ಗುರುವಾರ, ಮಾರ್ಚ್ 1, 2012
ಒಂದು ಬೆಳ್ಳಿ ಕೂದಲು
ಮೊನ್ನೆ ಒಂದು ಭಾನುವಾರದಂದು
ಲೇಟಾಗೆದ್ದು, ಹಲ್ಲುಜ್ಜಿ ಕಾಫಿ ಹೀರಿ
ಹಾಡುಹೇಳುತ್ತಾ ಸ್ನಾನ ಮಾಡಿ
ಕನ್ನಡಿ ಮುಂದೆ ತಲೆ ಒರೆಸಿಕೊಳ್ಳುತ್ತಾ
ನಿಂತವನಿಗೆ ತಲೆಯಲ್ಲೇನೋ
ಫಳ್ ಎಂದು ಹೊಳೆದಂತಾಯ್ತು...
ನನ್ನಂಥ ಟ್ಯೂಬ್ಲೈಟು ಕವಿಗೆ
ಆಗೀಗ ಹಾಗೆ ಝಗ್ಗನೆ ಸ್ಪೂರ್ತಿ
ಉಕ್ಕುವುದು ಹೊಸತಲ್ಲ ಬಿಡಿ...
ಆದರೆ ಈ ಬಾರಿ ಹಾಗಲ್ಲ,
ಹೀಗೆ ಹೊಳೆದಿದ್ದು ತಲೆಯೊಳಗಲ್ಲ,
ಅದೊಂದು ಬೆಳ್ಳಿ ಕೂದಲು!
ಅರೆ! ಅರವತ್ತಾದ ಮೇಲೆ
ಬಣ್ಣ ಬದಲಿಸಬೆಕಾದ್ದು
ಈಗಲೇ ಫಳಫಳಿಸಿದರೆ ಹೇಗೆ?!
ಅದೂ ನನ್ನಂಥ ಮೊನ್ನೆ ಮೊನ್ನೆ
ಟೀನೇಜು ಜಾರಿಸಿದವನಿಗೆ...?
ತಲೆ ಕೆರೆದು ಯೋಚಿಸಿದೆ,
ಒಂದಿಷ್ಟು ಕೂದಲುದುರಿತೇ ವಿನಃ
ಉತ್ತರ ಸಿಗಲಿಲ್ಲ...
ತಲೆಬಿಸಿಯಾಯ್ತು...
ನನಗಿನ್ನೂ ಇಪ್ಪತ್ತೈದಾಗಿಲ್ಲ,
ಮದುವೆ ಆಗಿಲ್ಲ; ಹೋಗಲಿ,
ಹುಡುಗಿಯನ್ನೂ ಹುಡುಕಿಕೊಂಡಿಲ್ಲ!
ಈಗಷ್ಟೇ ಅಆಇಈ ಮುಗಿಸಿ
ಕಾಲೇಜು ಮೆಟ್ಟಿಲೇರಿದವನಿಗೆ
ಕೂದಲು ಬೆಳ್ಳಗಾಗಲು ಕಾರಣವೇ ಇಲ್ಲ...
ಇರಬಹುದೇ ಇದು
ತಲೆತುಂಬಾ ತುಂಬಿಕೊಂಡ
ಟೆನ್ಶನ್ನುಗಳ ಫಲ?
ಮಾಲಿನ್ಯ? ವಿಷವುಳ್ಳ ಆಹಾರ?
ಅಥವಾ ನನ್ನ ಚಂದದ ಕೂದಲ ಮೇಲೆ
ಯಾರದೋ ಹೊಟ್ಟೆಕಿಚ್ಚು?!
ತಲೆ ಕೊಡವಿದೆ;
ಹೋಗಲಿ ಬಿಡಿ, ಯಾಕಿಷ್ಟು ಚಿಂತೆ?
ಇಷ್ಟಕ್ಕೂ ಒಂದೇ ಒಂದು ಕೂದಲು ತಾನೇ..?
ಬಿಳಿಕೂದಲು ಬುದ್ದಿಜೀವಿಗಳ ಲಕ್ಷಣ!
ಆದರೂ...
ಸದ್ಯಕ್ಕೆ ಹೇರ್ಡೈ ಹಚ್ಚೋಣ..!!
ಬುಧವಾರ, ಫೆಬ್ರವರಿ 29, 2012
ಆಮ್ಲಜನಕ ಎಂಬ ’ಅಮೂಲ್ಯ ಅಮೃತ’ ಮತ್ತು ’ವಿಶೇಷ ವಿಷ’
ಮೂರ್ನಾಲ್ಕು ಬಿಲಿಯನ್ ವರ್ಷಗಳ ಹಿಂದೆ ಈ ಭೂಮಿಯಲ್ಲಿ ಜೀವೋದಯವಾದಾಗ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಿತ್ತು. ಹೀಗಾಗಿ ಬ್ಯಾಕ್ಟಿರಿಯಾಗಳಂತಹ ಮೊದಮೊದಲ ಜೀವಿಗಳು ಆಹಾರದಿಂದ ಶಕ್ತಿಪಡೆಯಲು ಆಮ್ಲಜನಕವನ್ನು ಬಳಸಲೇ ಇಲ್ಲ. ಅಂಥಾ ಜೀವಿಗಳ ಸಂತತಿ ಇಂದಿಗೂ ಇದೆ. ಆದರೆ ಸಯನೋಬ್ಯಾಕ್ಟಿರಿಯಾಗಳೆಂಬ ವಿಶಿಷ್ಟ ’ಜಲಜನಕ ಪ್ರಿಯ’ ಜೀವಿಗಳು ನೀರನ್ನೊಡೆದು ಜಲಜನಕ ಪಡೆದು ಆಮ್ಲಜನಕವನ್ನು ವಾತಾವರಣಕ್ಕೆ ಸೇರಿಸಿಬಿಡುತ್ತಿದ್ದವು.
ಹೀಗೇ ಸುಮಾರು ಎರೆಡು ಬಿಲಿಯನ್ ವರ್ಷಗಳಾಗುವ ಹೊತ್ತಿಗೆ ವಾತಾವರಣದಲ್ಲಿ ಹಿಂದೊಮ್ಮೆ ನಗಣ್ಯ ಎನಿಸಿದ್ದ ಆಮ್ಲಜನಕದ ಪ್ರಮಾಣ ಶೇಕಡಾ ೨೦ರಷ್ಟಾಯಿತು. ನೆನಪಿಡಿ, ಇದೊಂದು ತೀರಾತೀರ ಅಪಾಯಕಾರಿ ಅನಿಲ. ಕಬ್ಬಿಣದಂತಹಾ ಕಬ್ಬಿಣಕ್ಕೇ ತುಕ್ಕು ಹಿಡಿಸಿಬಿಡುತ್ತದೆ. ನಮ್ಮ ದೇಹದ ಮೂಲಾಧಾರಗಳಾದ ರಂಜಕ, ಗಂಧಕಗಳನ್ನೆಲ್ಲಾ ದುರ್ಬಲಗೊಳಿಸುವ ಶಕ್ತಿ ಇದಕ್ಕಿದೆ. ಹೀಗಾಗಿ ಜೀವಜಗತ್ತು ಆಮ್ಲಜನಕದ ವಿರುದ್ದ ಸೆಣೆಸುವುದು ಅನಿವಾರ್ಯವಾಯಿತು. ಕೆಲಜೀವಿಗಳು ಹೊಸ ಹೊಸ ರೂಪ ತಳೆದು ಆಮ್ಲಜನಕವನ್ನು ’ಕೊಲ್ಲುವ’ ಶಸ್ತ್ರಾಸ್ತ್ರ ರೂಪಿಸಿಕೊಂಡವು.ಹಲವು ಸೋಲೊಪ್ಪಿಕೊಂಡು ವಿನಾಶವಾದವು....
ಕುತೂಹಲಕಾರಿ ಸಂಗತಿಯೆಂದರೆ ಹೀಗೆ ಆಮ್ಲಜನಕದ ಪ್ರಮಾಣ ಹೆಚ್ಚಾಗಲು ಕಾರಣವಾದ ಸಯನೋಬ್ಯಾಕ್ಟೀರಿಯಾಗಳು ಅದರಿಂದ ಹೆಚ್ಚಿನ ಶಕ್ತಿ ಪಡೆಯುವ ದಾರಿಯನ್ನೂ ತೋರಿಸಿಕೊಟ್ಟವು. ಇವುಗಳು ಬೇರೆ ಪ್ರಭೇದದ ಜೀವಿಗಳೊಂದಿಗೆ ಕೊಡುಕೊಳ್ಳುವಿಕೆಯನ್ನು ಶುರುವಿಟ್ಟುಕೊಂಡವು. ಕೊನೆಗೆ ಅವುಗಳ ದೇಹದ ಭಾಗಗಳೇ ಆಗಿ ಹೋದವು!
ಹೀಗೆ ದೇಹದ ಒಳಹೊಕ್ಕ ಬ್ಯಾಕ್ಟೀರಿಯಾಗಳೇ ನಮ್ಮ ಜೀವಕೋಶದ ಶಕ್ತಿಕೇಂದ್ರ ’ಮೈಟೋಕಾಂಡ್ರಿಯಾ’ಗಳಾದವೆಂದು ೧೯೭೦ರ ಆರಂಭದಲ್ಲೇ ಲಿನ್ನ್ ಮಾರ್ಗೂಲಿಸ್ ಎಂಬ ವಿಜ್ನಾನಿ ಹೇಳಿದ್ದಳು. ಆದರೆ ಅವಳ ವಿಕಾಸವಾದದ ಹೊಸ ಥಿಯರಿಗೆ ಮನ್ನಣೆ ಸಿಗಲು ವರ್ಷಗಳೇ ಬೇಕಾದವು. ಮೈಟೋಕಾಂಡ್ರಿಯಾಗಳು ತಮ್ಮದೇ ಆದ ಡಿಎನ್ ಎ ಹೊಂದಿ ನಮ್ಮೊಳಗಿದ್ದೂ ನಮ್ಮಂತಾಗದ ಕಥೆ ಇನ್ನೂ ಕುತೂಹಲಕಾರಿ....
ಈ ಜೀವಜಗತ್ತಿನಲ್ಲಿ ಇನ್ನೂ ಏನೇನು ಬೆರಗುಗಳಿವೆಯೋ...?!
ಬುಧವಾರ, ನವೆಂಬರ್ 30, 2011
ಅನೈತಿಕತೆ ಮತ್ತು ಉಳಿವಿಗಾಗಿ ಹೋರಾಟ…
ಕಳೆದ ಗುರುವಾರ ತಮ್ಮ ವಿಜ್ನಾನ-ವಿಶೇಷ ಅಂಕಣದಲ್ಲಿ ನಾಗೇಶ ಹೆಗಡೆ ಅವರು ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸುತ್ತಾ

ಇನ್ನು ಗಿಲೀಟು ತೋರಿಸಿ, ಸುವಾಸನೆ ಪಸರಿಸಿ, ಕೀಟಗಳ ದಿಕ್ಕು ತಪ್ಪಿಸಿ ಮೋಸದಿಂದ ಎಲೆಯೊಳಗೆ ಜಾರಿಸಿ ಜೀರ್ಣಮಾಡಿಕೊಳ್ಳುವ ಕೀಟಾಹಾರಿ ಸಸ್ಯಗಳ ಬಗ್ಗೆ ನಿಮಗೆ ಗೊತ್ತಿರಬಹುದು…
ಶುಕ್ರವಾರ, ಆಗಸ್ಟ್ 26, 2011
ಕುವೆಂಪು ಕಾಡಿಂದ ಬೇಂದ್ರೆ ಕೇರಿಗೆ...!
ಅಂದುಕೊಂಡಿದ್ದು ಇನ್ನೇನೋ ಆಗಿಬಿಡುತ್ತದೆ, ಕನಸಿಗೆ ಬ್ರೇಕ್ ಹಾಕಿ ಧುತ್ತೆಂದು ಕಟುವಾಸ್ತವಗಳನ್ನೆಲ್ಲಾ ಎದುರಿಗೆ ತಂದು ನಿಲ್ಲಿಸುತ್ತದೆ, ಒಮ್ಮೊಮ್ಮೆ ಅಚ್ಚರಿಯ ಅಂಚಿಗೆ ದೂಡುತ್ತದೆ, ಅಸಂಗತಗಳನ್ನೆಲ್ಲಾ ಅಡ್ಡ ತಂದು ಆಗಾಗ ಕಾಡುತ್ತದೆ, ಹೀಗೆ ಏನೇನೋ...!
ಅಷ್ಟಕ್ಕೂ ನಾನು ಧಾರವಾಡದಂತಹ ಧಾರವಾಡಕ್ಕೆ ಬಂದು ಬದುಕುತ್ತೆನೆಂದು ಕನಸಲ್ಲೂ ಯೋಚಿಸಿರಲಿಲ್ಲ.ಅಂಥ ಯಾವ ಆಸೆಯು ನನಗಿರಲಿಲ್ಲ. ತೀರಾತೀರ ಮಲೆನಾಡಿನ ಮಧ್ಯದ ಊರಿಂದ ಬಂದ ನನಗೆ ಹಾಗೆ ಯೋಚಿಸುವುದರ ಅಗತ್ಯವೂ ಇರಲಿಲ್ಲ. ಆದರು...
ಏನೇನೋ ಆಗಿ ಕೊನೆಗೂ ಗಟ್ಟಿ ನಿರ್ಧಾರ ಮಾಡಿ, ಬೆಂಗಳೂರನ್ನು ಬದಿಗೊತ್ತಿ, ಧಾರವಾಡಕ್ಕೆ ಬಂದು ಕುಳಿತಿದ್ದೇನೆ.ಅದ್ಯಾವ ಗಳಿಗೆಯಲ್ಲಿ ಧಾರವಾಡ ಬಂದು ನನ್ನೊಳಗೆ ಕುಳಿತಿತೋ ಗೊತ್ತಿಲ್ಲ...
ಇಷ್ಟಕ್ಕೂ ನನಗೂ ಒಂದು ಬದಲಾವಣೆ ಬೇಕಿತ್ತು.ಎಲ್ಲರಿಗೂ ಮಹಾನಗರಿ ಬೆರಗು ಹುಟ್ಟಿಸಿದರೆ ನನಗೆ ಒಂದೇ ವರ್ಷದಲ್ಲಿ ಬೋರು ಹೊಡೆಸತೊಡಗಿತ್ತು.ಮುಖವಾಡ ಹೊತ್ತು ಬದುಕುವುದು ಸಾಕುಸಾಕಾಗಿತ್ತು. ಹೀಗಾಗಿ ಧಾರವಾಡ ಬಳಿಯ ಈ ಹಳ್ಳಿಯ ಕಾಲೇಜಿಗೆ ಬರಬೇಕಾಯ್ತು...
ಅಂದ ಹಾಗೆ ಧಾರವಾಡಕ್ಕೆ ವಿಶ್ರಾಂತಿತಾಣ ಅಂತಲೂ ಅರ್ಥ ಇದೆ ಅನ್ನುತ್ತೆ ವಿಕಿಪೇಡಿಯಾ.ಬಯಲುನಾಡಿಂದ ಮಲೆನಾಡ ಸೆರಗಿಗೆ ಹೆಬ್ಬಾಗಿಲ ಹಾಗಿದೆ ಈ ಊರು! ಜೊತೆಗೆ ಪೇಡದ ಸವಿ ಬೇರೆ..!
"ಬೆಂಗಳೂರಂಥಾ ಬೆಂಗಳೂರು ಬಿಟ್ಟು ಧಾರವಾಡಕ್ಕೆ ಯಾಕೆ ಹೋಗ್ತಿ?" ಅಂತ ಮೂಗು ಮುರಿದು ಪ್ರಶ್ನಿಸಿದವರೇ ಹೆಚ್ಚು.ಆದರೆ ಅವರಿಗೆ ನನ್ನೊಳಗಿನ ತಳಮಳಗಳನ್ನೆಲ್ಲಾ ಹೇಗೆ ಹೇಳಲಿ ಹೇಳಿ? "ಅಲ್ಲಿ ಜನಾ ತುಂಬಾ ಒರಟಂತೆ" ಅಂತ ಹೇಳಿದವರಿಗೇನು ಕಮ್ಮಿಯಿಲ್ಲ. ಆದರೆ 'ಅತ್ತಾರೆ ಅತ್ತುಬಿಡು ಹೊನಲು ಬರಲಿ' ಅಂತ ಭಾವುಕರಾಗಿ ಹಾಡಿದ ಕವಿ ಇಲ್ಲಿಯವರೇ ಅಂತ ಅವರಿಗೆ ಹೇಗೆ ಹೇಳಲಿ?!
ಒಟ್ಟಿನಲ್ಲಿ ಕುವೆಂಪು ಕಾಡಿಂದ ಬೇಂದ್ರೆ ಕೇರಿಗೆ ಬಂದು ಕುಳಿತಿದ್ದೇನೆ! ಬೇಂದ್ರೆಯಷ್ಟೇ ಅಲ್ಲ, ಗೋಕಾಕ್, ಕಾರ್ನಾಡರ ಮೂಲ ಬೇರೂ ಇಲ್ಲೇ ಇದೆ. ಸಾಹಿತಿಗಳಷ್ಟೇ ಅಲ್ಲ.... ಅಂತ ವಿಕಿಪೀಡಿಯಾ ಖ್ಯಾತ ಧಾರವಾಡಿಗರ ಉದ್ದ ಪಟ್ಟಿಯನ್ನೇ ಹಾಕಿದೆ.
ಈ ನಡುವೆ ನನ್ನ ಬ್ಲಾಗು ಬಾಗಿಲು ಹಾಕಿಕೊಂದು ಕೂತುಬಿಟ್ಟಿತ್ತು. ಶುರುಮಾಡಿ ವರ್ಷಗಳೇ ಕಳೆದರೂ ಬೆರಳೆಣಿಕೆಯಷ್ಟೇ ಬರಹಗಳು ಇಲ್ಲಿವೆ. ಅವೋ ಓಬೀರಾಯನ ಕಾಲದ್ದು.ಆಮೇಲೆ ನಾನೂ ಸಾಕಷ್ಟು ಬೆಳೆದಿದ್ದೇನೆ,ಬಲಿತಿದ್ದೇನೆ,ಬರೆದಿದ್ದೇನೆ.ಆದರೂ ಯಾಕೆ ಬ್ಲಾಗ್ ಅಪ್ ಡೇಟ್ ಮಾಡಲಿಲ್ಲ..?
ಬೆಂಗಳೂರು ಸೇರಿದ ಮೇಲೆ ಧಾವಂತ ಬದುಕಿಗೆ ಧಾಂಗುಡಿಯಿಟ್ಟಿತು. ಅದರಲ್ಲೂ ರಾಷ್ಟೀಯ ಜೀವ ವಿಜ್ಣಾನ ಕೇಂದ್ರದಲ್ಲಿ ಸಣ್ಣದೊಂದು ಸಂಶೋಧನೆಗೆ ಶುರುವಿಟ್ಟುಕೊಂಡ ಮೇಲಂತೂ .....ತುರಿಸಲೂ ಪುರುಸೊತ್ತಿರಲಿಲ್ಲ.ಬರೆಯದೇ ಇರಲಾರೆ ಎನಿಸಿ ಆಗೀಗ ಬರೆದಿದ್ದು ಪುಸ್ತಕದಲ್ಲೇ ಉಳಿದುಹೋಯಿತೇ ವಿನಹ ಬ್ಲಾಗಿನವರೆಗೆ ಬರಲಿಲ್ಲ.ಟೈಪುಕುಟ್ಟುವ ವಿಚಾರದಲ್ಲಂತೂ ನಾನು ಶುದ್ದ ಸೋಮಾರಿ!
ಈಗ ಧಾರಾನಗರಿಯ ಬಳಿಯ ಪುಟ್ಟ ಊರಿನ ಹಾಸ್ಟೆಲಿಗೆ ಸೇರಿಕಂಡಿದ್ದೇನೆ.ಇನ್ನಾದರೂ ಕಂಡಿದ್ದು, ಓದಿದ್ದನ್ನು ನಿಮ್ಮೊಡನೆ ಹಂಚಿಕೊಳ್ಳಬೇಕಿದೆ.
ಸದ್ಯಕ್ಕೆ ಒಂದಿಷ್ಟು ಪುಸ್ತಕ ಗುಡ್ಡೆ ಹಾಕಿಕಂಡು ಕೂತಿದ್ದೇನೆ. I Too Had A Dream ಅನ್ನೋದನ್ನ ಈಗಾಗಲೇ ಓದಿ ಮುಗಿಸಿದ್ದೇನೆ.ಕಳೆದ ವರ್ಷ ಗುಜರಾತಿನ ಆನಂದ್ ಗೆ ಹೋದಾಗ ಕೊಂಡ ಹಾಲು ಕ್ರಾಂತಿಯ ಹರಿಕಾರನ ಆತ್ಮಕಥೆಯಿದು. ಕನ್ನಡಕ್ಕೆ ಇದನ್ನು ಯಾರಾದರೂ ಅನುವಾದಿಸಿದ್ದರೋ ಇಲ್ಲವೋ ಗೊತ್ತಿಲ್ಲ. ನಾನಂತೂ ಒಂದಿಷ್ಟನ್ನು ಕನ್ನಡೀಕರಿಸಿ ಇಟ್ಟಿದ್ದೇನೆ. ತುಂಬಾ ಕುತೂಹಲಕಾರಿ ಪುಸ್ತಕ.ಮುಂದೊಂಮ್ಮೆ ವಿವರವಾಗಿ ಬರೆಯುವೆ.
ಇನ್ನುಳಿದವು ನನ್ನ ಓದು ವಿಜ್ನಾನ ಸಂಶೋಧನೆಗೆ ಪರೋಕ್ಷವಾಗಿ ಸಂಭಂಧಿಸಿದವು. Costs and benefits of transgenic crops -ಕುಲಾಂತರಿಗಳ ನಿಜ ಹಣೆಬರಹ ಇದರಲ್ಲಿದೆ.A doble image of double helix ಇಂಥದ್ದೇ ಇನ್ನಂದು ಪುಸ್ತಕ. Agriculture's ethical horizon ಅನ್ನೋ ಕೃಷಿಯ ಇತಿಮಿತಿಗಳ ಬಗೆಗಿನ ಪುಸ್ತಕವೂ ಜೊತೆಗಿದೆ.
ಮತ್ತೊ0ದು Darwinism DEFENDED ಅಂತ. ಡಾರ್ವಿನ್ನನ ವಿಕಾಸವಾದವನ್ನು ಒರೆಗೆ ಹಚ್ಚುವ ಪುಸ್ತಕ.ಇದನ್ನು ಓದಲು ಪ್ರಾರಂಭಿಸುವ ಮೊದಲು ಮತ್ತೊಮ್ಮೆ 'ಕರ್ವಾಲೋ' ಅನ್ನು ಓದಿಕೊಂಡೆ.ಅಥವಾ ಕರ್ವಾಲೋದಿಂದಾಗಿಯೇ ಈ ಪುಸ್ತಕದ ಬಗ್ಗೆ ಕುತೂಹಲ ಹೆಚ್ಚಿದೆ!!
ಈ ಎಲ್ಲದರ ಬಗ್ಗೆ ನಿಮ್ಮೊಡನೆ ಹಂಚಿಕೊಳ್ಳಬೇಕಿದೆ.ಆದರೆ...ಅದು ನನ್ನ ಪುಸ್ತಕ ದಾಟಿ ಬ್ಲಾಗಿನ ಬಾಗಿಲು ಬಡಿದು ಇಲ್ಲಿ ಸೇರಿಕೊಳ್ಳುತ್ತಾ...?
ಗೊತ್ತಿಲ್ಲ!
(ಕೊನೆಗೊಂದು ಮಾತು: ಅಕಾಡೆಮಿಕ್ ವಲಯದ ಹೊರಗಿನವರಿಗೆ ಇಂತಹ ಪುಸ್ತಕಗಳು ಸುಲಭಕ್ಕೆ ಸಿಗಲಿಕ್ಕಿಲ್ಲ.ಓದಲು ಆಸಕ್ತಿಯಿದ್ದರೆ ಹೇಳಿ,ಪ್ರತಿಯೊಂದನ್ನು ಕಳಿಸಿಕೊಡುವೆ..)
ಮಂಗಳವಾರ, ಡಿಸೆಂಬರ್ 21, 2010
ಪಾನಿಪುರಿ ತಟ್ಟೆಯಡಿ ನನ್ನ ಮರ್ಯಾದೆ…!
ಸುಮಾರು ಐದು ವರ್ಷಗಳ ಹಿಂದಿನ ಮಾತು.'ಸುಧಾ'ದಲ್ಲಿ ಪ್ರಕಟವಾಗಿದ್ದ ಲೇಖನವೊಂದರ ಬಗ್ಗೆ ನನ್ನ ಅಭಿಪ್ರಾಯವನ್ನು ಪುಟ್ಟದೊಂದು ಪೋಸ್ಟ್ ಕಾರ್ಡಿನಲ್ಲಿ ಬರೆದು ಕಳಿಸಿದ್ದೆ. 'ಸಮುದ್ರ ಮಥನ'ವಿಭಾಗದಲ್ಲಿ ಅದು ಪ್ರಕಟವಾಗಿತ್ತು. ಕೇವಲ ಏಳೆಂಟು ವಾಕ್ಯಗಳು ಪ್ರಕಟವಾಗಿದ್ದರು ನನಗಂತೂ ಹಿರಿ ಹಿರಿ ಹಿಗ್ಗು. ಮೊದಲ ಬಾರಿಗೆ ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ನನ್ನ ಬರಹ ಪ್ರಕಟವಾಗಿತ್ತು.'ಸುಧಾ'ದ ಆ ಸಂಚಿಕೆ ಅಂಗಡಿಗಳ ಮುಂಬಾಗದಲ್ಲಿ ನೇತಾಡುತ್ತಿದ್ದುದನ್ನು ಕಂಡು ಒಂಥರಾ ಖುಷಿಯಾಗುತ್ತಿತ್ತು. ನನ್ನ ಹೆಸರಿರುವ ಪತ್ರಿಕೆ ಹೀಗೆ ರಾಜ್ಯದ ಮೂಲೆ-ಮೂಲೆಯ ಎಲ್ಲ ಅಂಗಡಿಗಳಲ್ಲಿ ಇರುವುದನ್ನು ಕಲ್ಪಿಸಿಕೊಂಡೇ ರೋಮಂಚನಗೊಳ್ಳುತ್ತಿದ್ದೆ. ನಾನು ಕೊಂಡು ತಂದ ಒಂದು ಪ್ರತಿಯಲ್ಲಿನ ಆ ಪುಟವನ್ನೇ ನೋಡುತ್ತಾ, ಲೆಕ್ಕವಿಲ್ಲದಷ್ಟು ಬಾರಿ ಓದುತ್ತಾ ಏನೇನೋ ಕನಸು ಕಾಣುತ್ತಿದ್ದೆ. ಪತ್ರಿಕೆಯ ಪುಟಗಳು ಎಲ್ಲಿ ಮುದುರಿ ಹರಿದು ಹೋದಿತೋ ಎಂಬ ಭಯದಿಂದ ಯಾರ ಕೈಗೂ ಕೊಡುತ್ತಿರಲಿಲ್ಲ…!
ಒಮ್ಮೆ ಹೀಗೇ ಅದನ್ನು ಮತ್ತೊಮ್ಮೆ ಓದಿ, ಮೃದುವಾಗಿ ಸವರಿ ಕಾಲೇಜಿಗೆ ಹೋಗುವ ಗಡಿಬಿಡಿಯಲ್ಲಿ ಟೇಬಲ್ ಮೇಲೆ ಇಟ್ಟು ಹೋಗಿದ್ದೆ. ಸಂಜೆ ಬಂದು ನೋಡುವಾಗ ಶಾಕ್! ನನ್ನ ಅಕ್ಕನ ಎರೆಡು ವರ್ಷದ ಪುಟ್ಟ ಮಗ ಸುಧಾದ ಪುಟಪುಟಗಳನ್ನು ಪ್ರತ್ಯೆಕವಾಗಿಸಿ ಮೂಲೆ-ಮೂಲೆಗೂ ಎಸೆದಿದ್ದ. ನನ್ನ ಬರಹವಿದ್ದ ಪುಟವಂತು ಚಿಂದಿ-ಚಿತ್ರಾನ್ನ!!
''ಯಾರೋ ಹೀಗ್ ಮಾಡಿದ್ದೂ…?'' ಅಂತ ಕೋಪದಿಂದ ಅವನನ್ನು ಗದರಿದೆ. ಅವನೋ ಬಹಳ ಹೆಮ್ಮೆಯಿಂದ ತಾನೇ ಎಂಬಂತೆ ಕಿಲಕಿಲ ನಕ್ಕ! ಅವನ ನಗುವಿನ ಮುಂದೆ ನನ್ನ ಸಿಟ್ಟು ಕರಗಿ ಹೋಯಿತು. ನನ್ನ ಬರಹದ ವಿಚಾರವನ್ನೇ ಮರೆತು ಅವನನ್ನು ಮುದ್ದಿಸತೊಡಗಿದೆ…
*********************

ಗೆಳೆಯರೆಲ್ಲ ಸೇರಿ ದಿನಾ ಸಂಜೆ ರಸ್ತೆ ಬದಿ ಪಾನಿಪುರಿ ತಿನ್ನುವುದು ನಮ್ಮ ರೂಡಿ. ಒಂದು ದಿನ ಹೀಗೇ ಹರಟುತ್ತಾ ತಿನ್ನುತ್ತಿದ್ದೆವು. ಸಾಮಾನ್ಯವಾಗಿ ಯಾವುದೇ ಹಳೆಯ ಪೇಪರಿನ ತುಂಡು ಸಿಕ್ಕರೂ ಅದನ್ನೂ ಬಿಡದೇ ಓದುವುದು ನನ್ನ ದುರಭ್ಯಾಸಗಳಲ್ಲೊಂದು. ಹೀಗೇ ಅವತ್ತು ಕೂಡಾ ಪಾನಿಪುರಿ ತಿಂದಾದಮೇಲೆ ಕೈ ಒರೆಸಲೆಂದು ಕೊಟ್ಟ ಪೇಪರಿನ ತುಂಡಿನ ಮೇಲೆ ಕಣ್ಣಾಡಿಸಿದೆ. ಸ್ಥಳೀಯ ಪತ್ರಿಕೆಯೊಂದರಲ್ಲಿ ನಾನೇ ಬರೆದ ಲೇಖನದ ಅರ್ಧ ಭಾಗ ಅಲ್ಲಿತ್ತು! ಛೆ! ನನ್ನ ವೈಚಾರಿಕ ಬರಹ ಕೈ ಒರೆಸಲು ಬಳಸಲ್ಪಡುತ್ತಿರುವುದೇ?? ಅಳು ಬರುವುದೊಂದೇ ಬಾಕಿ. ಸಣ್ಣ ಪುಟ್ಟ ಲೇಖನ-ಕವನ ಬರೆದು ದೊಡ್ಡ ಲೇಖಕನಂತೆ ಗೆಳೆಯರ ಮುಂದೆ ಫೋಸು ಕೊಡುತ್ತಿದ್ದವನಿಗೆ ಆದ ಅವಮಾನ ಅಷ್ಟಿಷ್ಟಲ್ಲ… ಸ್ನೇಹಿತರೆಲ್ಲರೂ ಸಮಾಧಾನ ಹೇಳಿದರೂ ರಾತ್ರಿಯೆಲ್ಲ ಮನದಲ್ಲಿ ಅದೇ ಯೋಚನೆ.. ಹಾಗಿದ್ದರೆ ನಾನು ಬರೆವುದೇತಕ್ಕೆ? ಛೇ! ಇನ್ನು ಯಾವತ್ತೂ ಬರೆಯಬಾರದೆಂಬ ಕಠಿಣ ನಿರ್ಧಾರ ಮಾಡಿ ಮಲಗಿದೆ…
ಆದರೆ ನನ್ನ ಅಕ್ಷರ ಸನ್ಯಾಸ ಎರೆಡೆ ವಾರಕ್ಕೆ ಕೊನೆಗೊಂಡಿದ್ದು ಮಾತ್ರ ವಿಪರ್ಯಾಸ…!!
ಶುಕ್ರವಾರ, ಆಗಸ್ಟ್ 20, 2010
ಭಾನುವಾರ, ಜುಲೈ 4, 2010
ಕಲ್ಲು ಹೃದಯ ಹೇಳಿದ್ದು...
ಬೇಕಿಲ್ಲವೆನಗೆ
ಅ ಗರ್ಭ ಗುಡಿಯೊಳಗಿನ
ದುರ್ಭರ ಬದುಕು
ಮಲಗಿರುವೆ ಇಲ್ಲಿಯೇ
ಮರದ ಬುಡದಲ್ಲಿ
ಬಿಸಿಲಿಗೆ ಮೈಯೊಡ್ಡಿಯೂ ಆರಾಮವಾಗಿ...
ಯಾರಿಗೆ ಬೇಕು ಹೇಳಿ
ಇಲ್ಲಿಂದ ಉರುಳಿಸಿಕೊಂಡು
ಮತ್ತೆಲ್ಲಿಗೋ ತೆರಳಿ ನೀರಲ್ಲಿ ಮುಳುಗಿ
ಅವರಿಗೆ ಬೇಕಾದ ಹಾಗೆ
ಕೆತ್ತಿಸಿಕೊಂಡು
ಸತ್ತು ಹೋಗುವ ಬದುಕು...?
ಇದ್ದು ಬಿಡುವೆ ಇಲ್ಲಿಯೇ
ಗಾಳಿಗೆ ಮೈದೆರೆದು
ನಿಧ-ನಿಧಾನವಾಗಿ ಸವೆ-ಸವೆದು...
ಬೇಡವೆನಗೆ ಆ ನಿಮ್ಮ
ಸುಗಂಧ, ಹಾರ, ಧೂಪ, ನೈವೇದ್ಯ
ಪಂಚಾಮೃತದ ಅಭಿಷೇಕ, ಗೊಣ-ಗೊಣ ಮಂತ್ರ
ಸುತ್ತ ಗೋಡೆ ಕಟ್ಟಿ
ಕತ್ತಲು ಮಾಡಿ ಮತ್ತೆ ಹಚ್ಚುವ ದೀಪ
ಆರತಿಯ ಉಸಿರುಗಟ್ಟಿಸುವ ಹೊಗೆ
ಸಾಕೆನಗೆ ಈ ಬೆಳಕು
ಅರಳಿದ ಸಂಪಿಗೆಯ ಘಮ
ಆಗಾಗ ತೊಳೆವ ಮಳೆ
ಹಕ್ಕಿಗಳಿಂಚರ
ಮೈಮೆಲೆಹರಿವ ಇರುವೆಯ ಮಧುರ ಸ್ಪರ್ಶ...
ಬೇಕಿಲ್ಲವೆನಗೆ ಅಡ್ಡಡ್ಡ ಬೀಳುವ ಭಕ್ತಾಭಿಮಾನಿಗಳು
ಆ ದುಡ್ಡು ಆ ಮಂತ್ರ ಆ ಗವಿ ಆ ಅಂಧಕಾರ..
ಇಲ್ಲೇ ಬಿದ್ದಿರುವೆ ಹೀಗೆ
ಅನಾಥವಾಗಿ ಸವೆಯುತ್ತ
ಸವಿಯುತ್ತ
ಮುಂಜಾನೆಯ ಸೂರ್ಯೋದಯ
ಸಂಜೆಯ ಸುಂದರ ರಾಗ..
ನಿಸರ್ಗದ ನಿನಾದವ ಆಲಿಸುತ್ತ
ಹೀಗೆ ಬಿದ್ದಿರಲು ಬಿಡಿ ಇಲ್ಲೇ
ಎಂದೆಂದಿಗೂ...
ಶುಕ್ರವಾರ, ಜುಲೈ 2, 2010
ರನ್ನ ಚರಿತ
ಹತ್ತನೆಯ ಶತಮಾನದೋಳ್
ತಾನ್ ಬರೆದ
ಮಹಾಭಾರತದ
‘ಸಾಹಸ ಭೀಮ ವಿಜಯ೦’
ಎಂಬ ಕೃತಿಯ೦
ಪ್ರಸ್ತುತ
ಇಪ್ಪತ್ತೊ೦ದನೆಯ ಶತಮಾನದೋಳ್
‘ನವಭಾರತ’ವೆಂಬ ಪೆಸರೋಳ್
ಚಲನಚಿತ್ರವಾಗಿರ್ಪದೆ೦ಬ
ಮಿಥ್ಯ ಸುದ್ದಿಯಂ ಕೇಳಿ
ತಡಬಡಿಸಿ ಸ್ವರ್ಗದಿಂದಿಳಿದು
ಬ೦ದನಾರನ್ನ ಮಹಾಶಯನ೦
ಭುವಿಯಲವತರಿಸಿ
ತನ್ನ ನಾಡಾಲ್ ಇರ್ಪ ಒ೦ದು
ಸಿನೆಮಾ ಥಿಯೇಟರ೦ ಪೊಕ್ಕು
ಆ ಚಲನಚಿತ್ರ೦ ನೋಳ್ಪೆ
ಆ ಲಲನೆಯರ ಕಂಡು
ಅರೆಕ್ಷಣದಲ್ಲಿ
ಹೆದರಿ-ಬೆದರಿ ಬೆವರ್ಪಲಾಗಿ
ಪ್ರಜ್ಞೆ ತಪ್ಪಿ ಭುವಿಗುರುಳಿ
ಮತ್ತೆ ಮಣ್ಣಾದನಾ ರನ್ನ ಭೂಪ೦…!
ವರ್ಣನೆ…
ಎಲ್ಲ ಸುಂದರಿಯರಂತೆ
ನನ್ನವಳಿಗೂ ಎರೆಡು ಕಣ್ಣು,
ಚಂದಿರನ ಮೇಲಿನ ಕಪ್ಪು ಕಲೆಗಳ ಹಾಗೆ !
ಮತ್ತೆರೆಡು ಕಿವಿ,ಅವೋ ಗಜದಗಲ…
ಮೂಗು…?
ಅದು ಒಂದೇ
ಅದರಲ್ಲಿದೆ ಎರೆದು ರಂಧ್ರ,
ಇಲಿಯ ಬಿಲದ ಹಾಗೆ…!
ಮತ್ತ್ತೆ ಯಥಾ ಪ್ರಕಾರ
ತುಟಿ ತೊಂಡೆಯ ಹಾಗೆ
ಹಲ್ಲು ಕೆಂಪು-ಕೆಂಪು ಹೈಬ್ರಿಡ್ ದಾಳಿಂಬೆಯ ಹಾಗೆ…!
ಗಲ್ಲ ಕರಿ ಇರುವೆ ಮುಟ್ಟಿದ ಬೆಲ್ಲದ ಹಾಗೆ…!
ಕೇಶರಾಶಿಯೋ …
ಬೆಳ್ಳಿ ಮೋಡದ ಹಾಗೆ…!
ಮತ್ತೆ ನೋಡದ ಹಾಗೆ….!!!!
ಹುಡುಗರಿಗೆ ಟೈಮೇ ಇಲ್ಲ…!
ಏನ್ಮಾಡೋಣ ಹೇಳಿ
ನಮ್ಮ ಹುಡುಗರಿಗೆ
ಓದಲು ಟೈಮೇ ಇಲ್ಲ…
ದಿನಕ್ಕೆ ಬರೀ ಇಪ್ಪತ್ನಾಲ್ಕು ಗಂಟೆ
ವಾರಕ್ಕೆ ಏಳೇ ಏಳು ದಿನ
ಇಷ್ಟೇನೇ…ಸಾಕಾಗೋದಿಲ್ಲ
ಎಂಟು ಗಂಟೆಗೆ
ಮೊದಲೇ ಎದ್ದರೆ
ಮುಂಜಾನೆ ಸೂರ್ಯನಿಗೆ ಅವಮಾನ
ಸ್ನಾನ,ತಿಂಡಿ
ಒಂದಿಷ್ಟು ಹೊತ್ತು ಕನ್ನಡಿ
ಲೆಕ್ಚರು ಬರುವ ಮೊದಲೇ ಕ್ಲಾಸಲ್ಲ್ಲಿ ಕೂರುವುದು ಅಪಮಾನ!
ಐದೇ ಐದು ನಿಮಿಷ
ತಡವಾಯ್ತು ಕ್ಲಾಸಿಗೆ, ಅಡ್ಡಿಯಿಲ್ಲ
ಮತ್ತೆ ಇದ್ದೆ ಇದೆಯಲ್ಲ ದಿಂಬಿಲ್ಲದ ನಿದ್ದೆ…?!
ಆಗಾಗ ಬರುವ ಬೇರೆ ಲೆಕ್ಚರು
ಹೆಸರಿಗಷ್ಟೇ ಪ್ರಾಕ್ತಿಕಲ್ಲು
ಎಲ್ಲ ಕನಸಿನ ಹಾಗೆ ಇದ್ದಿದ್ದೆ…!
ಮದ್ಯಾಹ್ನ ಎರೆಡು ಚಪಾತಿ, ಮುದ್ದೆ, ಅನ್ನ-ಸಾಂಬಾರು
ಮತ್ತೆ ಕ್ಲಾಸಲ್ಲಿ ಕಣ್ ಬಿಟ್ಟೇ ಗಡದ್ದಾಗಿ ಗೊರೆಕೆರಹಿತ ನಿದ್ದೆ
ಮತ್ತೆ ಆಗಾಗ ಆಕಳಿಕೆ
ಸಂಜೆ ನಾಲ್ಕೂವರೆಗೆ ಜೈಲಿಂದ ಬಿಡುಗಡೆ
ಮತ್ತೊಂದಿಷ್ಟು ಹೊತ್ತು ಆಡಲಿಕ್ಕೆ
ಆಮೇಲೆ ಒಂದಿಷ್ಟು ಬಜ್ಜಿ,ಗೋಭಿ
ಆಮ್ಲೇಟು, ನೂಡಲ್ಸು
ಅಂಗಡಿಯವನನ್ನು ದಿನಾ ಉದ್ದಾರ ಮಾಡದಿರಲಾದೀತೇ?
ಎಂಟು ಗಂಟೆಗೆ ಊಟ
ನಂತರ ಒಂದೆರೆಡು ಹಾಲಿವುಡ್ ಸಿನಿಮಾ ನೋಟ
ಮತ್ತೆ ಹುಡುಗಿಯರ ಜೊತೆ ಗಂಟೆಗಟ್ಟಲೆ ಹರಟೆ
ಸಿಕ್ಕ-ಸಿಕ್ಕವರಿಗೆಲ್ಲಾ ಮೆಸೇಜು…
ಮತ್ತೆ ಗೆಳೆಯರ ರೂಮಿಗೆ ತೆರಳಿ
ಅವರಿವರ ಬಗ್ಗೆ ಮಾತುಕತೆ-ಪುರಾಣ
ಇನ್ನೊಬ್ಬರ ಪ್ರೀತಿಯ ವಿಚಾರ-ಇವರ ಬಾಯಿಗೆ ಆಹಾರ…!
ದಿನವಿಡೀ ಬಳಲಿ
ಮೆತ್ತನೆಯ ಹಾಸಿಗೆಯಲಿ ಉರುಳಿ
ಕಣ್ಮುಚ್ಚುತ್ತಿದ್ದಂತೆಯೇ ನಿದ್ರಾದೇವಿಗೆ ಹಾರ..!
ಇನ್ನು ಭಾನುವಾರಗಳೋ…
ಲೇಟಾಗಿ ಎದ್ದು,ಬಟ್ಟೆ-ಗಿಟ್ಟೆ ಒಗೆದು
ಗಡಿಬಿದಿಯಲ್ಲೇ ಓಟ;
ನೆಚ್ಚಿನ ಹೀರೋನ ಹೊಸ ಸಿನೆಮಾ
ಕೂಡಲೇ ನೋಡದಿದ್ದರೆ
ಗಂಟಲಲ್ಲಿಳಿದೀತೆ ಊಟ…?!
ಲೈಬ್ರರಿ ಇರುವುದೋ
ಶುಕ್ರವಾರದ ಸಿನೆಮಾ ರಂಜನೆ
ನೋಡ(ಓದ)ಲಿಕ್ಕೆ…
ಆಗಾಗ ವಕ್ಕರಿಸುವ ಪರೀಕ್ಷೆಗಳೋ
ದಿನಾ ಸಾಯೋರಿಗೆ ಅಳುವುದೆತಕ್ಕೆ?
ಛೆ…! ಪಾಪ
ಏನ್ಮಾಡೋಣ ಹೇಳಿ
ನಮ್ಮ ಹುಡುಗರಿಗೆ
ಓದಲು ಟೈಮೇ ಇಲ್ಲ…!!!



