ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಗುರುವಾರ, ಮಾರ್ಚ್ 1, 2012

ಒಂದು ಬೆಳ್ಳಿ ಕೂದಲು


ಮೊನ್ನೆ ಒಂದು ಭಾನುವಾರದಂದು
ಲೇಟಾಗೆದ್ದು, ಹಲ್ಲುಜ್ಜಿ ಕಾಫಿ ಹೀರಿ
ಹಾಡುಹೇಳುತ್ತಾ ಸ್ನಾನ ಮಾಡಿ
ಕನ್ನಡಿ ಮುಂದೆ ತಲೆ ಒರೆಸಿಕೊಳ್ಳುತ್ತಾ
ನಿಂತವನಿಗೆ ತಲೆಯಲ್ಲೇನೋ
ಫಳ್ ಎಂದು ಹೊಳೆದಂತಾಯ್ತು...

ನನ್ನಂಥ ಟ್ಯೂಬ್‍ಲೈಟು ಕವಿಗೆ
ಆಗೀಗ ಹಾಗೆ ಝಗ್ಗನೆ ಸ್ಪೂರ್ತಿ
ಉಕ್ಕುವುದು ಹೊಸತಲ್ಲ ಬಿಡಿ...

ಆದರೆ ಈ ಬಾರಿ ಹಾಗಲ್ಲ,
ಹೀಗೆ ಹೊಳೆದಿದ್ದು ತಲೆಯೊಳಗಲ್ಲ,
ಅದೊಂದು ಬೆಳ್ಳಿ ಕೂದಲು!

ಅರೆ! ಅರವತ್ತಾದ ಮೇಲೆ
ಬಣ್ಣ ಬದಲಿಸಬೆಕಾದ್ದು
ಈಗಲೇ ಫಳಫಳಿಸಿದರೆ ಹೇಗೆ?!
ಅದೂ ನನ್ನಂಥ ಮೊನ್ನೆ ಮೊನ್ನೆ
ಟೀನೇಜು ಜಾರಿಸಿದವನಿಗೆ...?
ತಲೆ ಕೆರೆದು ಯೋಚಿಸಿದೆ,
ಒಂದಿಷ್ಟು ಕೂದಲುದುರಿತೇ ವಿನಃ
ಉತ್ತರ ಸಿಗಲಿಲ್ಲ...


ತಲೆಬಿಸಿಯಾಯ್ತು...
ನನಗಿನ್ನೂ ಇಪ್ಪತ್ತೈದಾಗಿಲ್ಲ,
ಮದುವೆ ಆಗಿಲ್ಲ; ಹೋಗಲಿ,
ಹುಡುಗಿಯನ್ನೂ ಹುಡುಕಿಕೊಂಡಿಲ್ಲ!
ಈಗಷ್ಟೇ ಅಆಇಈ ಮುಗಿಸಿ
ಕಾಲೇಜು ಮೆಟ್ಟಿಲೇರಿದವನಿಗೆ
ಕೂದಲು ಬೆಳ್ಳಗಾಗಲು ಕಾರಣವೇ ಇಲ್ಲ...

ಇರಬಹುದೇ ಇದು
ತಲೆತುಂಬಾ ತುಂಬಿಕೊಂಡ
ಟೆನ್ಶನ್ನುಗಳ ಫಲ?
ಮಾಲಿನ್ಯ? ವಿಷವುಳ್ಳ ಆಹಾರ?
ಅಥವಾ ನನ್ನ ಚಂದದ ಕೂದಲ ಮೇಲೆ
ಯಾರದೋ ಹೊಟ್ಟೆಕಿಚ್ಚು?!

ತಲೆ ಕೊಡವಿದೆ;
ಹೋಗಲಿ ಬಿಡಿ, ಯಾಕಿಷ್ಟು ಚಿಂತೆ?
ಇಷ್ಟಕ್ಕೂ ಒಂದೇ ಒಂದು ಕೂದಲು ತಾನೇ..?
ಬಿಳಿಕೂದಲು ಬುದ್ದಿಜೀವಿಗಳ ಲಕ್ಷಣ!
ಆದರೂ...
ಸದ್ಯಕ್ಕೆ ಹೇರ್‌ಡೈ ಹಚ್ಚೋಣ..!!

3 ಕಾಮೆಂಟ್‌ಗಳು:

  1. ನಮಗೆಲ್ಲಾ ಕೂದಲು ಬಿಳಿಯಾಗುತ್ತಿರುವುದು ಸಮಸ್ಯೆಯೆಂದನಿಸುತ್ತಿಲ್ಲ. ಕೂದಲುಗಳು ಉದುರುವುದಕ್ಕಿಂತ ಬಿಳಿಯಾಗುವುದು ಸಾವಿರಪಾಲು ಒಳ್ಳೆಯದು!!!

    ಪ್ರತ್ಯುತ್ತರಅಳಿಸಿ
  2. ನನ್ಗೆ ಒಂಬತ್ತನೇ ಕ್ಲಾಸಿಂದ್ಲೇ ಕೂದ್ಲು ಬೆಳ್ಳಗಾಗಕ್ಕೆ ಶುರುವಾಗಿತ್ತು.... :-)

    ಕವನ ಚೆನ್ನಾಗಿದೆ

    ಪ್ರತ್ಯುತ್ತರಅಳಿಸಿ

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನುಇಲ್ಲಿ ಬರೆಯಿರಿ