ತರಕ್ಕೆ ಬೆಳೆಯಬಹುದು...!!!

ಕೇವಲ ಶ್ರವಣಬೆಳಗೊಳದ ಕಥೆಯಲ್ಲ, ರಾಜ್ಯದ ಬಹುತೇಕ ಪ್ರವಾಸಿ ತಾಣಗಳು ನಿರ್ವಹಣಾ ಕೊರತೆಯಿಂದ ಅಂದಗೆಟ್ಟಿವೆ. ಪ್ರವಾಸಿಗರನ್ನು ಆಕರ್ಷಿಸಲು ವಿಫಲವಾಗುತ್ತಿವೆ. ಯಾಕೆ ಹೀಗಾಯಿತು?

ಒಮ್ಮೆ ಕೊಪ್ಪದಿಂದ ಹಾಸನಕ್ಕೆ ಹೊರಟಾಗ ಬಸ್ಸಿನಲ್ಲಿ ಸಿಕ್ಕ ಚಾರ್ಲ್ಸ್ ದಂಪತಿಗಳು ಹೇಳಿದ ಮಾತು ಮತ್ತೆ-ಮತ್ತೆ ನೆನಪಾಗುತ್ತಿರುತ್ತದೆ. "ಈ ಬೇಲೂರು, ಹಳೇಬೀಡು-ಹಂಪಿ-ಶ್ರವಣಬೆಳಗೊಳ ಇವೆಲ್ಲ ರಾಜ್ಯದಲ್ಲಿದ್ದರು ನೀವೇಕೆ ಇದರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ? ಇಂತಹ ಪ್ರಾಕೃತಿಕ -ಐತಿಹಾಸಿಕ ಸುಂದರ ನಾಡನ್ನು ನೀವೇಕೆ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ? ಹೆಚ್ಚು-ಹೆಚ್ಚು ಪ್ರವಾಸಿಗರನ್ನು ಸೆಳೆದು ಅದರಿಂದಲೇ ಒಟ್ಟು ಆದಾಯದ ಮೂರನೇ ಒಂದು ಭಾಗ ಗಳಿಸುತ್ತಿರುವ ಅನೇಕ ದೇಶಗಳಿವೆ. ಹಾಗಿರುವಾಗ ಇಲ್ಯಾಕೆ ಇಂತಹ ನಿರ್ಲಕ್ಷ್ಯ? ಇಂತಹ ಸ್ಥಳಗಳೇನಾದರು ಯುರೋಪಿನಲ್ಲಿದ್ದಿದ್ದರೆ ಅದರ ಕಥೆಯೇ ಬೇರೆ ಇರುತ್ತಿತ್ತು. ಸರ್ಕಾರ ಏನು ಮಾಡುತ್ತಿದೆ?" ಎಂದು ಅವರು ಕೇಳಿದಾಗ ನಾನು ನಿರುತ್ತರನಾದೆ.

ಹೌದು, ನಾವ್ಯಾಕೆ ಹೀಗೆ? ಹಲವು ವಿಷಯಗಳಲ್ಲಿ ಪಾಶ್ಚಾತ್ಯರನ್ನು ಯಥಾರೀತಿ ಅನುಕರಿಸುವ ನಾವು , ಇಂತಹ ವಿಚಾರಗಳಲ್ಲಿ ಅವರನ್ನೇಕೆ ಮಾದರಿ ಎಂದುಕೊಳ್ಳುವುದಿಲ್ಲ? ಕೇವಲ ಇನ್ನೂರು ವರ್ಷ ಇತಿಹಾಸವಿರುವ ನ್ಯೂಜಿಲೆಂಡಿನಲ್ಲೂ ಹಳೆಯದ್ದನ್ನೆಲ್ಲ ಜೋಪಾನವಾಗಿ ನೋಡಿಕೊಳ್ಳುತ್ತಾರೆ. ಶ್ರೇಷ್ಠ ಕವಿ ಷೇಕ್ಸ್ ಪಿಯರ್ ನ ಜನ್ಮ ಸ್ಥಳ (ಇಂಗ್ಲಂಡ್) ವಿಶ್ವ ಪ್ರಸಿದ್ದ ತಾಣವಾಗಿ ಮಾಡುತ್ತಾರೆ. ಸಣ್ಣ -ಪುಟ್ಟ ಕಲಾಕೃತಿಗಳನ್ನು ಎತ್ತಿಟ್ಟುಕೊಳ್ಳುತ್ತಾರೆ . ಪ್ರವಾಸಿಗರಿಗೆ ಎಲ್ಲ ರೀತಿಯ ಸವಲತ್ತು ಒದಗಿಸುತ್ತಾರೆ. ಇದು ಪಾಶ್ಚಾತ್ಯರ ಪರಿಪಾಠ.

ಆದರೆ ನಮ್ಮಲ್ಲೇನಾಗಿದೆ ನೋಡಿ? ಸಾವಿರ ವರ್ಷ ಹಳೆಯದಾದರೂ ಅದರ ಸಂರಕ್ಷಣೆಯ ಬಗ್ಗೆ ಗಮನ ಹರಿಸುವುದೇ ಇಲ್ಲ. ಕೊಪ್ಪದಲ್ಲೇ ಹುಟ್ಟಿದ ಕನ್ನಡದ ಹೆಮ್ಮೆಯ ಕವಿ ಕು.ವೆಂ.ಪು ರವರ ಹುಟ್ಟೂರು ಈಗ ಹೇಗಿದೆ ಎಂಬುದು ಎಲ್ಲರಿಗು ತಿಳಿದ ವಿಷಯ. ಸರ್ಕಾರ ಈ ಬಗ್ಗೆ ಏಕೆ ಗಮನ ಹರಿಸುತ್ತಿಲ್ಲ? ಕೇವಲ ಸರ್ಕಾರವನ್ನಷ್ಟೇ ಬೊಟ್ಟು ಮಾಡಿ ತೋರಿಸಿದರೆ ತಪ್ಪಾಗುತ್ತದೆ. ಇದರಲ್ಲಿ ಜನ ಸಾಮಾನ್ಯರ ಪಾಲೂ ಇದೆ. ರಸ್ತೆಯಲ್ಲಿ ಕಂಡ-ಕಂಡಲ್ಲೆಲ್ಲಾ ಉಗಿಯುತ್ತೇವೆ. ಪ್ಲಾಸ್ಟಿಕ್ ಕಸವನ್ನು ಎಲ್ಲೆಂದರಲ್ಲಿ ಎಸೆದು, ಸೃಷ್ಟಿ ಸೌಂದರ್ಯವನ್ನು ಹಾಳು ಮಾಡುತ್ತೇವೆ. ಐತಿಹಾಸಿಕ ಪ್ರವಾಸಿ ಸ್ಥಳದ ಎಲ್ಲ ಕಡೆ ನಮ್ಮ ಹೆಸರನ್ನು ಕೆತ್ತಿ ವಿಕೃತ ಸುಖ ಪಡುತ್ತೇವೆ. ಸಾರ್ವಜನಿಕ ಸ್ವತ್ತನ್ನು 'ಯಾರದ್ದೋ' ಎಂಬಂತೆ ನಿರ್ಲಕ್ಷ್ಯದಿಂದ ನೋಡುತ್ತೇವೆ. ಜವಾಬ್ದಾರಿಯುತ ನಾಗರೀಕರೆನಿಸಿಕೊಂಡ ನಮಗೆ ಇಂಥಹ ವಿಚಾರಗಳಲ್ಲಿ ವಿದೇಶಿಯರು ಮಾದರಿಯಾಗುವುದಿಲ್ಲ! ಏನಾಗಿದೆ ನಮಗೆ?

ನಮ್ಮ ಜನರ ದಿವ್ಯ ನಿರ್ಲಕ್ಷ್ಯ ಕಂಡು ಗೊಮ್ಮಟ ನಿಶ್ಚಲವಾಗಿ ಮುಗುಳು ನಗುತ ನಿಂತಿದ್ದಾನೆ. ಬಹುಷಃ ಇದನ್ನೆಲ್ಲಾ ಕಂಡು ಬಾಹುಬಲಿಗೆ ಮತ್ತಷ್ಟು ವೈರಾಗ್ಯ ಹುಟ್ಟಬಹುದೇನೂ....!

3 ಕಾಮೆಂಟ್‌ಗಳು:

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನುಇಲ್ಲಿ ಬರೆಯಿರಿ