ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಮಂಗಳವಾರ, ಮಾರ್ಚ್ 16, 2010

ವಾನರನ ಬಾಯಾರಿಕೆ…!ತುಮಕೂರಿನ ಪ್ರವಾಸಿ ಸ್ಥಳವಾದ ಶಿವಗಂಗೆಯ ಈ ಮಂಗಕ್ಕೆ ನೀರಡಿಕೆ ತಣಿಸಲು ಜ್ಯೂಸೇ ಬೇಕಂತೆ,ನೀವೆ ನೋಡಿ…!

ಹೊಸತನಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ರೈತ
ಇತ್ತೀಚೆಗಂತೂ ಯಾವ ದಿನಪತ್ರಿಕೆಗಳ ಮೇಲೆ ಕಣ್ಣು ಹಾಯಿಸಿದರೂ ಒಂದು ಸುದ್ದಿ ಮಾತ್ರ ಇದ್ದೇ ಇರುತ್ತೆ. “ರಸ್ತೆಗೆ ಟೊಮ್ಯಾಟೋ ಸುರಿದು ರೈತರ ಪ್ರತಿಭಟನೆ” ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡ ಸುದ್ದಿಯ ಜೊತೆಗೊಂದು ಫೋಟೋ… ಚಂದದ ಟೊಮ್ಯಾಟೋಗಳನ್ನೆಲ್ಲ ಹಾಗೆ ಸುರಿದದ್ದನ್ನು ಕಂಡು ಎಷ್ಟೋ ಜನ “ಛೆ! ದಂಡ ಮಾಡ್ತಿದ್ದಾರಲ್ಲಾ..” ಎಂದು ಗೊಣಗಿದ್ದುಂಟು.

ಯಾಕೆ ಹೀಗಾಯ್ತು…? ರೈತರು ಬೆಳದಿದ್ದನ್ನು ಕೊಳ್ಳುವ ದಲ್ಲಾಳಿಗಳು ಮಾರುಕಟ್ಟೆಯನ್ನು ನಿಯಂತ್ರಿಸುತ್ತಿದ್ದಾರೆ.ಕನಿಷ್ಠ ಬೆಲೆಯೂ ಸಿಗದೇ ಕೃಷಿಕ ಕಂಗಾಲಾಗಿದ್ದಾನೆ.
ಜಾಗತೀಕರಣ, ಆಧುನಿಕೀಕರಣದ ಈ ಹೊತ್ತಿನಲ್ಲಿ ಸಾಂಪ್ರದಾಯಿಕ ಕೃಷಿಗೆ ಹಿನ್ನಡೆ ಉಂಟಾಗಿದೆ. ಹೀಗಾಗಿ ಬದಲಾದ ಪರಿಸ್ತಿತಿಯಲ್ಲಿ ರೈತರು ಹೊಸ ಮಾರ್ಗಗಳನ್ನು ಕಂಡುಕೊಳ್ಳುವುದು ಅನಿವಾರ್ಯ. ಉದಾಹರಣೆಗೆ ಹೀಗೆ ವ್ಯರ್ಥವಾಗಿ ಟೊಮ್ಯಾಟೋಗಳನ್ನೂ ರಸ್ತೆಗೆ ಸುರಿಯುವ ಬದಲು ರೈತರು ತಮ್ಮ ಮನೆಯಲ್ಲೇ ಅದನ್ನು ಸಂಸ್ಕರಿಸಿ ಜಾಮ್, ಜೆಲ್ಲಿ ಮೊದಲಾದ ಮೌಲ್ಯವರ್ಧಿತ ಪದಾರ್ಥಗಳನ್ನಾಗಿ ಪರಿವರ್ತಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದು.ಈ ಮೂಲಕಹೆಚ್ಚಿನ ಲಾಭ ಗಳಿಸಬಹುದು.ಸಮಾನ ಮನಸ್ಕರು ಒಂದೆಡೆ ಸೇರಿ ಇಂತಹ ಸಣ್ಣ ಉದ್ದಿಮೆಗಳನ್ನು ಪ್ರಾರಂಭಿಸಲು ಬ್ಯಾಂಕುಗಳಿ0ದಲೂ ಹಣಕಾಸು ವ್ಯವಸ್ಥೆಯಿದೆ. (ಸರ್ಕಾರದಿಂದಲೂ ಹತ್ತು ಹಲವು ಉಪಯುಕ್ತ ಸೌಲಭ್ಯಗಳು ಲಭ್ಯವಿದ್ದರೂ ಅದು ಬಹುತೇಕ ಯೋಗ್ಯರನ್ನು ತಲುಪುತ್ತಿಲ್ಲವಷ್ಟೇ …!)

ಅವರವರದ್ದೇ ಹೊಲದ ಉತ್ಪನ್ನಗಳನ್ನು ಅವರೇ ಸಂಸ್ಕರಿಸಿ ನೇರ ಮಾರಾಟ ಮಾಡುವ ಮೂಲಕ ಯಶಸ್ವಿಯಾಗಬಹುದು. ಸೂಕ್ತ ಬೆಲೆ ಸಿಗದಿದ್ದಾಗ ಆತ್ಮಹತ್ಯೆಯಂತಹ ಆಲೋಚನೆ ಬಿಟ್ಟು, ನಿರಾಶರಾಗದೆ ಇಂತಹ ಪ್ರಯತ್ನಗಳಿಗೆ ಮುಂದಗಬಾರದೇಕೆ…??

ವಿಪರ್ಯಾಸ

ಧನದಾಹ ತೊರೆದು
ಬೆಟ್ಟದ ಮೇಲೆ ಬೆತ್ತಲೆ ನಿಂತ
ಬಾಹುಬಲಿಯ
ಕಾಲಿನ ಬಳಿ
ಕಾಣಿಕೆ ಹುಂಡಿ…!

# ## ## ## #

ತಣ್ಣನೆಯ
ನೀರಿನಲ್ಲೂ
ಬಿಸಿ ಸೂರ್ಯ
ಬಿಂಬಿಸುತ್ತಾನೆ…

# ## ## #

ಉಳುಮೆ ಮಾಡಿ
ಹೃದಯ ಸೀಳಿ
ಬಿತ್ತಿದರೂ
ಇಳೆ
ನಮಗೆ
ಹಸಿರನ್ನೇ
ಕೊಡುತ್ತಾಳೆ..

# ## ## #

ಕಾಲಡಿಯ
ಬೆಲೆಬಾಳುವ
ಮಣ್ಣನು ಬಿಟ್ಟು
ಕಡಲಾಳದ
ಬಿಳಿ ಮುತ್ತಿಗೆ
ಹಂಬಲಿಸುತ್ತೇವೆ…

ವಿವಾದ ಮತ್ತು ನನಗನ್ನಿಸಿದ್ದು…
ನಿಜಕ್ಕೂ ನಮ್ಮ ಭವಿಷ್ಯದ ಬಗ್ಗೆ ಯೋಚಿಸಿದಾಗಲೆಲ್ಲ ಒಂಥರಾ ತಳಮಳ ಉಂಟಾಗುತ್ತದೆ…

ಇತ್ತೀಚಿಗೆ ಹಾಸನ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಗಲಭೆ ನಡೆದಿದ್ದು ನಿಮಗೆ ಗೊತ್ತೇ ಇದೆ. ಕನ್ನಡ ಪ್ರಭದಲ್ಲಿ ಪ್ರಕಟವಾದ ‘ಪರ್ದಾ ಹೈ ಪರ್ದಾ’ ಎಂಬ ಲೇಖನ ವಿವಾದಕ್ಕೆ ಕಾರಣ. ಒಂದು ಆರೋಗ್ಯಕರ ಚರ್ಚೆಗೆ ಕಾರಣವಾಗಬೇಕಿದ್ದ ಬರಹ ಗಲಭೆಗೆ ಕಾರಣವಾಗಿ ಅಮಾಯಕರು ಬಲಿಯಾಗುವಂತಾಗಿದ್ದು ವಿಷಾದಕರ ಸಂಗತಿ.

ಇಷ್ಟಕ್ಕೂ ಆ ಬರಹದಲ್ಲಿ ಇದ್ದಿದಾದರೂ ಏನು…? ಬುರ್ಖಾ ಹಾಕುವ ಸಂಪ್ರದಾಯ ಹೇಗೆ ಪ್ರಾರಂಭವಾಗಿ ಈಗ ಯಾವ ಹಂತಕ್ಕೆ ತಲುಪಿದೆ ಎಂದಷ್ಟೇ ಅಲ್ಲಿ ವಿಶ್ಲೇಷಿಸಲಾಗಿದೆ. ಅಷ್ಟಕ್ಕೂ ಇದೇನೂ ಹೊಸ ವಿಚಾರವಲ್ಲ.ಹಲವಾರು ದಶಕಗಳಿಂದಲೂ ಈ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಆದರೆ ಬದುಕುವ ದಾರಿ ತೋರಿಸಲೆಂದಿರುವ ಧರ್ಮ ಸ್ತ್ರೀಯರ ಸ್ವಾತಂತ್ರ್ಯ ಕಿತ್ತುಕೊಳ್ಳುವುದು ಖಂಡಿತಾ ಸರಿಯಲ್ಲ. ಇದನ್ನು ಕಾಲಕ್ರಮೇಣ ಬದಲಾಯಿಸಿಕೊಂಡಿದ್ದರೆ ಎಲ್ಲವೂ ಸರಿಯಿರುತ್ತಿತ್ತು.ಆದರೆ ಹಾಗಾಗಲಿಲ್ಲ.

ತಪ್ಪನ್ನು ಎತ್ತಿ ತೋರಿದ್ದೇ ದೊಡ್ಡ ತಪ್ಪಾಯಿತೇನೋ…? ವಿಚಾರ ಮಾಡಲು ಸಾಮರ್ಥ್ಯವಿರದ ಅನೇಕರು ಗಲಾಟೆ ಮಾಡುವ ಉದ್ದೇಶ ಇಟ್ಟುಕೊಂಡೇ ಮೆರವಣಿಗೆಗಿಳಿದರು. ಅವರಿಗೊಂದು ನೆಪ ಬೇಕಿತ್ತಷ್ಟೇ. ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡಿದ್ದಷ್ಟೇ ಅಲ್ಲದೆ ತಮ್ಮ ಪಾಡಿಗೆ ತಾವಿದ್ದ ಆಟೋ ಡ್ರೈವರುಗಳಂತಹ ಅಮಾಯಕರ ಮೇಲೆ ಹಲ್ಲೆ ನಡೆಸಿದರು. ಇದರಿಂದ ಕೋಪಗೊಂಡ ಹಿಂದುಗಳೂ ಪ್ರತಿಧಾಳಿ ನಡೆಸಿದರು. ಅಲ್ಲೂ ತುತ್ತಾಗಿದ್ದು ಅಮಾಯಕರೆ… ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಎರೆಡೂ ಧರ್ಮಗಳ ಪ್ರಜ್ಞಾವಂತರ್ಯಾರೂ ಗಲಭೆಗೆ ಇಳಿಯಲಿಲ್ಲ. ಧರ್ಮದ ಹೆಸರಿನಲ್ಲಿ ಕೆಲ ಕಿಡಿಗೇಡಿಗಳು ಮಾಡಿದ ಕೃತ್ಯ ಎಲ್ಲರಿಗೂ ಕೆಟ್ಟ ಹೆಸರು ತಂದಿತಷ್ಟೆ.

ಇದಕ್ಕೆಲ್ಲಾ ಮೂಲ ಕಾರಣ ನಮ್ಮವರ ವಿಚಾರ ಶಕ್ತಿಯ ಕೊರತೆ. ಯಾರೋ ಎಂದೋ ಹೇಳಿದ್ದನ್ನ, ಮಾಡಿದ್ದನ್ನ, ಬರೆದಿದ್ದನ್ನ ಇಂದಿಗೂ ನಾವು ಯಥಾವತ್ತಾಗಿ ಅನುಕರಿಸುವ ಭರದಲ್ಲಿ ವೈಚಾರಿಕತೆಯನ್ನೇ ಕಳೆದುಕೊಂಡಿದ್ದೇವೆ. ಬದುಕಿನ ಸುಭದ್ರತೆಗಾಗಿ ಹುಟ್ಟಿಕೊಂಡ ದೇವರ ಕಲ್ಪನೆ, ಧರ್ಮದ ಆಚರಣೆಗಳು ಕಂದಾಚಾರಗಳಾಗಿ ಬದಲಾಗಿ ಅರ್ಥಹೀನ ಎನಿಸಿಕೊಳ್ಳುತ್ತಿರುವುದು ದುರಾದೃಷ್ಟಕರ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಮನುಕುಲದ ನಾಶಕ್ಕಿದು ಮುನ್ನುಡಿಯಾದೀತು.

ಇನ್ನೊಬ್ಬನಿಗೆ ಕೆಟ್ಟದು ಮಾಡಬಾರದು,ಮತ್ತೊಬ್ಬರ ಬದುಕಿಗೆ ಹಾನಿ ಮಾಡಬಾರದು,ಸಮಾಜಕ್ಕೆ ಹಿತವಾಗುವಂತಹ ಕೆಲಸಗಳನ್ನು ಮಾಡಬೇಕು, ದುಷ್ಟ ಕಾರ್ಯಗಳನ್ನು ದೂರವಿಡಬೇಕು ಅಂತೆಲ್ಲ ಹೇಳಿಕೊಡೋಕೆ ನಮಗೆ ಬೈಬಲ್, ಕುರಾನ್,ಭಗವದ್ಗೀತೆಗಳೇ ಬೇಕಾ…? ನಮ್ಮ ಯೋಚನಾ ಶಕ್ತಿಗೆ ತುಕ್ಕು ಹಿಡಿಸದೆ ಮಾನವೀಯತೆಯಿಂದ ಯೋಚಿಸಿದರೆ ಇವೆಲ್ಲಾ ತಿಳಿದೀತು.ಸ್ವತಂತ್ರ್ಯವಾಗಿ ಯೋಚಿಸೋಕೂ ನಾವು ಅಸಮರ್ಥರೇ …? ಇಷ್ಟಕ್ಕೂ ಪವಿತ್ರ ಗ್ರಂಥಗಳಲ್ಲಿ ಹೇಳಿದ ಒಳ್ಳೆಯ ಅಂಶಗಳನ್ನೆಲ್ಲಾ ನಾವು ಆಚರಣೆಗೆ ತಂದಿದ್ದೆವೆಯೇ…?

ಈ ಎಲ್ಲ ದೇವರು-ಧರ್ಮದ ಮೌಡ್ಯಗಳನ್ನು ತೊರೆದು ,ವೈಚಾರಿಕತೆ ಎಲ್ಲರಲ್ಲೂ ಉದಿಸಿ ನಾವೆಲ್ಲಾ ಒಂದೇ ಎಂಬ ಭಾವನೆಯಿಂದ ‘ವಿಶ್ವಮಾನವ’ರಾಗಿ ಶಾಂತಿ-ಸಹನೆಯ ಬಾಳ್ವೆ ನಡೆಸುವುದು ಯಾವಾಗ…?