ಕಾಡುವ ಭಾವಗಳಿಗೆ ಹಾಡಲೊಂದಿಷ್ಟು ಜಾಗ...

ಬುಧವಾರ, ಏಪ್ರಿಲ್ 17, 2013

ಕರೆಂಟು ಹೊಡೆಸಿಕೊಂಡ ಡಿಎನ್ಯೆಯೂ, ವಿಮಾನ ಹತ್ತಿದ ಕಾರ್ಟೂನೂ..

ಎಂದಿನಂತೆ ಬೆಳ್ಳಂಬೆಳಗ್ಗೆ ಎದ್ದು ನನ್ನ ಲ್ಯಾಬೋರೇಟರಿಗೆ ಬಂದು, ನಿನ್ನೆಯಷ್ಟೇ ಅಗಸೀ ಗಿಡದ ಎಲೆಯನ್ನೆಲ್ಲ ಹಿಂಡಿ ಹಿಪ್ಪೆ ಮಾಡಿ ತೆಗೆದಿದ್ದ ಕಣ್ಣಿಗೂ ಕಾಣದ ಡಿಎನ್ಎಯನ್ನು , ಪುಟ್ಟ ಇಲೆಕ್ಟ್ರಾನಿಕ್ ಟ್ಯಾಂಕಿಯಲ್ಲಿ ಈಗಾಗಲೇ ಮಾಡಿಟ್ಟಿದ್ದ ಯಾವುದೋ ಸಮುದ್ರ ಕಳೆಯಿಂದ ತೆಗೆದ ಜೆಲ್ಲಿಯೊಳಕ್ಕೆ ತೂರಿಸಿ, ಸರಿಯಾಗಿ ಎಂಬತ್ತು ವೋಲ್ಟ್ ಕರೆಂಟು ಕೊಟ್ಟು, ಡಿಎನ್ಯೆಯನ್ನು ಟ್ಯಾಂಕಿಯ ಒಂದು ಧ್ರುವದಿಂದ ಮತ್ತೊಂದಕ್ಕೆ ಓಡಿಸುತ್ತಿದ್ದೆ. ಹೀಗೆ ಕರೆಂಟು ಹೊಡೆಸಿಕೊಂಡ ಡಿಎನ್ಯೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ತನ್ನ ಗಾತ್ರಕ್ಕನುಗುಣವಾಗಿ ಜೆಲ್ಲಿಯೊಳಕ್ಕೆ ಓಡುತ್ತಿತ್ತು. ತೆಳ್ಳಗಿನ ಪುಟ್ಟ ಡಿಎನ್ಯೆ ಜೆಲ್ಲಿಯೊಳಗಣ ತೂತಿನೊಳಗೆ ತೂರಿಕೊಂಡು ಸಲೀಸಾಗಿ ಓಡಬಲ್ಲುದು. ದಪ್ಪದ್ದು-ದೊಡ್ಡದ್ದಕ್ಕೆ ಅಡೆತಡೆಗಳನ್ನೆಲ್ಲ ದಾಟಿ ಓಡುವುದು ಕಷ್ಟ; ಹೀಗಾಗಿ ಅವು ನಿಧಾನಕ್ಕೆ ಸಾಗುತ್ತವೆ (ಮನುಷ್ಯರಲ್ಲೂ ಅಷ್ಟೇ ತಾನೇ!)

ಹೀಗೆ ಅವು ಒಮ್ಮೆ ಓಡತೊಡಗಿದರೆ ತುದಿ ಮುಟ್ಟಲು ಮತ್ತೆರೆಡು ಗಂಟೆ ಕಾಯಬೇಕು. ಹೀಗಾಗಿ ಮಾಡಲು ಬೇರೇನೂ ಕೆಲಸವಿರಲಿಲ. ಬೇರೆ ದಿನವಾಗಿದ್ದರೆ ಈ ಸಮಯದಲ್ಲಿ ಯಾವ್ಯಾವುದೋ ತಲೆತಿನ್ನುವ- ತಲೆಕೆಳಗಾಗಿ ಓದಿದರೂ ಸುಲಭಕ್ಕೆ ಅರ್ಥವಾಗದ ವೈಜ್ನಾನಿಕ ಲೇಖನಗಳನ್ನು ಓದಿ ಅರಿಯಲು ತಿಣುಕುತ್ತಿದ್ದೆ. ಅದೂ ಬೇಸರ ಮೂಡಿಸಿದರೆ ಮೂರ್ತೀರಾಯರ ಪ್ರಬಂಧವನ್ನೋ, ವಸುಧೇಂದ್ರರ ಕಥೆಯನ್ನೋ, ಇಲ್ಲಾ ಕುವೆಂಪುರವರ ಕಾದಂಬರಿಯನ್ನೋ ಹಿಡಿದು ಡಿಎನ್ಯೆ ಜಗತ್ತಿನಿಂದ ದೂರಾಗಿ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದೆ. ಆದರಿವತ್ತು ಹಾಗೆ ಮಾಡುವಂತಿರಲಿಲ್ಲ…
ಬೆಳಿಗ್ಗೆ ನಾನು ‘ಕರಾಗ್ರೇ ವಸತೇ ಲಕ್ಷ್ಮೀ’ ಹೇಳುವ ಮೊದಲೇ ಫೋನ್ ಮಾಡಿದ್ದ ನನ್ನ ಸಂಶೋಧನೆಯ ಗೈಡ್ ಇವತ್ತು ಯಾವುದೋ ಯೂರೋಪಿಯನ್ ಯೂನಿವರ್ಸಿಟಿಯ ಘನಂದಾರಿ ವಿಜ್ನಾನಿಗಳೂ, ಅಧಿಕಾರಿಗಳೂ ಬರುತ್ತಿದ್ದಾರೆಂದೂ, ತನಗೆ ಬೇರೆ ಅಗತ್ಯ ಕೆಲಸಗಳಿರುವುದರಿಂದ ಅವರನ್ನು ಅಟೆಂಡ್ ಮಾಡಲಾಗುವುದಿಲ್ಲವೆಂದೂ ಹೇಳಿ, ನೀನೇ ಹೇಗಾದರೂ ನಿಭಾಯಿಸು ಅನ್ನುತ್ತಾ ಎಂದಿನಂತೆ ಜಾರಿಕೊಂಡರು. ಅವರು ಲ್ಯಾಬಿಗೆ ಬಂದಾಗ ಏನಾದರೂ ಕೆಲಸ ಮಾಡುತ್ತಿರು, ಸುಮ್ಮನೆ ಏನೇನೋ ಓದುತ್ತಾ ಕೂರಬೇಡ ಎಂದರು!

ಹೀಗೆ ಯಾರ್ಯಾರೋ ನನ್ನ ಲ್ಯಾಬಿಗೆ ಭೇಟಿಯಿಡುವುದು ಹೊಸತಲ್ಲದ್ದರಿಂದ ಅದೊಂದು ದೊಡ್ಡ ವಿಷಯವಾಗಿರಲಿಲ್ಲ. ಆದರೆ ನಾನು ಕದ್ದು-ಮುಚ್ಚಿ ‘ಏನೇನೋ ಓದುವ’ ಸಂಗತಿ ನನ್ನ ಗೈಡ್ಗೆ ಗೊತ್ತಾಗಿದ್ದಾದರೂ ಹೇಗೆ? ಇನ್ನೊಮ್ಮೆ ಸಿಕ್ಕಿಹಾಕಿಕೊಂಡರೆ ಅವರಿಂದ ಮಹಾಮಂಗಳಾರತಿ ಗ್ಯಾರಂಟಿ ಎಂದುಕೊಳ್ಳುತ್ತಾ ಹಾಸ್ಟೆಲ್ಲಿನಲ್ಲಿ ತಿಂಡಿಯನ್ನೂ ತಿನ್ನದೇ ಲ್ಯಾಬೋರೇಟರಿಗೆ ಓಡಿಬಂದಿದ್ದೆ. ಅಲ್ಲಿದ್ದ ಕಥೆ-ಕಾದಂಬರಿಗಳನ್ನೆಲ್ಲಾ ಅಡಿಗೆ ತೂರಿಸಿ, ದಪ್ಪ-ದಪ್ಪ ವೈಜ್ನಾನಿಕ ಪುಸ್ತಕಗಳನ್ನೂ, ಸಂಶೋಧನಾ ಪ್ರಬಂಧಗಳನ್ನೂ ಎಲ್ಲರಿಗೆ ಕಾಣುವಂತೆ ಇಟ್ಟು, ನನ್ನ ಲ್ಯಾಪ್ಟಾಪಿನ ವಾಲ್ ಪೇಪರಾಗಿ ಮಿಂಚುತ್ತಿದ್ದ ಸಿನೆಮಾ ತಾರೆಯನ್ನು ವಾಪಸ್ಸು ಕಳುಹಿಸಿ, ಅವಳ ಬದಲಿಗೆ ನಮ್ಮೊಳಗಿನ ಡಿಎನ್ಯೆಯ ಗ್ರಾಫಿಕ್ ಚಿತ್ರವೊಂದನ್ನು ಹಾಕಿಟ್ಟು, ಪಿಪೆಟ್ಟು-ಟೆಸ್ಟ್ ಟ್ಯೂಬು ಹಿಡಿದು ಏನೋ ಭಯಂಕರ ರೀಸರ್ಚು ಮಾಡುವವನಂತೆ ಫೋಸುಕೊಡುತ್ತಾ ಅವರಿಗಾಗಿ ಕಾಯುತ್ತಿದ್ದೆ..

ಸರಿಯಾಗಿ ಒಂಭತ್ತೂವರೆಗೆ ನನ್ನ ಡಿಪಾರ್ಟ್ ಮೆಂಟಿನ ಹೆಡ್ಡು ನಾಲ್ಕೈದು ಬಿಳಿಚರ್ಮದವರನ್ನು ಕರೆದುಕೊಂಡು ಲ್ಯಾಬಿಗೆ ಬಂದರು. ಆರಡಿ ಮೀರಿದ ಧಡೂತಿ ದೇಹದ, ನೀಟಾಗಿ ಶೇವ್ ಮಾಡಿ ಇನ್ ಶರ್ಟ್ ಮಾಡಿದವ ಅಧಿಕಾರಿಯಿರಬೇಕೆಂದೂ, ಅಷ್ಟೇ ಎತ್ತರದ, ಲವಲವಿಕೆಯಿಲ್ಲದ ದೇಹದ, ಗಡ್ಡಬಿಟ್ಟು ದಪ್ಪ ಕನ್ನಡಕ ಹಾಕಿ, ತಲೆಬಾಚಲು ಮರೆತಂತಿದ್ದವ ವಿಜ್ನಾನಿಯಿರಬೇಕೆಂದೂ ಊಹಿಸಿದೆ. ಜೊತೆಗಿಬ್ಬರು ಮೂವತ್ತೈದು ದಾಟದ ಮಹಿಳೆಯರೂ ಇದ್ದರು. ನಾನು ಎಂದಿನಂತೆ ನನ್ನ ಲ್ಯಾಬೋರೇಟರಿ ಇದುವರೆಗೆ ಮಾಡಿರುವ ಸಾಧನೆಯನ್ನೂ, ನಾನೀಗ ಮಾಡುತ್ತಿರುವ ಅಗಸೀ ಗಿಡದ ಬಗೆಗಿನ ಸಂಶೋಧನೆಯನ್ನೂ, ಅದರ ಪ್ರಾಮುಖ್ಯತೆಯನ್ನೂ ಪವರ್ ಪಾಯಿಂಟ್ ಬಳಸಿ ಪುಟ್ಟದೊಂದು ಉಪನ್ಯಾಸ ಕೊಟ್ಟೆ. ಡಿಎನ್ಯೆ ಫಿಂಗರ್ ಪ್ರಿಂಟಿಂಗ್ ಹೇಗೆಲ್ಲಾ ಮಾಡುತ್ತೇವೆಂದೂ, ಕುಲಾಂತರಿಗಳನ್ನು ಹೇಗೆ ಗುರುತಿಸಬಹುದೆಂದೂ ಅಲ್ಲಿದ್ದ ಉಪಕರಣ ತೋರಿಸಿ ವಿವರಿಸಿದೆ. ಎಲ್ಲರೂ ಆಸಕ್ತಿಯಿಂದ ಕೇಳಿ ನೋಟ್ಸ್ ಮಾಡಿಕೊಂಡರು, ಪ್ರಶ್ನೆ ಕೇಳಿದರು. ಗೊತ್ತಿದ್ದಷ್ಟನ್ನು ಉತ್ತರಿಸಿದೆ.

ಆದರೆ ಅವರೊಡನಿದ್ದ ಅಧಿಕಾರಿ ಮಾತ್ರ ಏನೋ ಚಡಪಡಿಕೆಯಲ್ಲಿದ್ದಾನೆಂದು ತೋರುತ್ತಿತ್ತು ಅತ್ತಿತ್ತ ನೋಡುತ್ತ ಕಂಗಾಲಾಗಿದ್ದ. ಮಾತುಕತೆಯೆಲ್ಲ ಮುಗಿದ ಮೇಲೆ ಎಲ್ಲರೂ ನನ್ನ ಲ್ಯಾಬನ್ನ ಗಮನಿಸಿ ಹೊರಡುತ್ತಿದ್ದಂತೆ, ಆ ಅಧಿಕಾರಿ ವಾಪಸ್ಸು ದೌಡಾಯಿಸಿ ಬಂದು ಇಲ್ಲಿ ಟಾಯ್ಲೆಟ್ ಎಲ್ಲಿದೆ..? ಅಂತ ಸಂಕೋಚದಿಂದಲೇ ಕೇಳಿದ. ಅವನ ಅದುವರೆಗಿನ ಚಡಪಡಿಕೆಗೆ ಕಾರಣ ಗೊತ್ತಾಯ್ತು! ಯಾಕೋ ಇಂಡಿಯನ್ ಫುಡ್ಡು ಹಿಡಿಸುತ್ತಿಲ್ಲ ನೋಡು.. ಎನ್ನುತ್ತಾ ನಾನು ಕೈತೋರಿದೆಡೆಗೆ ಬಿರಬಿರ ಹೆಜ್ಜೆಹಾಕತೊಡಗಿದ…

ಸಧ್ಯ! ಎಲ್ಲಾ ಸುಸೂತ್ರವಾಗಿ ಮುಗೀತಲ್ಲಾ ಎಂದುಕೊಳ್ಳುತ್ತಾ ನಾನು ಅಲ್ಲೇ ಬಚ್ಚಿಟ್ಟಿದ್ದ ‘ಅಪಾರ’ನ ‘ಮದ್ಯಸಾರ’ಕ್ಕೆ ಕೈಯಿಟ್ಟೆ! ಉಳಿವರು ಅವನಿಗಾಗಿ ಕಾಯುತ್ತಾ ಹೊರಗಿನ ಸೋಫಾದಲ್ಲಿ ಪವಡಿಸಿದ್ದರು.
ಸ್ವಲ್ಪ ಹೊತ್ತಿನಲ್ಲೇ ಅವರೊಡನಿದ್ದ ಬಿಳೀ ಟೀಶರ್ಟು-ಜೀನ್ಸ್ ಪ್ಯಾಂಟಿನಾಕೆ ಲ್ಯಾಬೊಳಗೆ ಬಂದಳು. ನಾನು ಕೈಲಿದ್ದ ಪುಸ್ತಕವನ್ನು ತದಬಡಿಸಿ ಮುಚ್ಚಿಟ್ಟು ಕಷ್ಟಪಟ್ಟು ಕಿರುನಗೆ ಬೀರಿದೆ. ಆ ಪೋಸ್ಟರ್ಗಳು ನಂಗಿಷ್ಟವಾದವು, ಎಲ್ಲಿಂದ ಕೊಂಡು ತಂದೆ? ಎಂದಳು. ಯಾವ ಪೋಸ್ಟರ್ ಎಂದು ನನಗರ್ಥವಾಗಲಿಲ್ಲ. ಅವಳೇ ತೋರಿಸಿದಳು. ನಾನು ಲ್ಯಾಬಿನ ಅಲ್ಲಲ್ಲಿ ‘ಡು ನಾಟ್ ಟಚ್’, ‘ಬಯೋ ಹಜಾರ್ಡ್’, ‘ಇನ್ಸ್ಟ್ರಕ್ಷನ್ಸ್’ ಅಂತೆಲ್ಲಾ ಬರೆಯಬೇಕಿದ್ದಲ್ಲಿ ಒಂದೊಂದು ಕಾರ್ಟೂನು ಬಿಡಿಸಿ-ಬಣ್ಣ ಹಚ್ಚಿ, ಅದರ ಮೂಲಕ ಹಾಗೆಲ್ಲಾ ಹೇಳಿಸಿ ಅಂಟಿಸಿದ್ದೆ. ಅದನ್ನೇ ಅವಳು ಪೋಸ್ಟರ್ ಅಂದಿದ್ದು..

ಥ್ಯಾಂಕ್ಸ್! ಅದು ಕೊಂಡಿದ್ದಲ್ಲ; ನಾನೇ ಸ್ವತಃ ಬಿಡಿಸಿದ್ದು ಅಂದೆ. ಹೌದಾ..?! ಎನ್ನುತ್ತಾ ಕಣ್ಣನ್ನು ಇಷ್ಟಗಲ ಮಾಡಿಕೊಂಡು ಚಿತ್ರಗಳನ್ನೇ ತದೇಕಚಿತ್ತದಿಂದ ನೋಡುತ್ತಾ ಕ್ಯಾನ್ ಐ ಗೆಟ್ ವನ್, ಐ ರಿಯಲ್ಲೀ ಲೈಕ್ ದೆಮ್… ಎಂದಳು. ಇದನ್ನೇ ತಗೊಳ್ಳಿ ಎನ್ನುತ್ತಾ ಅಲ್ಲಿದ್ದುದನ್ನು ಅವಳ ಕೈಗಿಟ್ಟೆ. ಇದಕ್ಕೆ ಎಷ್ಟು ತಗೋತೀರಾ? ಎಂದುಲಿದು ಪರ್ಸಿಗೆ ಕೈ ಹಾಕಿದಳು! ನಮ್ಮ ದೇಶದ ಕಾರ್ಟೂನಿಷ್ಟರಿಗೆ ಒಂದೋ ಎರೆಡೋ ಯೂರೋ ಸಿಕ್ಕುವುದೇ ಕಷ್ಟ.. ಎಂದು ಹೇಳಬೇಕೆಂದಿದ್ದವನು ನಾಲಿಗೆ ತಡೆದು ಇರಲಿ ಬಿಡಿ, ನಿಮ್ಮ-ನನ್ನ ಭೇಟಿಯ ನೆನಪಿಗೆ ಇದೊಂದು ಕಾಣಿಕೆ ಎಂದಿಟ್ಟುಕೊಳ್ಳಿ.. ಎಂದುಬಿಟ್ಟೆ!! ಹೌದಾ..?! ಅಂತ ಮತ್ತೊಮ್ಮೆ ಕಣ್ಣರಳಿಸಿ, ಕೈನೀಡಿ ನನ್ನ ಕೈಯನ್ನೂ ಅವಳ ಧಡೂತಿ ದೇಹವನ್ನೂ ಒಟ್ಟೊಟ್ಟಿಗೆ ಕುಲುಕುಲು ಕುಲುಕಿ ಥ್ಯಾಂಕ್ಯೂ ವೆರಿಮಚ್ ಎನ್ನುತ್ತಾ ಅವಳ ಪರಿಚಯದ ಕಾರ್ಡನ್ನು ನನ್ನ ಕೈಗಿತ್ತು ಹೊರಹೊರಟಳು.
ಅದೇ ಸಮಯದಲ್ಲಿ ಅತ್ತ ಕಡೆಯಿಂದ ಬಂದ ಅಧಿಕಾರಿಯೂ ಥ್ಯಾಂಕ್ಸ್ ಎ ಲಾಟ್ ಎಂದು ಪೆಚ್ಚು ನಗೆ ಬೀರುತ್ತಾ ಹೇಳಿ ಅವರನ್ನು ಕೂಡಿಕೊಂಡ.

ಈ ಎರೆಡು ‘ಥಾಂಕ್ಯೂ’ಗಳಿಂದಾಗಿ ನನ್ನ ಕಾರ್ಟೂನೊಂದು ಯೂರೋಪಿನ ಹಾದಿ ಹಿಡಿದಿದ್ದನ್ನು ನೆನೆದು ಹಿಗ್ಗುತ್ತಾ, ಕರೆಂಟು ಹೊಡೆಸಿಕೊಂಡ ಡಿಎನ್ಯೆ ಕಥೆ ಏನಾಗಿದೆಯೆಂದು ನೋಡಲು ಅತ್ತ ಹೆಜ್ಜೆ ಹಾಕಿದೆ…

ಈ ಬರಹವನ್ನು ಅವಧಿಯಲ್ಲಿ ಓದಲು ಇಲ್ಲಿ ಕ್ಲಿಕ್ಕಿಸಿ...

2 ಕಾಮೆಂಟ್‌ಗಳು:

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನುಇಲ್ಲಿ ಬರೆಯಿರಿ