ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಬುಧವಾರ, ಫೆಬ್ರವರಿ 29, 2012

ಆಮ್ಲಜನಕ ಎಂಬ ’ಅಮೂಲ್ಯ ಅಮೃತ’ ಮತ್ತು ’ವಿಶೇಷ ವಿಷ’

ಆಕ್ಸಿಜನ್ ಅಲಿಯಾಸ್ ಆಮ್ಲಜನಕ ಗೊತ್ತಲ್ಲ? ನಾವಾಡುವ ಪ್ರತೀ ಉಸಿರಿನ ಅಮೂಲ್ಯ ಪ್ರಾಣವಾಯು ಅದು. ಜಗತ್ತಿನ ಬಹುತೇಕ ಜೀವಗಳ ಪಾಲಿನ ಅಮೃತವಿದು. ಕೆಲ ನಿಮಿಷಗಳಷ್ಟರ ಮಟ್ಟಿಗೆ ಆಮ್ಲಜನಕ ಸಿಗಲಿಲ್ಲವೆಂದರೂ ಹೃದಯ ನಿಂತುಹೋಗುತ್ತದೆ.ಆಮ್ಲಜನಕವನ್ನೇ ನಂಬಿಕೊಂಡ ಮಿದುಳೂ ಕೈಕೊಡುತ್ತದೆ.ಇಂತಹ ಅಮೂಲ್ಯ ಗಾಳಿ ಹಿಂದೊಮ್ಮೆ ಜೀವಜಗತ್ತಿಗೆ ವಿಷವಾಗಿ ಪರಿಣಮಿಸಿದ್ದು ನಿಮಗೆ ಗೊತ್ತಾ..?

ಮೂರ್ನಾಲ್ಕು ಬಿಲಿಯನ್ ವರ್ಷಗಳ ಹಿಂದೆ ಈ ಭೂಮಿಯಲ್ಲಿ ಜೀವೋದಯವಾದಾಗ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಿತ್ತು. ಹೀಗಾಗಿ ಬ್ಯಾಕ್ಟಿರಿಯಾಗಳಂತಹ ಮೊದಮೊದಲ ಜೀವಿಗಳು ಆಹಾರದಿಂದ ಶಕ್ತಿಪಡೆಯಲು ಆಮ್ಲಜನಕವನ್ನು ಬಳಸಲೇ ಇಲ್ಲ. ಅಂಥಾ ಜೀವಿಗಳ ಸಂತತಿ ಇಂದಿಗೂ ಇದೆ. ಆದರೆ ಸಯನೋಬ್ಯಾಕ್ಟಿರಿಯಾಗಳೆಂಬ ವಿಶಿಷ್ಟ ’ಜಲಜನಕ ಪ್ರಿಯ’ ಜೀವಿಗಳು ನೀರನ್ನೊಡೆದು ಜಲಜನಕ ಪಡೆದು ಆಮ್ಲಜನಕವನ್ನು ವಾತಾವರಣಕ್ಕೆ ಸೇರಿಸಿಬಿಡುತ್ತಿದ್ದವು.

ಹೀಗೇ ಸುಮಾರು ಎರೆಡು ಬಿಲಿಯನ್ ವರ್ಷಗಳಾಗುವ ಹೊತ್ತಿಗೆ ವಾತಾವರಣದಲ್ಲಿ ಹಿಂದೊಮ್ಮೆ ನಗಣ್ಯ ಎನಿಸಿದ್ದ ಆಮ್ಲಜನಕದ ಪ್ರಮಾಣ ಶೇಕಡಾ ೨೦ರಷ್ಟಾಯಿತು. ನೆನಪಿಡಿ, ಇದೊಂದು ತೀರಾತೀರ ಅಪಾಯಕಾರಿ ಅನಿಲ. ಕಬ್ಬಿಣದಂತಹಾ ಕಬ್ಬಿಣಕ್ಕೇ ತುಕ್ಕು ಹಿಡಿಸಿಬಿಡುತ್ತದೆ. ನಮ್ಮ ದೇಹದ ಮೂಲಾಧಾರಗಳಾದ ರಂಜಕ, ಗಂಧಕಗಳನ್ನೆಲ್ಲಾ ದುರ್ಬಲಗೊಳಿಸುವ ಶಕ್ತಿ ಇದಕ್ಕಿದೆ. ಹೀಗಾಗಿ ಜೀವಜಗತ್ತು ಆಮ್ಲಜನಕದ ವಿರುದ್ದ ಸೆಣೆಸುವುದು ಅನಿವಾರ್ಯವಾಯಿತು. ಕೆಲಜೀವಿಗಳು ಹೊಸ ಹೊಸ ರೂಪ ತಳೆದು ಆಮ್ಲಜನಕವನ್ನು ’ಕೊಲ್ಲುವ’ ಶಸ್ತ್ರಾಸ್ತ್ರ ರೂಪಿಸಿಕೊಂಡವು.ಹಲವು ಸೋಲೊಪ್ಪಿಕೊಂಡು ವಿನಾಶವಾದವು....


ಕುತೂಹಲಕಾರಿ ಸಂಗತಿಯೆಂದರೆ ಹೀಗೆ ಆಮ್ಲಜನಕದ ಪ್ರಮಾಣ ಹೆಚ್ಚಾಗಲು ಕಾರಣವಾದ ಸಯನೋಬ್ಯಾಕ್ಟೀರಿಯಾಗಳು ಅದರಿಂದ ಹೆಚ್ಚಿನ ಶಕ್ತಿ ಪಡೆಯುವ ದಾರಿಯನ್ನೂ ತೋರಿಸಿಕೊಟ್ಟವು. ಇವುಗಳು ಬೇರೆ ಪ್ರಭೇದದ ಜೀವಿಗಳೊಂದಿಗೆ ಕೊಡುಕೊಳ್ಳುವಿಕೆಯನ್ನು ಶುರುವಿಟ್ಟುಕೊಂಡವು. ಕೊನೆಗೆ ಅವುಗಳ ದೇಹದ ಭಾಗಗಳೇ ಆಗಿ ಹೋದವು!

ಹೀಗೆ ದೇಹದ ಒಳಹೊಕ್ಕ ಬ್ಯಾಕ್ಟೀರಿಯಾಗಳೇ ನಮ್ಮ ಜೀವಕೋಶದ ಶಕ್ತಿಕೇಂದ್ರ ’ಮೈಟೋಕಾಂಡ್ರಿಯಾ’ಗಳಾದವೆಂದು ೧೯೭೦ರ ಆರಂಭದಲ್ಲೇ ಲಿನ್ನ್ ಮಾರ್ಗೂಲಿಸ್ ಎಂಬ ವಿಜ್ನಾನಿ ಹೇಳಿದ್ದಳು. ಆದರೆ ಅವಳ ವಿಕಾಸವಾದದ ಹೊಸ ಥಿಯರಿಗೆ ಮನ್ನಣೆ ಸಿಗಲು ವರ್ಷಗಳೇ ಬೇಕಾದವು. ಮೈಟೋಕಾಂಡ್ರಿಯಾಗಳು ತಮ್ಮದೇ ಆದ ಡಿಎನ್ ಎ ಹೊಂದಿ ನಮ್ಮೊಳಗಿದ್ದೂ ನಮ್ಮಂತಾಗದ ಕಥೆ ಇನ್ನೂ ಕುತೂಹಲಕಾರಿ....


ಈ ಜೀವಜಗತ್ತಿನಲ್ಲಿ ಇನ್ನೂ ಏನೇನು ಬೆರಗುಗಳಿವೆಯೋ...?!

1 ಕಾಮೆಂಟ್‌:

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನುಇಲ್ಲಿ ಬರೆಯಿರಿ