ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಭಾನುವಾರ, ಜುಲೈ 4, 2010

ಕಲ್ಲು ಹೃದಯ ಹೇಳಿದ್ದು...

ಕಲ್ಲು ಹೃದಯ ಹೇಳಿದ್ದು...
ಬೇಕಿಲ್ಲವೆನಗೆ
ಅ ಗರ್ಭ ಗುಡಿಯೊಳಗಿನ
ದುರ್ಭರ ಬದುಕು
ಮಲಗಿರುವೆ ಇಲ್ಲಿಯೇ
ಮರದ ಬುಡದಲ್ಲಿ
ಬಿಸಿಲಿಗೆ ಮೈಯೊಡ್ಡಿಯೂ ಆರಾಮವಾಗಿ...

ಯಾರಿಗೆ ಬೇಕು ಹೇಳಿ
ಇಲ್ಲಿಂದ ಉರುಳಿಸಿಕೊಂಡು
ಮತ್ತೆಲ್ಲಿಗೋ ತೆರಳಿ ನೀರಲ್ಲಿ ಮುಳುಗಿ
ಅವರಿಗೆ ಬೇಕಾದ ಹಾಗೆ
ಕೆತ್ತಿಸಿಕೊಂಡು
ಸತ್ತು ಹೋಗುವ ಬದುಕು...?
ಇದ್ದು ಬಿಡುವೆ ಇಲ್ಲಿಯೇ
ಗಾಳಿಗೆ ಮೈದೆರೆದು
ನಿಧ-ನಿಧಾನವಾಗಿ ಸವೆ-ಸವೆದು...

ಬೇಡವೆನಗೆ ಆ ನಿಮ್ಮ
ಸುಗಂಧ, ಹಾರ, ಧೂಪ, ನೈವೇದ್ಯ
ಪಂಚಾಮೃತದ ಅಭಿಷೇಕ, ಗೊಣ-ಗೊಣ ಮಂತ್ರ
ಸುತ್ತ ಗೋಡೆ ಕಟ್ಟಿ
ಕತ್ತಲು ಮಾಡಿ ಮತ್ತೆ ಹಚ್ಚುವ ದೀಪ
ಆರತಿಯ ಉಸಿರುಗಟ್ಟಿಸುವ ಹೊಗೆ
ಸಾಕೆನಗೆ ಈ ಬೆಳಕು
ಅರಳಿದ ಸಂಪಿಗೆಯ ಘಮ
ಆಗಾಗ ತೊಳೆವ ಮಳೆ
ಹಕ್ಕಿಗಳಿಂಚರ
ಮೈಮೆಲೆಹರಿವ ಇರುವೆಯ ಮಧುರ ಸ್ಪರ್ಶ...

ಬೇಕಿಲ್ಲವೆನಗೆ ಅಡ್ಡಡ್ಡ ಬೀಳುವ ಭಕ್ತಾಭಿಮಾನಿಗಳು
ಆ ದುಡ್ಡು ಆ ಮಂತ್ರ ಆ ಗವಿ ಆ ಅಂಧಕಾರ..
ಇಲ್ಲೇ ಬಿದ್ದಿರುವೆ ಹೀಗೆ
ಅನಾಥವಾಗಿ ಸವೆಯುತ್ತ
ಸವಿಯುತ್ತ
ಮುಂಜಾನೆಯ ಸೂರ್ಯೋದಯ
ಸಂಜೆಯ ಸುಂದರ ರಾಗ..
ನಿಸರ್ಗದ ನಿನಾದವ ಆಲಿಸುತ್ತ
ಹೀಗೆ ಬಿದ್ದಿರಲು ಬಿಡಿ ಇಲ್ಲೇ
ಎಂದೆಂದಿಗೂ...

ಶುಕ್ರವಾರ, ಜುಲೈ 2, 2010

ರನ್ನ ಚರಿತ

ಹತ್ತನೆಯ ಶತಮಾನದೋಳ್
ತಾನ್ ಬರೆದ
ಮಹಾಭಾರತದ
‘ಸಾಹಸ ಭೀಮ ವಿಜಯ೦’
ಎಂಬ ಕೃತಿಯ೦
ಪ್ರಸ್ತುತ
ಇಪ್ಪತ್ತೊ೦ದನೆಯ ಶತಮಾನದೋಳ್
‘ನವಭಾರತ’ವೆಂಬ ಪೆಸರೋಳ್
ಚಲನಚಿತ್ರವಾಗಿರ್ಪದೆ೦ಬ
ಮಿಥ್ಯ ಸುದ್ದಿಯಂ ಕೇಳಿ
ತಡಬಡಿಸಿ ಸ್ವರ್ಗದಿಂದಿಳಿದು
ಬ೦ದನಾರನ್ನ ಮಹಾಶಯನ೦
ಭುವಿಯಲವತರಿಸಿ
ತನ್ನ ನಾಡಾಲ್ ಇರ್ಪ ಒ೦ದು
ಸಿನೆಮಾ ಥಿಯೇಟರ೦ ಪೊಕ್ಕು
ಆ ಚಲನಚಿತ್ರ೦ ನೋಳ್ಪೆ
ಆ ಲಲನೆಯರ ಕಂಡು
ಅರೆಕ್ಷಣದಲ್ಲಿ
ಹೆದರಿ-ಬೆದರಿ ಬೆವರ್ಪಲಾಗಿ
ಪ್ರಜ್ಞೆ ತಪ್ಪಿ ಭುವಿಗುರುಳಿ
ಮತ್ತೆ ಮಣ್ಣಾದನಾ ರನ್ನ ಭೂಪ೦…!

ವರ್ಣನೆ…

ಎಲ್ಲ ಸುಂದರಿಯರಂತೆ
ನನ್ನವಳಿಗೂ ಎರೆಡು ಕಣ್ಣು,
ಚಂದಿರನ ಮೇಲಿನ ಕಪ್ಪು ಕಲೆಗಳ ಹಾಗೆ !
ಮತ್ತೆರೆಡು ಕಿವಿ,ಅವೋ ಗಜದಗಲ…
ಮೂಗು…?
ಅದು ಒಂದೇ
ಅದರಲ್ಲಿದೆ ಎರೆದು ರಂಧ್ರ,
ಇಲಿಯ ಬಿಲದ ಹಾಗೆ…!
ಮತ್ತ್ತೆ ಯಥಾ ಪ್ರಕಾರ
ತುಟಿ ತೊಂಡೆಯ ಹಾಗೆ
ಹಲ್ಲು ಕೆಂಪು-ಕೆಂಪು ಹೈಬ್ರಿಡ್ ದಾಳಿಂಬೆಯ ಹಾಗೆ…!
ಗಲ್ಲ ಕರಿ ಇರುವೆ ಮುಟ್ಟಿದ ಬೆಲ್ಲದ ಹಾಗೆ…!
ಕೇಶರಾಶಿಯೋ …
ಬೆಳ್ಳಿ ಮೋಡದ ಹಾಗೆ…!
ಮತ್ತೆ ನೋಡದ ಹಾಗೆ….!!!!

ಹುಡುಗರಿಗೆ ಟೈಮೇ ಇಲ್ಲ…!

ಏನ್ಮಾಡೋಣ ಹೇಳಿ
ನಮ್ಮ ಹುಡುಗರಿಗೆ
ಓದಲು ಟೈಮೇ ಇಲ್ಲ…
ದಿನಕ್ಕೆ ಬರೀ ಇಪ್ಪತ್ನಾಲ್ಕು ಗಂಟೆ
ವಾರಕ್ಕೆ ಏಳೇ ಏಳು ದಿನ
ಇಷ್ಟೇನೇ…ಸಾಕಾಗೋದಿಲ್ಲ

ಎಂಟು ಗಂಟೆಗೆ
ಮೊದಲೇ ಎದ್ದರೆ
ಮುಂಜಾನೆ ಸೂರ್ಯನಿಗೆ ಅವಮಾನ
ಸ್ನಾನ,ತಿಂಡಿ
ಒಂದಿಷ್ಟು ಹೊತ್ತು ಕನ್ನಡಿ
ಲೆಕ್ಚರು ಬರುವ ಮೊದಲೇ ಕ್ಲಾಸಲ್ಲ್ಲಿ ಕೂರುವುದು ಅಪಮಾನ!

ಐದೇ ಐದು ನಿಮಿಷ
ತಡವಾಯ್ತು ಕ್ಲಾಸಿಗೆ, ಅಡ್ಡಿಯಿಲ್ಲ
ಮತ್ತೆ ಇದ್ದೆ ಇದೆಯಲ್ಲ ದಿಂಬಿಲ್ಲದ ನಿದ್ದೆ…?!
ಆಗಾಗ ಬರುವ ಬೇರೆ ಲೆಕ್ಚರು
ಹೆಸರಿಗಷ್ಟೇ ಪ್ರಾಕ್ತಿಕಲ್ಲು
ಎಲ್ಲ ಕನಸಿನ ಹಾಗೆ ಇದ್ದಿದ್ದೆ…!

ಮದ್ಯಾಹ್ನ ಎರೆಡು ಚಪಾತಿ, ಮುದ್ದೆ, ಅನ್ನ-ಸಾಂಬಾರು
ಮತ್ತೆ ಕ್ಲಾಸಲ್ಲಿ ಕಣ್ ಬಿಟ್ಟೇ ಗಡದ್ದಾಗಿ ಗೊರೆಕೆರಹಿತ ನಿದ್ದೆ
ಮತ್ತೆ ಆಗಾಗ ಆಕಳಿಕೆ
ಸಂಜೆ ನಾಲ್ಕೂವರೆಗೆ ಜೈಲಿಂದ ಬಿಡುಗಡೆ
ಮತ್ತೊಂದಿಷ್ಟು ಹೊತ್ತು ಆಡಲಿಕ್ಕೆ

ಆಮೇಲೆ ಒಂದಿಷ್ಟು ಬಜ್ಜಿ,ಗೋಭಿ
ಆಮ್ಲೇಟು, ನೂಡಲ್ಸು
ಅಂಗಡಿಯವನನ್ನು ದಿನಾ ಉದ್ದಾರ ಮಾಡದಿರಲಾದೀತೇ?
ಎಂಟು ಗಂಟೆಗೆ ಊಟ
ನಂತರ ಒಂದೆರೆಡು ಹಾಲಿವುಡ್ ಸಿನಿಮಾ ನೋಟ
ಮತ್ತೆ ಹುಡುಗಿಯರ ಜೊತೆ ಗಂಟೆಗಟ್ಟಲೆ ಹರಟೆ
ಸಿಕ್ಕ-ಸಿಕ್ಕವರಿಗೆಲ್ಲಾ ಮೆಸೇಜು…

ಮತ್ತೆ ಗೆಳೆಯರ ರೂಮಿಗೆ ತೆರಳಿ
ಅವರಿವರ ಬಗ್ಗೆ ಮಾತುಕತೆ-ಪುರಾಣ
ಇನ್ನೊಬ್ಬರ ಪ್ರೀತಿಯ ವಿಚಾರ-ಇವರ ಬಾಯಿಗೆ ಆಹಾರ…!
ದಿನವಿಡೀ ಬಳಲಿ
ಮೆತ್ತನೆಯ ಹಾಸಿಗೆಯಲಿ ಉರುಳಿ
ಕಣ್ಮುಚ್ಚುತ್ತಿದ್ದಂತೆಯೇ ನಿದ್ರಾದೇವಿಗೆ ಹಾರ..!

ಇನ್ನು ಭಾನುವಾರಗಳೋ…
ಲೇಟಾಗಿ ಎದ್ದು,ಬಟ್ಟೆ-ಗಿಟ್ಟೆ ಒಗೆದು
ಗಡಿಬಿದಿಯಲ್ಲೇ ಓಟ;
ನೆಚ್ಚಿನ ಹೀರೋನ ಹೊಸ ಸಿನೆಮಾ
ಕೂಡಲೇ ನೋಡದಿದ್ದರೆ
ಗಂಟಲಲ್ಲಿಳಿದೀತೆ ಊಟ…?!

ಲೈಬ್ರರಿ ಇರುವುದೋ
ಶುಕ್ರವಾರದ ಸಿನೆಮಾ ರಂಜನೆ
ನೋಡ(ಓದ)ಲಿಕ್ಕೆ…
ಆಗಾಗ ವಕ್ಕರಿಸುವ ಪರೀಕ್ಷೆಗಳೋ
ದಿನಾ ಸಾಯೋರಿಗೆ ಅಳುವುದೆತಕ್ಕೆ?

ಛೆ…! ಪಾಪ
ಏನ್ಮಾಡೋಣ ಹೇಳಿ
ನಮ್ಮ ಹುಡುಗರಿಗೆ
ಓದಲು ಟೈಮೇ ಇಲ್ಲ…!!!

ಭಾವ ಬಿಂದುಗಳು...

ಕಾರಣ
ಇನ್ನು
ಸೂರ್ಯ ಬರುವ
ಹೊತ್ತಾಯಿತೆಂದು
ಮೊಂಬತ್ತಿ
ಮುಗಿದುಹೋಯಿತು…
~~~~~~~~
ವಿ-ಚಿತ್ರ
ನೋಟ್ ಬುಕ್ಕಿನ
ನಡುವೆ
ಸಿಕ್ಕಿ ಸತ್ತ
ನೊಣ
ತನ್ನ ಚಿತ್ರ
ತಾನೇ
ಬಿಡಿಸಿಕೊಂಡಿತು…
~~~~~~~
ಕಾಯುವಿಕೆ
ಕಾದು ಕುಳಿತಳು
ಶಬರಿ
ಬಿಸಿಲಲ್ಲಿ
ಕಾದು ಬರುವ
ರಾಮನಿಗಾಗಿ…
~~~~~~~~
ವಿಷಾದ
ನಗರದ ನೂರಾರು
ಬೀದಿ ದೀಪಗಳ ನಡುವೆ
ತಾರೆಗಳ ಮಿನುಗು
ಮಂಕಾಯಿತು…
~~~~~~~~
ನಿರ್ಧಾರ
ಹೂವಾಗಿ ನಾನು
ಬಾಡಿದರೇನು…?
ಕಾಯಾಗಿ
ಹಣ್ಣಾಗಿ
ಮತ್ತೆ ಅರಳುವೆನು…
~~~~~~~
ಪಾಂಚಾಲಿ
ಒಂದೇ
ಹೂವಿಗೆ
ಐದು
ದುಂಬಿಗಳು….

ಅನರ್ಥಕೋಶ


ನಾ. ಕಸ್ತೂರಿಯವರ ‘ಅನರ್ಥಕೋಶ’ ಯಾರಿಗೆ ಗೊತ್ತಿಲ್ಲ ಹೇಳಿ…? ಪದಗಳನ್ನು ತಿರು ತಿರುಚಿ ಹೊಸ ಅರ್ಥಗಳನ್ನು ಹೊರಡಿಸುವಲ್ಲಿ ಅವರು ಪ್ರವೀಣರು.

ಅದೇ ಮಾದರಿಯಲ್ಲಿ ಇಲ್ಲೊಂದಿಷ್ಟು ಪದಗಳಿವೆ… ನಿಮಗೆ ಇಷ್ಟವಾದೀತು….
~~~~~~~~~~~~~~~~~~~~~~~~~~~~~~~~
ಮೃತ: ಅಮೃತವನ್ನು ಸೇವಿಸದಿದ್ದುದರ ಪರಿಣಾಮ…!
ಸಂಗಾತಿ: ಸಂಗ ಅತಿಯಾದರೆ ಮಾಡಿಕೊಳ್ಳಲೆಬೇಕಾದ ಒಂದು ಸಂಬಂಧ!
ಪಾರ್ಥೇನಿಯಂ: ಪರಾಕ್ರಮಿ ಪಾರ್ಥನೇ ಸೋಲಿಸಲಾಗದ ಒಂದು ಸಸ್ಯ..!
ಮಾರ್ಕ್ಸ್ ವಾದಿ: ಮಾರ್ಕ್ಸ್(ಅಂಕ) ಕೊಟ್ಟಿದ್ದು ಸಾಕಾಗಲಿಲ್ಲ, ಇನ್ನೂ ಬೇಕೆಂದು ಲೆಕ್ಚರ್ ಜೊತೆ ವಾದಿಸುವ ವಿದ್ಯಾರ್ಥಿ…!
ಲಕ್ಸ್: ಒಂದಕ್ಕಿಂತ ಹೆಚ್ಚು ಬಾರಿ ಬಂದ ಅದೃಷ್ಟ..!

ಮಧುರ ಮಧುರವೀ ಮಳೆಗಾಲ…(ಒಂದಿಷ್ಟು ಮಳೆಗವಿತೆಗಳು)
ನಾಸಿಕ ಧಾರೆ
ಮನದೊಳಗೆ ತುಂಬಿದ್ದ
ಕೊಳೆಯೆಲ್ಲ
ತೊಳೆತೊಳೆದು
ಕೆಳಗಿಳಿಯುತಿದೆ
ಮಳೆಗಾಲದಿ
ಮೂಗಿನಿಂದ…!
~~~~~~~~~~~~~~

ಕಾರಣ
ಸೂರ್ಯ ನನ್ನನ್ನು
ಸುಡುತ್ತಾನೆ೦ದು
ಕಾರ್ಮೋಡ ಅತ್ತು-ಅತ್ತು
ಮಂಜೆಲ್ಲ ಕರಗಿ
ಮಳೆಹನಿಯಾಗಿ
ಭೂಮಿಗೆ ಬಿತ್ತು..
~~~~~~~~~~~~~~~~~~
ನಿರ್ಧಾರ
ಬೇಸಿಗೆಯ
ಬರಗಾಲದಿ
ಜನ ನೀರಿಗಾಗಿ
ಪರದಾಡುತ್ತಿರುವಾಗ
ಬೇಸತ್ತು
ಮೇಲಿಂದ ಹಾರಿ
ಸಾಯೋಣವೆಂದು
ನಿರ್ಧರಿಸಿದವು
ಆಗಸದ ಕಾರ್ಮೋಡಗಳು..
~~~~~~~~~~~~~~~~
ತುಂತುರು
ಮೋಡದ
ಗೂಡೊಳಗೆ
ಕುಳಿತ ಪುಟ್ಟ
ನೀರು ಹಕ್ಕಿಯ
ಮರಿಗಳು
ಭಾರ ತಾಳದೆ
ಹಾರಲಾಗದೆ
ಭುವಿಗುರುಳಿದವು
~~~~~~~~~~~~~~~~~
ಮಳೆ ಬಂದಾಗ
ಭಾವದ ಬಿಂದಿಗೆ
ತುಂಬಿ ಹೋಯಿತು
ನೆನಪಿನ ಬುತ್ತಿ
ಬಿಚ್ಚಿಕೊಂಡಿತು
~~~~~~~~~~~~~~~~~
ಮಳೆ
ಭುವಿಯಿಂದ ಆವಿಯಾಗಿ
ಗಗನವನ್ನು ವರಿಸಲು
ಹೋಗಿದ್ದ ನೀರು
ನಿರಾಸೆಯಾಗಿ
ತಿರುಗಿ
ತವರಿಗೆ ಬಂತು

ಪರಿಪೂರ್ಣ ಬದುಕುದೊಡ್ಡದಾಗಿ ಅಡ್ಡಡ್ಡ ಬೆಳೆವ
ಬೃಹತ್ ನೀಲಗಿರಿಯ ಮರದಂತೆ
ನೂರಾರು ವರ್ಷ ನಿಂತು
ಬೋಳಾಗಿ ಬಿದ್ದು ಹೋಗುವುದು ಬದುಕಲ್ಲ…
ವಸಂತ ಕಾಲದ
ಒಂದೇ ದಿನ ಆಯಸ್ಸಿನ
ನೈದಿಲೆಯ ಹೂವಂತೆ
ಅದೇ ರಾತ್ರಿ ಉದುರಿ ಸತ್ತರೂ
ಮನದಲ್ಲಚ್ಚಳಿಯದ ಭಾವ..
ಚಿಕ್ಕದಾದರೂ ಅಪೂರ್ವ ಸೌಂದರ್ಯ
ಪರಿಪೂರ್ಣ ಬದುಕೆಂದರೆ ಹೀಗಿರಬೇಕು
ಚಿಕ್ಕದ್ದಾಗಿ ಚೊಕ್ಕವಾಗಿ…

ಇಂಗ್ಲೀಷ್ ಮೂಲ: ಬೆನ್ ಜಾನ್ಸನ್