ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಮಂಗಳವಾರ, ಡಿಸೆಂಬರ್ 21, 2010

ಪಾನಿಪುರಿ ತಟ್ಟೆಯಡಿ ನನ್ನ ಮರ್ಯಾದೆ…!ಸುಮಾರು ಐದು ವರ್ಷಗಳ ಹಿಂದಿನ ಮಾತು.'ಸುಧಾ'ದಲ್ಲಿ ಪ್ರಕಟವಾಗಿದ್ದ ಲೇಖನವೊಂದರ ಬಗ್ಗೆ ನನ್ನ ಅಭಿಪ್ರಾಯವನ್ನು ಪುಟ್ಟದೊಂದು ಪೋಸ್ಟ್ ಕಾರ್ಡಿನಲ್ಲಿ ಬರೆದು ಕಳಿಸಿದ್ದೆ. 'ಸಮುದ್ರ ಮಥನ'ವಿಭಾಗದಲ್ಲಿ ಅದು ಪ್ರಕಟವಾಗಿತ್ತು. ಕೇವಲ ಏಳೆಂಟು ವಾಕ್ಯಗಳು ಪ್ರಕಟವಾಗಿದ್ದರು ನನಗಂತೂ ಹಿರಿ ಹಿರಿ ಹಿಗ್ಗು. ಮೊದಲ ಬಾರಿಗೆ ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ನನ್ನ ಬರಹ ಪ್ರಕಟವಾಗಿತ್ತು.'ಸುಧಾ'ದ ಆ ಸಂಚಿಕೆ ಅಂಗಡಿಗಳ ಮುಂಬಾಗದಲ್ಲಿ ನೇತಾಡುತ್ತಿದ್ದುದನ್ನು ಕಂಡು ಒಂಥರಾ ಖುಷಿಯಾಗುತ್ತಿತ್ತು. ನನ್ನ ಹೆಸರಿರುವ ಪತ್ರಿಕೆ ಹೀಗೆ ರಾಜ್ಯದ ಮೂಲೆ-ಮೂಲೆಯ ಎಲ್ಲ ಅಂಗಡಿಗಳಲ್ಲಿ ಇರುವುದನ್ನು ಕಲ್ಪಿಸಿಕೊಂಡೇ ರೋಮಂಚನಗೊಳ್ಳುತ್ತಿದ್ದೆ. ನಾನು ಕೊಂಡು ತಂದ ಒಂದು ಪ್ರತಿಯಲ್ಲಿನ ಆ ಪುಟವನ್ನೇ ನೋಡುತ್ತಾ, ಲೆಕ್ಕವಿಲ್ಲದಷ್ಟು ಬಾರಿ ಓದುತ್ತಾ ಏನೇನೋ ಕನಸು ಕಾಣುತ್ತಿದ್ದೆ. ಪತ್ರಿಕೆಯ ಪುಟಗಳು ಎಲ್ಲಿ ಮುದುರಿ ಹರಿದು ಹೋದಿತೋ ಎಂಬ ಭಯದಿಂದ ಯಾರ ಕೈಗೂ ಕೊಡುತ್ತಿರಲಿಲ್ಲ…!
ಒಮ್ಮೆ ಹೀಗೇ ಅದನ್ನು ಮತ್ತೊಮ್ಮೆ ಓದಿ, ಮೃದುವಾಗಿ ಸವರಿ ಕಾಲೇಜಿಗೆ ಹೋಗುವ ಗಡಿಬಿಡಿಯಲ್ಲಿ ಟೇಬಲ್ ಮೇಲೆ ಇಟ್ಟು ಹೋಗಿದ್ದೆ. ಸಂಜೆ ಬಂದು ನೋಡುವಾಗ ಶಾಕ್! ನನ್ನ ಅಕ್ಕನ ಎರೆಡು ವರ್ಷದ ಪುಟ್ಟ ಮಗ ಸುಧಾದ ಪುಟಪುಟಗಳನ್ನು ಪ್ರತ್ಯೆಕವಾಗಿಸಿ ಮೂಲೆ-ಮೂಲೆಗೂ ಎಸೆದಿದ್ದ. ನನ್ನ ಬರಹವಿದ್ದ ಪುಟವಂತು ಚಿಂದಿ-ಚಿತ್ರಾನ್ನ!!

''ಯಾರೋ ಹೀಗ್ ಮಾಡಿದ್ದೂ…?'' ಅಂತ ಕೋಪದಿಂದ ಅವನನ್ನು ಗದರಿದೆ. ಅವನೋ ಬಹಳ ಹೆಮ್ಮೆಯಿಂದ ತಾನೇ ಎಂಬಂತೆ ಕಿಲಕಿಲ ನಕ್ಕ! ಅವನ ನಗುವಿನ ಮುಂದೆ ನನ್ನ ಸಿಟ್ಟು ಕರಗಿ ಹೋಯಿತು. ನನ್ನ ಬರಹದ ವಿಚಾರವನ್ನೇ ಮರೆತು ಅವನನ್ನು ಮುದ್ದಿಸತೊಡಗಿದೆ…
*********************

ಗೆಳೆಯರೆಲ್ಲ ಸೇರಿ ದಿನಾ ಸಂಜೆ ರಸ್ತೆ ಬದಿ ಪಾನಿಪುರಿ ತಿನ್ನುವುದು ನಮ್ಮ ರೂಡಿ. ಒಂದು ದಿನ ಹೀಗೇ ಹರಟುತ್ತಾ ತಿನ್ನುತ್ತಿದ್ದೆವು. ಸಾಮಾನ್ಯವಾಗಿ ಯಾವುದೇ ಹಳೆಯ ಪೇಪರಿನ ತುಂಡು ಸಿಕ್ಕರೂ ಅದನ್ನೂ ಬಿಡದೇ ಓದುವುದು ನನ್ನ ದುರಭ್ಯಾಸಗಳಲ್ಲೊಂದು. ಹೀಗೇ ಅವತ್ತು ಕೂಡಾ ಪಾನಿಪುರಿ ತಿಂದಾದಮೇಲೆ ಕೈ ಒರೆಸಲೆಂದು ಕೊಟ್ಟ ಪೇಪರಿನ ತುಂಡಿನ ಮೇಲೆ ಕಣ್ಣಾಡಿಸಿದೆ. ಸ್ಥಳೀಯ ಪತ್ರಿಕೆಯೊಂದರಲ್ಲಿ ನಾನೇ ಬರೆದ ಲೇಖನದ ಅರ್ಧ ಭಾಗ ಅಲ್ಲಿತ್ತು! ಛೆ! ನನ್ನ ವೈಚಾರಿಕ ಬರಹ ಕೈ ಒರೆಸಲು ಬಳಸಲ್ಪಡುತ್ತಿರುವುದೇ?? ಅಳು ಬರುವುದೊಂದೇ ಬಾಕಿ. ಸಣ್ಣ ಪುಟ್ಟ ಲೇಖನ-ಕವನ ಬರೆದು ದೊಡ್ಡ ಲೇಖಕನಂತೆ ಗೆಳೆಯರ ಮುಂದೆ ಫೋಸು ಕೊಡುತ್ತಿದ್ದವನಿಗೆ ಆದ ಅವಮಾನ ಅಷ್ಟಿಷ್ಟಲ್ಲ… ಸ್ನೇಹಿತರೆಲ್ಲರೂ ಸಮಾಧಾನ ಹೇಳಿದರೂ ರಾತ್ರಿಯೆಲ್ಲ ಮನದಲ್ಲಿ ಅದೇ ಯೋಚನೆ.. ಹಾಗಿದ್ದರೆ ನಾನು ಬರೆವುದೇತಕ್ಕೆ? ಛೇ! ಇನ್ನು ಯಾವತ್ತೂ ಬರೆಯಬಾರದೆಂಬ ಕಠಿಣ ನಿರ್ಧಾರ ಮಾಡಿ ಮಲಗಿದೆ…
ಆದರೆ ನನ್ನ ಅಕ್ಷರ ಸನ್ಯಾಸ ಎರೆಡೆ ವಾರಕ್ಕೆ ಕೊನೆಗೊಂಡಿದ್ದು ಮಾತ್ರ ವಿಪರ್ಯಾಸ…!!

1 ಕಾಮೆಂಟ್‌:

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನುಇಲ್ಲಿ ಬರೆಯಿರಿ