ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಮಂಗಳವಾರ, ಮಾರ್ಚ್ 16, 2010

ವಿವಾದ ಮತ್ತು ನನಗನ್ನಿಸಿದ್ದು…




ನಿಜಕ್ಕೂ ನಮ್ಮ ಭವಿಷ್ಯದ ಬಗ್ಗೆ ಯೋಚಿಸಿದಾಗಲೆಲ್ಲ ಒಂಥರಾ ತಳಮಳ ಉಂಟಾಗುತ್ತದೆ…

ಇತ್ತೀಚಿಗೆ ಹಾಸನ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಗಲಭೆ ನಡೆದಿದ್ದು ನಿಮಗೆ ಗೊತ್ತೇ ಇದೆ. ಕನ್ನಡ ಪ್ರಭದಲ್ಲಿ ಪ್ರಕಟವಾದ ‘ಪರ್ದಾ ಹೈ ಪರ್ದಾ’ ಎಂಬ ಲೇಖನ ವಿವಾದಕ್ಕೆ ಕಾರಣ. ಒಂದು ಆರೋಗ್ಯಕರ ಚರ್ಚೆಗೆ ಕಾರಣವಾಗಬೇಕಿದ್ದ ಬರಹ ಗಲಭೆಗೆ ಕಾರಣವಾಗಿ ಅಮಾಯಕರು ಬಲಿಯಾಗುವಂತಾಗಿದ್ದು ವಿಷಾದಕರ ಸಂಗತಿ.

ಇಷ್ಟಕ್ಕೂ ಆ ಬರಹದಲ್ಲಿ ಇದ್ದಿದಾದರೂ ಏನು…? ಬುರ್ಖಾ ಹಾಕುವ ಸಂಪ್ರದಾಯ ಹೇಗೆ ಪ್ರಾರಂಭವಾಗಿ ಈಗ ಯಾವ ಹಂತಕ್ಕೆ ತಲುಪಿದೆ ಎಂದಷ್ಟೇ ಅಲ್ಲಿ ವಿಶ್ಲೇಷಿಸಲಾಗಿದೆ. ಅಷ್ಟಕ್ಕೂ ಇದೇನೂ ಹೊಸ ವಿಚಾರವಲ್ಲ.ಹಲವಾರು ದಶಕಗಳಿಂದಲೂ ಈ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಆದರೆ ಬದುಕುವ ದಾರಿ ತೋರಿಸಲೆಂದಿರುವ ಧರ್ಮ ಸ್ತ್ರೀಯರ ಸ್ವಾತಂತ್ರ್ಯ ಕಿತ್ತುಕೊಳ್ಳುವುದು ಖಂಡಿತಾ ಸರಿಯಲ್ಲ. ಇದನ್ನು ಕಾಲಕ್ರಮೇಣ ಬದಲಾಯಿಸಿಕೊಂಡಿದ್ದರೆ ಎಲ್ಲವೂ ಸರಿಯಿರುತ್ತಿತ್ತು.ಆದರೆ ಹಾಗಾಗಲಿಲ್ಲ.

ತಪ್ಪನ್ನು ಎತ್ತಿ ತೋರಿದ್ದೇ ದೊಡ್ಡ ತಪ್ಪಾಯಿತೇನೋ…? ವಿಚಾರ ಮಾಡಲು ಸಾಮರ್ಥ್ಯವಿರದ ಅನೇಕರು ಗಲಾಟೆ ಮಾಡುವ ಉದ್ದೇಶ ಇಟ್ಟುಕೊಂಡೇ ಮೆರವಣಿಗೆಗಿಳಿದರು. ಅವರಿಗೊಂದು ನೆಪ ಬೇಕಿತ್ತಷ್ಟೇ. ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡಿದ್ದಷ್ಟೇ ಅಲ್ಲದೆ ತಮ್ಮ ಪಾಡಿಗೆ ತಾವಿದ್ದ ಆಟೋ ಡ್ರೈವರುಗಳಂತಹ ಅಮಾಯಕರ ಮೇಲೆ ಹಲ್ಲೆ ನಡೆಸಿದರು. ಇದರಿಂದ ಕೋಪಗೊಂಡ ಹಿಂದುಗಳೂ ಪ್ರತಿಧಾಳಿ ನಡೆಸಿದರು. ಅಲ್ಲೂ ತುತ್ತಾಗಿದ್ದು ಅಮಾಯಕರೆ… ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಎರೆಡೂ ಧರ್ಮಗಳ ಪ್ರಜ್ಞಾವಂತರ್ಯಾರೂ ಗಲಭೆಗೆ ಇಳಿಯಲಿಲ್ಲ. ಧರ್ಮದ ಹೆಸರಿನಲ್ಲಿ ಕೆಲ ಕಿಡಿಗೇಡಿಗಳು ಮಾಡಿದ ಕೃತ್ಯ ಎಲ್ಲರಿಗೂ ಕೆಟ್ಟ ಹೆಸರು ತಂದಿತಷ್ಟೆ.

ಇದಕ್ಕೆಲ್ಲಾ ಮೂಲ ಕಾರಣ ನಮ್ಮವರ ವಿಚಾರ ಶಕ್ತಿಯ ಕೊರತೆ. ಯಾರೋ ಎಂದೋ ಹೇಳಿದ್ದನ್ನ, ಮಾಡಿದ್ದನ್ನ, ಬರೆದಿದ್ದನ್ನ ಇಂದಿಗೂ ನಾವು ಯಥಾವತ್ತಾಗಿ ಅನುಕರಿಸುವ ಭರದಲ್ಲಿ ವೈಚಾರಿಕತೆಯನ್ನೇ ಕಳೆದುಕೊಂಡಿದ್ದೇವೆ. ಬದುಕಿನ ಸುಭದ್ರತೆಗಾಗಿ ಹುಟ್ಟಿಕೊಂಡ ದೇವರ ಕಲ್ಪನೆ, ಧರ್ಮದ ಆಚರಣೆಗಳು ಕಂದಾಚಾರಗಳಾಗಿ ಬದಲಾಗಿ ಅರ್ಥಹೀನ ಎನಿಸಿಕೊಳ್ಳುತ್ತಿರುವುದು ದುರಾದೃಷ್ಟಕರ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಮನುಕುಲದ ನಾಶಕ್ಕಿದು ಮುನ್ನುಡಿಯಾದೀತು.

ಇನ್ನೊಬ್ಬನಿಗೆ ಕೆಟ್ಟದು ಮಾಡಬಾರದು,ಮತ್ತೊಬ್ಬರ ಬದುಕಿಗೆ ಹಾನಿ ಮಾಡಬಾರದು,ಸಮಾಜಕ್ಕೆ ಹಿತವಾಗುವಂತಹ ಕೆಲಸಗಳನ್ನು ಮಾಡಬೇಕು, ದುಷ್ಟ ಕಾರ್ಯಗಳನ್ನು ದೂರವಿಡಬೇಕು ಅಂತೆಲ್ಲ ಹೇಳಿಕೊಡೋಕೆ ನಮಗೆ ಬೈಬಲ್, ಕುರಾನ್,ಭಗವದ್ಗೀತೆಗಳೇ ಬೇಕಾ…? ನಮ್ಮ ಯೋಚನಾ ಶಕ್ತಿಗೆ ತುಕ್ಕು ಹಿಡಿಸದೆ ಮಾನವೀಯತೆಯಿಂದ ಯೋಚಿಸಿದರೆ ಇವೆಲ್ಲಾ ತಿಳಿದೀತು.ಸ್ವತಂತ್ರ್ಯವಾಗಿ ಯೋಚಿಸೋಕೂ ನಾವು ಅಸಮರ್ಥರೇ …? ಇಷ್ಟಕ್ಕೂ ಪವಿತ್ರ ಗ್ರಂಥಗಳಲ್ಲಿ ಹೇಳಿದ ಒಳ್ಳೆಯ ಅಂಶಗಳನ್ನೆಲ್ಲಾ ನಾವು ಆಚರಣೆಗೆ ತಂದಿದ್ದೆವೆಯೇ…?

ಈ ಎಲ್ಲ ದೇವರು-ಧರ್ಮದ ಮೌಡ್ಯಗಳನ್ನು ತೊರೆದು ,ವೈಚಾರಿಕತೆ ಎಲ್ಲರಲ್ಲೂ ಉದಿಸಿ ನಾವೆಲ್ಲಾ ಒಂದೇ ಎಂಬ ಭಾವನೆಯಿಂದ ‘ವಿಶ್ವಮಾನವ’ರಾಗಿ ಶಾಂತಿ-ಸಹನೆಯ ಬಾಳ್ವೆ ನಡೆಸುವುದು ಯಾವಾಗ…?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನುಇಲ್ಲಿ ಬರೆಯಿರಿ