ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಗುರುವಾರ, ಜನವರಿ 21, 2021

ಬೀಡಿ ಬಾಬಾ!

ಮಧ್ಯ ಪ್ರದೇಶದ ಸಾತ್ಪುರಾ ಬೆಟ್ಟಗಳ ನಡುವಿನ ಸಣ್ಣದೊಂದು ರಸ್ತೆಯಲ್ಲಿ ಗೂಬೆಯನ್ನು ಹುಡುಕುತ್ತಾ ಜೀಪನ್ನೋಡಿಸುತ್ತಿದ್ದೆ. "..ಸಾಬ್.. ಸಾಬ್... ಏಕ್ ಮಿನಟ್ ರುಖಿಯೇ!" ಎಂದು ಹಿಂದಿನ ಸೀಟಿನಲ್ಲಿದ್ದ ಬಾಬೂಲಾಲ ಕೂಗಿದ. ಅವನಿಗೆಲ್ಲೋ ಹಕ್ಕಿ ಕಂಡಿರಬಹುದೇನೋ ಎಂದುಕೊಂಡು ಗಾಡಿ ನಿಲ್ಲಿಸಿ ಕ್ಯಾಮರಾ ತೆಗೆದುಕೊಂಡು ಹಗೂರಕ್ಕೆ ಹೆಜ್ಜೆಯಿಟ್ಟು ಕೆಳಗಿಳಿದು ಹಕ್ಕಿ ಹುಡುಕತೊಡಗಿದೆ.ಇವನೋ ಆರಾಮಕ್ಕೆ ಇಳಿದು ಬೀಡಿ ಹಚ್ಚಿ ಗಗನಮುಖಿಯಾಗಿ ಹೊಗೆಬಿಡತೊಡಗಿದ. 

ಬಿರುಬೇಸಗೆಯ ದಿನಗಳಲ್ಲಿ ಕಾಡಿನ ಮಧ್ಯೆ ಕೆಲಸ ಮಾಡುವಾಗ ಬೀಡಿ ಸೇದುವಂತಿಲ್ಲ ಎಂದು ಇವನಿಗೆ ಎಷ್ಟು ಬಾರಿ ಹೇಳಿದ್ದೇನೆ! ನನ್ನ ಕೋಪ ನೆತ್ತಿಗೇರಿತು. ನಾನು ಬೈಯ್ಯುವ ಮೊದಲೇ ಬಾಯ್ಬಿಟ್ಟ... "ಸಾಬ್, ಮುಝೆ ಬೀಡಿ ಪೀನಾ ನಹೀ ಥಾ... ಮಗರ್ ಬಾಬಾ ಕೆಲಿಯೆ ಪೀರಹಾ ಹೂ..." ಎಂದು ರಸ್ತೆಬದಿಯ ಈ 'ಬೀಡಿ ಬಾಬಾನ ಮಂದಿರ'ವನ್ನು ತೋರಿಸಿದ. 




ವರ್ಷಗಳ ಹಿಂದೆ ಇದೇ ಜಾಗದಲ್ಲಿ ಬೈಕ್ ಸವಾರನೊಬ್ಬ ಕಲ್ಲು ತಾಗಿ ಆಯತಪ್ಪಿ ಕೆಳಗೆ ಬಿದ್ದು ಸತ್ತಿದ್ದನಂತೆ. ಪ್ರಾಣ ಹೋದ ಮೇಲೂ ಅವನ ಬಾಯಲ್ಲಿದ್ದ ಬೀಡಿ ಹಾಗೇ ಉರಿಯುತ್ತಿತ್ತಂತೆ. ಆಮೇಲೆ ದಾರಿಹೋಕರಿಗೆಲ್ಲ ಅವನ ಆತ್ಮ ಕಾಟಕೊಡುತ್ತಿತ್ತಂತೆ. ಹೀಗಾಗಿ ಯಾರೋ ಪುಣ್ಯಾತ್ಮರು ಅವನು ಬೀಳಲು ಕಾರಣವಾದ ಕಲ್ಲು ಹುಡುಕಿ ಹೀಗೆ ಗೂಡು ಕಟ್ಟಿ ದೇವಸ್ಥಾನ ಮಾಡಿದ್ದಾರೆ. ಬೀಡಿ ಬಾಬಾನಿಗೆ ಬೀಡಿಯದ್ದೇ ಆರತಿ. ಉರಿದ ಬೂದಿಯೇ ಪ್ರಸಾದ. ದಾರಿಯಲ್ಲಿ ಹೋಗುವ ಡ್ರೈವರುಗಳೆಲ್ಲ ಅವನಿಗೆ ಬೀಡಿಪೂಜೆ ಮಾಡಿಯೇ ಮುಂದೆ ಹೋಗುತ್ತಾರಂತೆ. ಅಪಘಾತಗಳಿಂದ ಬೀಡಿಬಾಬಾ ರಕ್ಷಿಸುತ್ತಾನೆ ಎಂದು ಕತೆ ಹೇಳಿ ಅರ್ಧಸುಟ್ಟ ಬೀಡಿಯಿಂದ ಆರತಿ ಎತ್ತಿ, ಕಲ್ಲಿನ ಮುಂದಿಟ್ಟು, ಹಳೆಯ ಬೀಡಿಯ ಉರಿದ ಬೂದಿಯನ್ನೇ ಹಣೆಗಿಟ್ಟುಕೊಂಡ. 

ಆಮೇಲಿಂದ ಆ ರಸ್ತೆಯಲ್ಲಿ ಹೋಗುವ ದಿನವೆಲ್ಲ ಬಾಬಾನ ಪೂಜೆಗೆ ಬೀಡಿ ಬೇಕೆಂದು ನನ್ನಿಂದ ಇಪ್ಪತ್ತು ರೂಪಾಯಿ ಪೀಕುತ್ತಿದ್ದ. ಏನೋ ಇವನ ನಂಬಿಕೆ, ಹೋಗಲಿ ಎಂದು ನಾನೂ ಸುಮ್ಮನಿದ್ದೆ. ಕೊಂಡ ಬೀಡಿಗಳಲ್ಲಿ ಬಹುತೇಕ ಇವನೇ ಸೇದಿ ಖಾಲಿ ಮಾಡುತ್ತಿದ್ದ. ಉಳಿದೊಂದು ಬೀಡಿಯನ್ನೂ ಮುಕ್ಕಾಲು ಭಾಗ ಸೇದಿಯಾದ ಮೇಲಷ್ಟೇ ಬಾಬಾನಿಗೆ ಅರ್ಪಿಸುತ್ತಿದ್ದ. ಇದ್ಯಾಕೋ ಅತಿಯಾಯ್ತು ಅನ್ನಿಸಿ ಒಂದು ದಿನ ಬೀಡಿಗಾಗಿ ದುಡ್ಡು ಕೊಡೋಲ್ಲವೆಂದು ಕೈ ಎತ್ತಿದೆ. 

ಮರುದಿನ ಜೇಬಲ್ಲಿ ಬೀಡಿ ಇಲ್ಲದಿದ್ದರೂ ಗಾಡಿ ನಿಲ್ಲಿಸಲು ಹೇಳಿದ. ಹೋಗಿ ಬೀಡಿಬಾಬಾನ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿ ಯಾರೋ ಇಟ್ಟು ಹೋಗಿದ್ದ ಅರ್ಧ ಉರಿದ ಬೀಡಿಯನ್ನು ಎತ್ತಿಕೊಂಡು ಬಂದ. "ಅಲ್ಲಯ್ಯಾ... ಬಾಬಾನ ಬೀಡಿಯನ್ನೇ ಕಳ್ಳತನ ಮಾಡ್ತಿದ್ದೀಯಲ್ಲಾ..." ಎಂದು ಒಂದಿಷ್ಟು ಪಾಪಪ್ರಜ್ಞೆ ಹುಟ್ಟಿಸಿ ಬೀಡಿ ಸೇದುವುದನ್ನು ತಪ್ಪಿಸಲು ಹವಣಿಸಿದೆ.

 "ಏನ್ಸಾರ್ ನೀವೇ ಹಿಂಗೇಳ್ತೀರಾ... ಬೀಡಿಯೂ ಅವನದ್ದೇ, ಬದುಕೂ ಅವನದ್ದೇ. ಅವನೇ ಕೊಡೋನು, ತಗಳ್ಳೋನೂ ಅವನೇ... ನಮ್ಮದೇನಿದೆ ಸಾರ್.." ಎಂದು ನನಗೊಂದಿಷ್ಟು ತತ್ವಜ್ಞಾನ ಬೋಧನೆ ಮಾಡಿ ಮೋಟುಬೀಡಿಗೆ ಬೆಂಕಿ ಹಚ್ಚಿದ.

~ಪ್ರಸನ್ನ ಆಡುವಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನುಇಲ್ಲಿ ಬರೆಯಿರಿ