ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಶುಕ್ರವಾರ, ಏಪ್ರಿಲ್ 10, 2009

ನಮ್ಮನೆಯ ಮುಂದೆ ತೇಜಸ್ವಿ...!



ಅವತ್ತು ಏಪ್ರಿಲ್ 5, 2007
ನಮಗಾಗ ಎರೆಡನೇ ಪಿ.ಯು.ಸಿ ಪರೀಕ್ಷೆಗಳು ನಡೆಯುತ್ತಿದ್ದವು. ಎರೆಡು ದಿನ ರಜೆ ಇದ್ದಿದ್ದರಿಂದ ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ನಡೆಯಿತ್ತಿದ್ದ 'ವಿಶ್ವ ಗೋ ಸಮ್ಮೇಳನಕ್ಕೆ ಮನೆಯವರೆಲ್ಲಾ ಹೊರಟೆವು.ಅಲ್ಲಿ ಮದ್ಯಾಹ್ನ ಊಟ ಮಾಡಿದ ನಂತರ ಅಲ್ಲೇ ಇದ್ೞ ಅಂಗಡಿ ಮಳಿಗೆಗಳತ್ತ ಹೊರಟೆವು. ನಾನು ಎಂದಿನಂತೆ ಹೋಗಿ ಒಂದು ಪುಸ್ತಕ ಮಳಿಗೆಯ ಮುಂದೆ ನಿಂತು ನೋಡುತ್ತಿದ್ದೆ.ಕನ್ನಡದ ಹಲವು ಹಿರಿಯರ ಚಂದ-ಚಂದದ ಪುಸ್ತಕಗಳು ಅಲ್ಲಿದ್ದವು.ಕುವೆಂಪು, ಕಾರಂತ,ತೇಜಸ್ವಿ,ಬೇಂದ್ರೆ, ಬೀಚಿ.....ಒಂದೇ ಎರೆಡೇ...?
ನನಗೆ ಕೊಳ್ಳುವ ಆಸೆಯಾಯಿತು. ತೇಜಸ್ವಿಯವರ ಒಂಡೆರೆಡು ಪುಸ್ತಕ ಕೊಳ್ಳೋಣಾ? ಅಂತ ಅಕ್ಕನ್ನ ಕೇಳಿದೆ... "ನಿನಗಂತೂ ಯಾವಾಗಲೂ ಪುಸ್ತಕದ ಹುಚ್ಚು ಅಂತ ಪ್ರೀತಿಯಂದ ಬೈಯುತ್ತಾ ಹೇಗೂ ಇವೆಲ್ಲಾ ನಮ್ಮ ಕೊಪ್ಪದಲ್ಲೇ ಸಿಗುತ್ತೆ ,ಈಗ ಬೇರೆ ಏನಾದರೂ ತಗೋ ಎಂದಳು. ಅರೆಮನಸ್ಸಿನಿಂದಲೇ ಒಪ್ಪಿಗೆ ಇತ್ತೆ.
ಮನೆಗೆ ವಾಪಸ್ ಬರುವಾಗ ಸುಮಾರು ಎಂಟು-ಎಂಟೂವರೆ ರಾತ್ರಿಯಾಗಿತ್ತು. ಸ್ವಲ್ಪ ಸುಧಾರಿಸಿಕೊಂಡಿ ಟಿ.ವಿ. ಹಾಕಿದಾಗ ನಿಜಕ್ಕೂ ಶಾಕ್...! ವಾರ್ತೆಯಲ್ಲಿ ತೇಜಸ್ವಿ ನಿಧನದಸುದ್ದಿ ಬರುತ್ತಿತ್ತು.ಒಂದು ಕ್ಷಣ ನಂಬಲಾಗಲಿಲ್ಲ...ಮದ್ಯಾಹ್ನವಷ್ಟೇ ಅವರ ಪುಸ್ತಕವನ್ನ ಕೊಳ್ಳಬೇಕೆಂದಿದ್ದೆ. ಸುಮಾರಿಗೆ ಅದೇ ಸಮಯದಲ್ಲಿ ಅವರು ನಮ್ಮನು ಅಗಲಿ 'ಮಾಯಾಲೋಕ"ಕ್ಕೆ ತೆರಳಿದ್ದರು...
ಅವತ್ತು ರಾತ್ರಿಯಲ್ಲಾ ಯಾಕೋ ಒಂಥರಾ ಅನುಭವ ಸರಿಯಾಗಿ ನಿದ್ದೆ ಬರಲಿಲ್ಲ...ಏನನ್ನೋ ಕಳೆದುಕೊಂಡ ಅನುಭವ...
ಆಗ ನಾನಿನ್ನೂ ಸಾಹಿತ್ಯ ಸಮುದ್ರಕ್ಕೆ ಸಂಪೂರ್ಣವಾಗಿ ಧುಮುಕಿರಲಿಲ್ಲ. ಸ್ಥಳೀಯ ಪತ್ರಿಕೆಗಳಲ್ಲಿ ನನ್ನ ಒಂದಿಷ್ಟು ಕವನ,ಲೇಖನಗಳು ಪ್ರಕಟವಾಗಿದ್ದವಷ್ಟೇ.ನಿಜ ಹೇಳಬೇಕೆಂದರೆ ನಾನಾಗ ತೇಜಸ್ವಿಯವರ ಒಂದು ಕೃತಿಯನ್ನೂ ಪೂರ್ಣವಾಗಿ ಓದಿರಲಿಲ್ಲ..ಕೊಪ್ಪದ ನಮ್ಮನೆಯಿಂದ ಕೆಲವೇ ಕಿ.ಮೀ.ದೂರದಲ್ಲಿ ಅವರ ಮನೆ ಇದ್ದರೂ ನಾನವರನ್ನ ನೇರವಾಗಿ ನೋಡಿರಲಿಲ್ಲ.ಆದರೂ ಕೂಡಾ ತೇಜಸ್ವಿ ಅವರೆಂದರೆ ಒಂಥರಾ ಆಪ್ತ ಭಾವ.
ನಮ್ಮ ಮನೆಯಿದ್ದುದು ಕೊಪ್ಪದ ಮುಖ್ಯ ರಸ್ತೆಯಲ್ಲಿ. ತೀರ್ಥಹಳ್ಳಿಗೆ ಹೊಗಬೇಕೆಂದರೆ ಮನೆಯ ಮುಂದೆಯೇ ಹಾದು ಹೋಗಬೇಕಿತ್ತು.ಅಲ್ಲದೆಯೇ ಮೂಡಿಗೆರೆಯಿಂದ ಬಂದ ರಸ್ತೆಯೂ ಮುಖ್ಯ ರಸ್ತೆಯನ್ನು ಅಲ್ಲೇ ಸೇರಿ ಕೂಡು ದಾರಿಯಾಗಿತ್ತು.ಹಾಗಾಗಿ ತೇಜಸ್ವಿಯವರ ನಿಶ್ಚಲ ದೇಹ ನಮ್ಮನೆಯ ಮುಂದೆಯೇ ಹಾದು ಹೋಗಲಿತ್ತು.
ಬೆಳಿಗ್ಗೆಯಿಂದಲೇ ಮನೆ ಮೂಂದಿನ ರಸ್ತೆಯಲ್ಲಿ ಜನ ಜಮಾಯಿಸತೊಡಗಿದ್ದರು. ಪತ್ರಕರ್ತೆ ಗೌರಿ ಲಂಕೇಶ್,ಸ್ಥಳಿಯ ಜನಪ್ರತಿನಿಧಿಗಳು ಅಲ್ಲಿ ಹಾಜರಿದ್ದರು. ನೆರೆದವರೆಲ್ಲರ ಮುಖದ ಮೇಲೊಮ್ಮೆ ಕಣ್ಣು ಹಾಯಿಸಿದೆ, ದುಗುಡ ತುಂಬಿಕೊಂಡಿತ್ತು. ಅಷ್ಟೊಂದು ಜನರಿದ್ದರೂ ನೀರವ ಮೌನ ನೆಲೆಸಿತ್ತು.
ಸೂರ್ಯ ನೆತ್ತಿಗೇರಿ ಸುಮಾರು ಹೊತ್ತಾದ ಮೇಲೆ ಮೂಡಿಗೆರೆ ರಸ್ತೆಯ ಕಡೆಯಿಂದ ತೇಜಸ್ವಿಯವರನ್ನು ಹೊತ್ತ ಪುಟ್ಟ ಅಂಬುಲೆನ್ಸ್ ಬಂದು ಸರಿಯಾಗಿ ನಮ್ಮ ಮನೆಯ ಮುಂದೆಯೇ ನಿಂತಿತು. ಯಾರನ್ನು ನೋಡಬೇಕೆಂದು ನಾನು ಹಲವು ದಿನಗಳಿಂದ ಹಂಬಲಿಸುತ್ತಿದ್ದೆನೋ ಅವರು ನಮ್ಮನೆಯ ಮುಂದೆಯೇ ಮಲಗಿದ್ದರು...ಶವವಾಗಿ!
ಸುಮ್ಮನೇ ನಿಂತಿದ್ದ ಜನ ಒಮ್ಮೆಲೆ ವ್ಯಾನಿನ ಮೇಲೆ ಮುಗಿಬಿದ್ದು ಹಾರ ತುರಾಯಿ ಅರ್ಪಿಸತೊಡಗಿದರು. ಸದಾ ಸನ್ಮಾನಗಳಿಂದ ದೂರವಿರುತ್ತಿದ್ದ ತೇಜಸ್ವಿಯವರಿಗೆ ಸತ್ತಮೇಲೆ ಮಾಲಾರ್ಪಣೆ! ಜನ ಜಂಗುಳಿಯಲ್ಲಿ ನನಗೆ ಹತ್ತಿರ ಹೋಗಲಾಗಲಿಲ್ಲ. ಹೇಗೋ ಕಷ್ಟಪಟ್ಟು ಕಿಟಕಿಯಿಂದ ಬಗ್ಗಿ ನೋಡಿದೆ.ಗಾಜಿನ ಪೆಟ್ಟಿಗೆಯಲ್ಲಿ ತೇಜಸ್ವಿ ತಣ್ಣಗೆ ಮಲಗಿದ್ದರು. ಕುರುಚಲು ಗಡ್ಡ, ಸಾದಾ ಅಂಗಿ,ಜೀನ್ಸ್ ಪ್ಯಾಂಟಿನ ತೇಜಸ್ವಿ ಇವರೇನಾ ಎಂದೆನ್ನಿಸಿತು.ಕಾಡಲ್ಲಿ ಮನಸೋ ಇಚ್ಛೆ ಅಲೆದಾಡಿ, ಮೀನಿಗೆ ಗಾಳ ಹಾಕಿ , ಫೋಟೊತೆಗೆದ, ಕಾಡಿನ ಹಾಗೂ ಹಳ್ಳಿಯ ಅನುಭವಗಳನ್ನು ರಸವತ್ತಾಗಿ ಬರೆದ, ಮಿಲೆನಿಯಂ ಸಿರೀಸ್ ಅಂತಹ ಪುಸ್ತಕಗಳನ್ನು ಬರೆದು 'ಖ ಡ ಖ್' ಆಗಿ ಬದುಕಿದ ತೇಜಸ್ವಿ ಇವರೇನಾ ಎಂದೆನಿಸಿತು. ಪಕ್ಕದಲ್ಲೇ ಕುಳಿತ್ತಿದ್ದ ಪತ್ನಿ ರಾಜೇಶ್ವರಿಯವರ ಮುಖದಲ್ಲಿ ಅತ್ತು-ಅತ್ತು ಕಣ್ಣೀರು ಬತ್ತಿ ಹೋಗಿತ್ತು... ಸ್ವಲ್ಪ ಹೊತ್ತಾದ ಮೇಲೆ ವ್ಯಾನು ಕುಪ್ಪಳ್ಳಿಯತ್ತ ಹೊರಟಿತು. ಅದನ್ನೇ ದಿಟ್ಟಿಸುತ್ತಾನಿಂತಿದ್ದೆ. ಪಕ್ಕದಲ್ಲೇ ಇದ್ದ ಗೆಳೆಯ ಕಿರಣ ಬಂದು ಮನೆಗೆ ಹೋಗೋಣ ಎಂದಾಗಲೇ ಈ ಲೋಕಕ್ಕೆ ಬಂದಿದ್ದು.ಭಾರವಾದ ಹೃದಯದಿಂದ ನೆರೆದವರೆಲ್ಲಾ ಚದುರತೊಡಗಿದರು.ವಾಪಸ್ ಮನೆಯ ಮೆಟ್ಟಿಲು ಹತ್ತುವಾಗ ಕಣ್ಣಿಂದ ಕಾರಣವಿಲ್ಲದೆಯೇ ನೀರು ಜಾರಿ ನೆಲಕ್ಕೆ ಬಿತ್ತು...
ಹೇಳಿ ತೇಜಸ್ವಿ ... ಮಾಯಾಲೋಕ-2 ಬರೆಯದೇ ಇಷ್ಟು ಬೇಗ ಆ 'ಮಾಯಾಲೋಕಕ್ಕೆ' ಹೊರಟು ಹೋಗುವ ಅಗತ್ಯ ಇತ್ತೇ...?

[ಮೇಲಿನ ತೇಜಸ್ವಿ ವರ್ಣ ಚಿತ್ರ ಬರೆದಿದ್ದು ಕಲಾವಿದ ಗೆಳೆಯ ಪ್ರಭು ಕೆ.ಎನ್.]

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನುಇಲ್ಲಿ ಬರೆಯಿರಿ